'ನನ್ನ ಹೋರಾಟ ಅಸಮಾನತೆ, ಬೇಧ-ಭಾವದ ವಿರುದ್ಧ, ಇದನ್ನು ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇನೆ': ನಟ ಚೇತನ್

ನಾನು ಯಾವ ಜಾತಿ-ಜನಾಂಗದ ವಿರೋಧಿಯಲ್ಲ, ಹುಟ್ಟಿನ ಆಧಾರದ ಮೇಲೆ ಇವರು ಶ್ರೇಷ್ಠ, ಅವರು ಕನಿಷ್ಠ ಎಂಬ ಮನೋಸ್ಥಿತಿ, ವ್ಯವಸ್ಥೆ ವಿರುದ್ಧ ಮಾತ್ರ ನನ್ನ ಹೋರಾಟ, ಅನೇಕರು ಈ ವ್ಯವಸ್ಥೆಯೊಳಗೆ ಪಾಲುದಾರರಾಗಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.
ನಟ ಚೇತನ್
ನಟ ಚೇತನ್

ಬೆಂಗಳೂರು: ನಾನು ಯಾವ ಜಾತಿ-ಜನಾಂಗದ ವಿರೋಧಿಯಲ್ಲ, ಹುಟ್ಟಿನ ಆಧಾರದ ಮೇಲೆ ಇವರು ಶ್ರೇಷ್ಠ, ಅವರು ಕನಿಷ್ಠ ಎಂಬ ಮನೋಸ್ಥಿತಿ, ವ್ಯವಸ್ಥೆ ವಿರುದ್ಧ ಮಾತ್ರ ನನ್ನ ಹೋರಾಟ, ಅನೇಕರು ಈ ವ್ಯವಸ್ಥೆಯೊಳಗೆ ಪಾಲುದಾರರಾಗಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

ಬ್ರಾಹ್ಮಣ್ಯ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ವಿವರಣೆ ಕೇಳಲು ಪೊಲೀಸರು ನೊಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಬಸವನಗುಡಿ ಠಾಣೆಗೆ ಆಗಮಿಸಿ ವಿಚಾರಣೆ ಮುಗಿಸಿ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ನನಗೆ ಈ ನೆಲದ ಕಾನೂನಿನ ಬಗ್ಗೆ ಗೌರವ ಇದೆ. ನನಗೆ ನ್ಯಾಯ ಸಿಗತ್ತೆ ಅನ್ನೊ ನಂಬಿಕೆ ಇದೆ. ನಾವು ಅಹಿಂಸಾತ್ಮಕವಾಗಿ ಹೋರಾಟ ಮುಂದುವರೆಸುತ್ತೇವೆ. ಮನುಷ್ಯತ್ವಕ್ಕೆ ವಿರುದ್ಧವಾದವರು ನನ್ನ ಮೇಲೆ ದೂರು ಹಾಕಿದ್ದಾರೆ. ಆದರೆ ನಾನು, ನನ್ನ ಹೇಳಿಕೆಯಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.

ನನ್ನ ಹೋರಾಟ ಬೇಧ-ಭಾವ ವಿರುದ್ಧ: ದೂರು ನೀಡಿದವರ ಹುನ್ನಾರ ಏನು ಎನ್ನುವುದನ್ನು ಕೇಳಪಟ್ಟಿದ್ದೇವೆ. ನನ್ನ ಹೋರಾಟ ಯಾವ ಜಾತಿ ಅಥವ ಜನಾಂಗದ ವಿರುದ್ಧವಾಗಿಲ್ಲ. ನನ್ನ ಹೋರಾಟ ಇರುವುದು ಬ್ರಾಹ್ಮಣ್ಯ ಅನ್ನೋ ಬೇಧ-ಭಾವದ ವಿರುದ್ಧ. ಜೀವಂತವಾಗಿರುವ ಅಸಮಾನತೆ ವಿರುದ್ಧ ಎಂದು ಚೇತನ್ ಸ್ಪಷ್ಟಪಡಿಸಿದರು.

ಇಲ್ಲಿ ನಾನು ಮನುಷ್ಯನ ಹುಟ್ಟನ್ನು ಪ್ರಶ್ನೆ ಮಾಡುತ್ತಿಲ್ಲ, ಮನುಷ್ಯ-ಮನುಷ್ಯರ ನಡುವೆ ಇರುವ ಬೇಧ-ಭಾವವನ್ನು ಪ್ರಶ್ನೆ ಮಾಡುತ್ತಿದ್ದೇವೆ. ಜೀವಂತವಾಗಿ ಇನ್ನೂ ಇದ್ದು, ಅದು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಇನ್ನೂ ಇದ್ದು ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಸುತ್ತೇವೆ. ವಿಚಾರಣೆ ವೇಳೆ ಪ್ರತಿಯೊಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭಾವನೆ ಇದೆ ಎಂದಿದ್ದಾರೆ.

‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ. ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ ಎಂದು ಅಂಬೇಡ್ಕರ್​ ಹೇಳಿದ್ದಾರೆ. ‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ಎಂಬುದಾಗಿ ಪೆರಿಯಾರ್ ಹೇಳಿದ್ದಾರೆ ಎಂದು ಚೇತನ್​ ಟ್ವೀಟ್ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com