ಸ್ಯಾಂಡಲ್ ವುಡ್ ಡ್ರಗ್ ಕೇಸ್: ನಟಿ ರಾಗಿಣಿ ದ್ವಿವೇದಿ ಜೈಲುವಾಸ ಕೊನೆಗೂ ಅಂತ್ಯ, ಸುಪ್ರೀಂ ಕೋರ್ಟ್ ನಿಂದ ಜಾಮೀನು
ಡ್ರಗ್ಸ್ ಮಾರಾಟ ಜಾಲ ದಂಧೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ.
Published: 21st January 2021 11:50 AM | Last Updated: 21st January 2021 01:58 PM | A+A A-

ನಟಿ ರಾಗಿಣಿ ದ್ವಿವೇದಿ (ಸಂಗ್ರಹ ಚಿತ್ರ)
ನವದೆಹಲಿ: ಡ್ರಗ್ಸ್ ಮಾರಾಟ ಜಾಲ ದಂಧೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಜಾಮೀನು ಸಿಕ್ಕಿದೆ.
ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ನವೀನ್ ಸಿನ್ಹಾ ಮತ್ತು ಕೆ ಎಂ ಜೋಸೆಫ್ ಅವರ ನೇತೃತ್ವದ ನ್ಯಾಯಪೀಠ, ಕಳೆದ ನವೆಂಬರ್ 3ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬದಿಗೊತ್ತಿ ಗುರುವಾರ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಸೆಷನ್ಸ್ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು.
ಅನೇಕ ಸೆಲೆಬ್ರಿಟಿಗಳಿಗೆ ಮತ್ತು ಪ್ರಮುಖ ವ್ಯಕ್ತಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದವರೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಆರೋಪಿ, ರಾಗಿಣಿಯ ಗೆಳೆಯ ಎಂದು ಹೇಳಲಾಗುತ್ತಿರುವ ರವಿಶಂಕರ್ ನೀಡಿದ್ದ ಹೇಳಿಕೆ ಮೇಲೆ ಕಳೆದ ಸೆಪ್ಟೆಂಬರ್ 4ರಂದು ರಾಗಿಣಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಯಲಹಂಕದಲ್ಲಿರುವ ಅವರ ಅಪಾರ್ಟ್ ಮೆಂಟ್ ನಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದರು.
ನಟಿ ರಾಗಿಣಿ ಪಾರ್ಟಿಯಲ್ಲಿ ಡ್ರಗ್ ಸೇವಿಸಿರಬಹುದೇ ಹೊರತು ಮನೆಯಲ್ಲಿ ಡ್ರಗ್ ಸಿಕ್ಕಿಲ್ಲ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು. ಈ ಆಧಾರದ ಮೇಲೆ ಜಾಮೀನು ಸಿಕ್ಕಿದೆ. ರಾಗಿಣಿ ಜೊತೆಗೆ ಅವರ ಮಾಜಿ ಗೆಳೆಯ ಶಿವ ಪ್ರಕಾಶ್ ಗೂ ಜಾಮೀನು ನೀಡಲಾಗಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ಎರಡು ಬಾರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿತ್ತು.
Supreme Court grants bail to Kannada film actress, Ragini Dwivedi, arrested for her alleged involvement in a Sandalwood drugs case pic.twitter.com/mnnmC8QID9
— ANI (@ANI) January 21, 2021
ಇದೇ ಪ್ರಕರಣದಲ್ಲಿ ಬಂಧಿಯಾಗಿದ್ದ ಮತ್ತೊಬ್ಬ ನಟಿ ಸಂಜನಾ ಗಲ್ರಾಣಿಗೆ ಕಳೆದ ಡಿಸೆಂಬರ್ 11ರಂದು ಅನಾರೋಗ್ಯ ನೆಪದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.