ಹೊಟೇಲ್ ಸಪ್ಲೈಯರ್ ಮೇಲೆ ರೇಗಿದ್ದು ನಿಜ, ಹಲ್ಲೆ ಮಾಡಿಲ್ಲ; ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿಲ್ಲ: ನಟ ದರ್ಶನ್
ನನ್ನ ವಿರುದ್ಧ ಬ್ಯಾಂಕಿನಲ್ಲಿ ಸಾಲ ಪಡೆಯುವ ವಿಚಾರದಲ್ಲಿ ವಂಚನೆಯೆಸಗಲು ಯತ್ನಿಸಿದ ಕೇಸಿನಲ್ಲಿ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ನಾವು ಯತ್ನಿಸುತ್ತಿಲ್ಲ ಎಂದು ಸ್ಯಾಂಡಲ್ ವುಡ್ ನಟ ದರ್ಶನ್ ಹೇಳಿದ್ದಾರೆ.
Published: 15th July 2021 01:39 PM | Last Updated: 15th July 2021 01:47 PM | A+A A-

ನಟ ದರ್ಶನ್ ಕಳೆದ ವಾರ ಮೈಸೂರಿನಲ್ಲಿ ಪೊಲೀಸರಿಗೆ ವಂಚನೆ ಪ್ರಕರಣದಲ್ಲಿ ದೂರು ನೀಡಲು ಬಂದಿದ್ದ ಸಂದರ್ಭ
ಬೆಂಗಳೂರು: ನನ್ನ ವಿರುದ್ಧ ಬ್ಯಾಂಕಿನಲ್ಲಿ ಸಾಲ ಪಡೆಯುವ ವಿಚಾರದಲ್ಲಿ ವಂಚನೆಯೆಸಗಲು ಯತ್ನಿಸಿದ ಕೇಸಿನಲ್ಲಿ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ನಾವು ಯತ್ನಿಸುತ್ತಿಲ್ಲ, ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಅವರಿಗೆ ಸ್ವಲ್ಪ ಸಮಯ ನೀಡೋಣ,ನಾವು ಕಾಯುತ್ತಿದ್ದೇವೆ, ಈ ಪ್ರಕರಣದಲ್ಲಿ ಹಲವು ರೆಕ್ಕೆ-ಪುಕ್ಕಗಳು ಹುಟ್ಟಿಕೊಳ್ಳುತ್ತಿವೆ ಎಂದು ಸ್ಯಾಂಡಲ್ ವುಡ್ ನಟ ದರ್ಶನ್ ಹೇಳಿದ್ದಾರೆ.
ಇಂದು ಬೆಳಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ನಟ ದರ್ಶನ್ ವಿರುದ್ಧ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದರು, ಸಾಮಾನ್ಯ ಬಡ ಜನರಿಗೆ ಸೆಲೆಬ್ರಿಟಿಗಳಿಂದ ಅನ್ಯಾಯವಾಗುತ್ತಿದೆ, ತನಿಖೆ ನಡೆಸಿ ಎಂದು ದೂರು ನೀಡಿದ್ದರು. ಅದಕ್ಕೆ ಗೃಹ ಸಚಿವರು ತನಿಖೆಗೆ ಆದೇಶ ನೀಡಿದ್ದಾರೆ. ಇದಾದ ಬಳಿಕ ಸಂದೇಶ್ ನಾಗರಾಜ್ ಅವರ ಪುತ್ರ ಕೂಡ ತಮ್ಮ ಹೊಟೇಲ್ ನಲ್ಲಿ ಸಣ್ಣ ಗಲಾಟೆಯಾಗಿದ್ದು ನಿಜ, ದರ್ಶನ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್, ಜೂನ್ 16ನೇ ತಾರೀಖು ಅರುಣ ಕುಮಾರಿಯವರು ನಮ್ಮ ಮನೆಗೆ ಬಂದಿದ್ದ ಸಂದರ್ಭದಲ್ಲಿಯೇ ನಿಮ್ಮ ತಪ್ಪು ಇಲ್ಲವೆಂದಾದರೆ ಇಡೀ ಪ್ರಪಂಚ ತಿರುಗಿಬಿದ್ದರೂ ನಾನು ನಿಮ್ಮ ಬೆನ್ನ ಹಿಂದೆ ನಿಲ್ಲುತ್ತೇನೆ ಎಂದು ಹೇಳಿದ್ದೆ. ಮಹಿಳೆಯದ್ದು ತಪ್ಪಿಲ್ಲವೆಂದಾದರೆ ನಾನು ಆಕೆಗೆ ನ್ಯಾಯ ಸಿಗಬೇಕೆಂದೇ ಕೇಳುತ್ತೇನೆ. ಊಹಾಪೋಹಗಳನ್ನು ಬಿಟ್ಟುಬಿಡಿ, ನಾನು ಹಿಂದೆ ಹೇಳಿದಂತೆ ಈ ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದಿದ್ದು ಇಂದು ಗೊತ್ತಾಗುತ್ತಿದೆ. ಎರಡು ವರ್ಷದ ಹಿಂದೆ ಯಾವುದೋ ಸಿನೆಮಾಗೆ ಸಂಬಂಧಪಟ್ಟಂತೆ ಸಂದರ್ಶನ ನೀಡಲು ಕರೆ ಮಾಡಿದ್ದಾಗ ನಾನು ಸ್ವಲ್ಪ ಕೋಪದಲ್ಲಿ ಮಾತನಾಡಿದೆ ಎಂದು ಇದೇ ಇಂದ್ರಜಿತ್ ಅವರು ಏನೋ ಟೆನ್ಷನ್ ನಲ್ಲಿ ಮಾತನಾಡಿದ್ದೀರ ಎಂದಿದ್ದರು, ಇಂದು ಹೀಗೆ ಮಾತನಾಡುತ್ತಿದ್ದಾರೆ ಎಂದರು.
ನನ್ನದು ಸಂದೇಶ್ ಅವರದ್ದು ಸಾವಿರಾರು ಗಲಾಟೆಗಳಿರುತ್ತವೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಂದ್ರಜಿತ್ ಲಂಕೇಶ್ ಅವರು ನಿರ್ದೇಶಕರು, ನನಗೂ ಒಂದು ಸಿನೆಮಾ ನಿರ್ದೇಶನ ಮಾಡಿದ್ದಾರೆ, ಅವರಿಗಿರುವ ಮೂಲಗಳಿಂದ ತನಿಖೆ ನಡೆಸಲಿ, ನನ್ನ ಮೇಲೆ ಆರೋಪ ಮಾಡಲಿ, ಆದರೆ ನಾನು ಹಲ್ಲೆ ಮಾಡಿದ್ದೇನೆಂಬುದು ಸಾಬೀತು ಆಗಿಲ್ಲವಲ್ಲ, ಇದು ರೆಕ್ಕೆಪುಕ್ಕದ ಮಾತುಗಳು ಎಂದರು.
ಹಲ್ಲೆ ಅಂದರೆ ಮುಖಕ್ಕೆ, ದೇಹಕ್ಕೆ ಹೊಡೆದು ರಕ್ತ ಬಂದಿದೆಯಂತೆಯೇ, ಎಲ್ಲಾದರೂ ಅವರಿಗೆ ಸಾಕ್ಷ್ಯ ಸಿಕ್ಕಿದರೆ ತೋರಿಸಲಿ, ಅವರ ತನಿಖೆ ಅವರು ಮಾಡಿಕೊಳ್ಳಲಿ, ಇದು ಇತ್ತೀಚೆಗೆ ಆದ ಘಟನೆ ಎಂದು ಅವರು ಹೇಳುತ್ತಾರೆ, ಈಗ ಒಂದು ವಾರದಿಂದ ನಾನು ಎಲ್ಲಿದ್ದೇನೆ ಎಂದು ನಿಮಗೆಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಸೆಲೆಬ್ರಿಟಿ ಪಕ್ಕದಲ್ಲಿಟ್ಟು ನಾನು ಕೂಡ ಮನುಷ್ಯ, ದಿನಪೂರ್ತಿ ನಾನು ಸೆಲೆಬ್ರಿಟಿಯಂತೆ ನಾಟಕ ಮಾಡಿಕೊಂಡು ಇರಲು ಸಾಧ್ಯವಿಲ್ಲ. ನಾನು ಸಹಜ ಜೀವನ ನಡೆಸುವವನು ಎಂದರು.