ಹಾಡಿನಲ್ಲಿ ಮೈಸಮ್ಮ ದೇವಿಗೆ ಗಾಯಕಿ ಮಂಗ್ಲಿಯಿಂದ ಅವಮಾನ: ಭಕ್ತರಿಂದ ಆಕ್ಷೇಪ, ಕ್ಷಮೆ ಕೇಳಲು ಆಗ್ರಹ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನ 'ಕಣ್ಣೇ ಅಧಿರಿಂದಿ' ಹಾಡಿನ ಮೂಲಕ ಖ್ಯಾತಿಗಳಿಸಿದ ಗಾಯಕಿ ಮಂಗ್ಲಿಯ ಹೊಸ ಹಾಡೊಂದು ವಿವಾದಕ್ಕೆ ಸಿಲುಕಿದೆ.
ಮಂಗ್ಲಿ
ಮಂಗ್ಲಿ

ಹೈದರಾಬಾದ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನ 'ಕಣ್ಣೇ ಅಧಿರಿಂದಿ' ಹಾಡಿನ ಮೂಲಕ ಖ್ಯಾತಿಗಳಿಸಿದ ಗಾಯಕಿ ಮಂಗ್ಲಿಯ ಹೊಸ ಹಾಡೊಂದು ವಿವಾದಕ್ಕೆ ಸಿಲುಕಿದೆ.

ಸಿನಿಮಾ ಹಾಡುಗಳ ಜತೆಗೆ ಜನಪದ ಶೈಲಿಯ ಹಾಡುಗಳನ್ನು ಹಾಡುವುದನ್ನು ರೂಢಿಸಿಕೊಂಡಿರುವ ಮಂಗ್ಲಿ, ತೆಲುಗು ಸಂಸ್ಕೃತಿಯ ಯಾವುದೇ ಹಬ್ಬ ಬಂತೆಂದರೆ ಅದಕ್ಕೆ ಸೂಕ್ತವಾಗುವ ಜನಪದ ಹಾಡೊಂದನ್ನು ಹಾಡಿ ವಿಡಿಯೋ ಬಿಡುಗಡೆ ಮಾಡುತ್ತಾ ಬರುತ್ತಿದ್ದಾರೆ ಮಂಗ್ಲಿ.

ಅಂತೆಯೇ 'ಬೋನಾಲು ಪಂಡುಗ'ದ ಈ ಸಂದರ್ಭದಲ್ಲಿ ಇದಕ್ಕೆ ತಕ್ಕಂತೆ ಹಾಡೊಂದನ್ನು ಮಂಗ್ಲಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದು, ಈ ಹಾಡು ವಿವಾದಕ್ಕೆ ಕಾರಣವಾಗಿದೆ.

ಆರೋಪಗಳಿಗೆ ಮಂಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಹಾಡನ್ನು 44 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಹಾಡಿಗೆ ಸಾಹಿತ್ಯವನ್ನು ರಾಮಸ್ವಾಮಿ ಬೆರದಿದ್ದಾರೆ, ಹಾಡಿರುವುದು ಮಂಗ್ಲಿ, ಸಂಗೀತ ಸಂಯೋಜನೆ ರಾಕೇಶ್ ವೆಂಕಟಾಪುರ, ನೃತ್ಯ ನಿರ್ದೇಶನ ಢೀ ಖ್ಯಾತಿಯ ಪಂಡು, ನಿರ್ದೇಶನ ದಾಮು ರೆಡ್ಡಿ ಮಾಡಿದ್ದಾರೆ.

ಬೋನಾಲು' ಹಾಡಿನಲ್ಲಿನ ಕೆಲವು ಸಾಲುಗಳ ಬಗ್ಗೆ ಗ್ರಾಮ ದೇವತೆ ಮೈಸಮ್ಮ ಭಕ್ತರು ತಕರಾರು ಎತ್ತಿದ್ದಾರೆ. ಹಾಡಿನಲ್ಲಿನ ಕೆಲವು ಸಾಲುಗಳು ದೇವಿಯ ಮಹಿಮೆಯನ್ನು ವಿಮರ್ಶೆ ಮಾಡುವ ರೀತಿಯಾಗಿವೆ. ದೇವಿಯನ್ನು ಬೈಯ್ಯುವ ರೀತಿಯಲ್ಲಿ ಇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.

ಭಕ್ತರು ದೇವರೊಂದಿಗೆ ಜಗಳವಾಡುವ, ಪ್ರೀತಿಯಿಂದ ಬೈಯ್ಯುವ ಹಾಡುಗಳು ಜನಪದದಲ್ಲಿ ಸಾಕಷ್ಟಿವೆಯಾದರೂ, 'ಮರದ ಕೆಳಗೆ ಸಂಬಂಧಿಗಳಂತೆ ಕೂತುಬಿಟ್ಟಿದ್ದೀಯ', 'ಬೊಂಬೆಯಂತೆ ಅಲುಗದೇ ಇದ್ದೀಯ' ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿವೆ. ಈ ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿವೆ. ದೇವಿಯು, ಭಕ್ತರನ್ನು ಕಾಯುವ ಕಾರ್ಯವನ್ನು ಮಾಡದೆ ಸುಮ್ಮನೆ ಇದ್ದುಬಿಟ್ಟಿದ್ದಾಳೆ ಎಂಬ ಅರ್ಥ ಬರುವ ಸಾಲುಗಳು ಹಾಡಿನಲ್ಲಿದ್ದು ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಮಂಗ್ಲಿ, ಇನ್ನೂ ಕೆಲವರೊಂದಿಗೆ ಸೇರಿಕೊಂಡು ಹಾಡಿಗೆ ನೃತ್ಯ ಮಾಡಿದ್ದಾರೆ. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದೆ. ನೃತ್ಯ ಮಾಡುವುದು ಸಂಸ್ಕೃತಿಯಲ್ಲ ಎಂದು ಕೆಲವರು ಕೊಂಕು ನುಡಿದಿದ್ದಾರೆ. ಹಾಡಿನಲ್ಲಿ ಆಫ್ರಿಕನ್ ಪ್ರಜೆಯೊಬ್ಬನನ್ನು ಬಳಸಿಕೊಳ್ಳಲಾಗಿದ್ದು, ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com