
ಕನ್ನಡ ರ್ಯಾಪ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ: ಹಿಂದಿ, ಇಂಗ್ಲೀಷ್ ನಷ್ಟೇ ಜನಪ್ರಿಯತೆ!
ರ್ಯಾಪ್ ಸಾಂಗ್ ಗಳ ಕಾಲದಲ್ಲಿ ಕನ್ನಡ ರ್ಯಾಪ್ ಗಳಿಗೂ ಇತ್ತೀಚಿನ ಬೇಡಿಕೆ ಹೆಚ್ಚಾಗುತ್ತಿದೆ.
ಕನ್ನಡದಲ್ಲಿ ರ್ಯಾಪರ್ ಗುಬ್ಬಿ, ರಘು ವೈನ್, ವಿಘ್ನೇಶ್ ಶಿವಾನಂದ್ (ಬ್ರೋಧ ವಿ) ಕನ್ನಡದ ಉದಯೋನ್ಮುಖ
ರ್ಯಾಪರ್ ಗಳು.ಈ ತಂಡ ಇತ್ತೀಚೆಗಷ್ಟೇ ವೈನ್ಕೋ ಹಾಗೂ ಫ್ಲೆಕ್ಸ್ ಎಂಬ ಹಿಟ್ ರ್ಯಾಪ್ ಹಾಡನ್ನು ಬಿಡುಗಡೆ ಮಾಡಿತ್ತು. ಕನ್ನಡದ ರ್ಯಾಪರ್ ಗುಬ್ಬಿ ತಮ್ಮ ಇತ್ತೀಚಿನ ಚಿತಾಲ್ ಪತಾಲ್ ರ್ಯಾಪ್ ಹಾಡನ್ನು ಬಿಡುಗಡೆ ಮಾಡಿದ್ದರು. ಈಗ ಇದೇ ತಂಡ ಮತ್ತೊಂದು ರ್ಯಾಪ್ ಯೋಜನೆಗೆ ಸಿದ್ಧತೆ ನಡೆಸಿದೆ.
ಕನ್ನಡದಲ್ಲಿ ರ್ಯಾಪ್ ಹಾಡುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನಪ್ರಿಯತೆಯೂ ಸ್ಥಳೀಯ ಕೇಳುಗರನ್ನೂ ದಾಟಿ ಬೆಳೆಯುತ್ತಿದೆ.
ವಿಘ್ನೇಶ್ ಶಿವಾನಂದ್ (ಬ್ರೋಧ ವಿ), 2008 ರಿಂದಲೂ ರ್ಯಾಪ್ ನಲ್ಲಿ ತೊಡಗಿಸಿಕೊಂಡಿದ್ದು ಗಲ್ಲಿ ಬಾಯ್ ಸಿನಿಮಾ ತಮ್ಮ ರ್ಯಾಪ್ ಗಳಿಗೆ ಜನಪ್ರಿಯತೆ ತಂದುಕೊಟ್ಟಿತು ಎನ್ನುತ್ತಾರೆ.
ಬೆಂಗಳೂರಿನಂತಹ ಬಹುಸಂಸ್ಕೃತಿ ನಗರಗಳಲ್ಲಿ ಇಂಗ್ಲೀಷ್ ಭಾಷೆಗೆ ಹೆಚ್ಚಿನ ಮಹತ್ವ ಸಿಗುತ್ತದೆ. ಆದರೆ ಗಲ್ಲಿ ಬಾಯ್ ಸಿನಿಮಾ ಕನ್ನಡದ ರ್ಯಾಪ್ ಗೂ ಬೇಡಿಕೆ ಉಂಟುಮಾಡುವಂತಹ ವಾತಾವರಣ ನಿರ್ಮಿಸಿತು ಎನ್ನುತ್ತಾರೆ ಬ್ರೋಧ
ಈಗಂತೂ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುಗರನ್ನು ಸುಲಭವಾಗಿ ತಲುಪಬಹುದಾಗಿದ್ದು, ಯೂಟ್ಯೂಬ್, ಸಾಮಾಜಿಕ ಜಾಲತಾಣಗಳು ಸಹಕಾರಿಯಾಗಿವೆ, ಆದರೆ ಇದರಿಂದ ಹಣಗಳಿಕೆ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಯಾವುದೇ ಸುಲಭದ ಮಾರ್ಗಗಳಿಲ್ಲ ಎಂದು ಹೇಳಿದ್ದಾರೆ.
ಮಾತೃಭಾಷೆಯಲ್ಲಿ ಏನನ್ನಾದರೂ ಮಾಡಿದರೆ ಅದು ಹೆಮ್ಮೆಯ ಸಂಗತಿಯಾಗಿರುತ್ತದೆ. ಜನರನ್ನು ಸಾಹಿತ್ಯದೊಂದಿಗೆ ಬೆಸೆಯುವುದೂ ಸಹ ಮುಖ್ಯವಾಗುತ್ತದೆ ಎನ್ನುತ್ತಾರೆ ಬೆಂಗಳೂರಿನಲ್ಲಿರುವ ಕೆಲವೇ ಕೆಲವು ಮಂದಿ ಮಹಿಳಾ ರ್ಯಾಪರ್ ಗಳಲ್ಲಿ ಒಬ್ಬರಾದ ಮಧುರಾ ಗೌಡ (EmmJee).
ಕೇಳುಗರು ಯುವ ವಯಸ್ಕರಾಗಿರುತ್ತಾರೆ ಆದ ಕಾರಣ ಸ್ಥಳೀಯ ಭಾಷೆಯಲ್ಲಿ ರ್ಯಾಪ್ ಹಾಡುಗಳನ್ನು ಮಾಡುವಾಗ ಭಾಷೆಯಲ್ಲಿ ಕೆಲವು ನಿಯಂತ್ರಣ ವಿಧಿಸಿಕೊಳ್ಳಬೇಕಾಗುತ್ತದೆ. ಭಾಷೆಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ, ನನ್ನ ರ್ಯಾಪ್ ಗಳಲ್ಲಿ ಗಾದೆಗಳನ್ನು ಹೆಚ್ಚು ಬಳಕೆ ಮಾಡುತ್ತೇನೆ, ಅದು ಹಾಸ್ಯಭರಿತವಾಗಿಯೂ ಇರಲಿದೆ ಎನ್ನುತ್ತಾರೆ ರ್ಯಾಪರ್ ಗುಬ್ಬಿ
ಈ ಹಿಂದೆ ಹಿಂದಿ- ಇಂಗ್ಲೀಷ್ ನಷ್ಟು ಕನ್ನಡದ ರ್ಯಾಪ್ ಗಳಿಗೆ ಬೇಡಿಕೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡದ ರ್ಯಾಪ್ ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಅತ್ಯುತ್ತಮ ಬ್ರೇಕ್ ಸಿಕ್ಕಿತ್ತು. ಆಗ ಬರೆದಿದ್ದ ರ್ಯಾಪ್ ಗಳನ್ನು ಈಗ ಬಿಡುಗಡೆ ಮಾಡುತ್ತಿದ್ದೇನೆ, ಚಿಥಾಲ್ ಪಥಾಲ್ ರ್ಯಾಪ್ ಹಾಡಿಗೆ ಈ ವರೆಗೂ ಯೂಟ್ಯೂಬ್ ನಲ್ಲಿ 3 ಲಕ್ಷ ವೀಕ್ಷಣೆ ದೊರೆತಿದೆ.
ರ್ಯಾಪ್ ಸಂಪೂರ್ಣವಾಗಿ ಕನ್ನಡದಲ್ಲಿದ್ದರೂ ಆಕರ್ಷಕ ಬೀಟ್ಸ್, ರಾಗಗಳಿಂದ ಕನ್ನಡೇತರ ಕೇಳುಗರನ್ನೂ ತಲುಪಬಹುದಾಗಿದೆ ಎನ್ನುತ್ತಾರೆ ರ್ಯಾಪರ್ ಗುಬ್ಬಿ