
ರವಿಚಂದ್ರನ್
'ಕನ್ನಡಿಗ ಸಿನಿಮಾದ ಚಿತ್ರೀಕರಣದ ಮೂಲಕ ನಟ ರವಿಚಂದ್ರನ್ ಸಿನಿಮಾ ಚಿತ್ರೀಕರಣಗಳನ್ನು ಪ್ರಾರಂಭಿಸಲಿದ್ದಾರೆ.
ಕನ್ನಡಿಗ ಸಿನಿಮಾ ಸ್ಥಳೀಯ ಸಂಸ್ಕೃತಿಯ ಕಥಾಹಂದರವನ್ನು ಹೊಂದಿರುವ ಸಿನಿಮಾ ಆಗಿದ್ದು, ಸೆನ್ಸಾರ್ ಸರ್ಟಿಫಿಕೇಟ್ ನ್ನೂ ಪಡೆದುಕೊಂಡಿದೆ. ಕೊನೆಯ ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಈ ಹಾಡನ್ನು ನಟ ಶಿವರಾಜ್ ಕುಮಾರ್ ಹಾಡಿದ್ದು, ಜಾನಪದ ಥೀಮ್ ನ್ನು ಹೊಂದಿದೆ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.
ಬಿ.ಎಂ ಗಿರಿರಾಜ್ ನಿರ್ದೇಶನ, ಎನ್.ಎಸ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದ್ದು, ಮೊದಲ ಲಾಕ್ ಡೌನ್ ನ ನಿರ್ಬಂಧಗಳು ಸಡಿಲಿಕೆಯಾದಾಗ ಪ್ರಾರಂಭದಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿತ್ತು. ಈ ವಾರದಲ್ಲಿ ಹಾಡಿನ ಚಿತ್ರೀಕರಣವೂ ನಡೆಯಲಿದ್ದು, ಈ ಸಿನಿಮಾದಲ್ಲಿ ರವಿಚಂದ್ರನ್ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫ್ಲ್ಯಾಷ್‌ಬ್ಯಾಕ್ ಕಥೆಯಲ್ಲಿ ರವಿಚಂದ್ರನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಾಮ್ ಆಲ್ಟಾರ್ ಅವರ ಪುತ್ರ ಜೇಮೀ ಆಲ್ಟರ್ ನಟಿಸುತ್ತಿರುವ ಮೊದಲ ಚಿತ್ರವೂ ಇದಾಗಿದ್ದು, ರೆವರೆಂಡ್ ಫರ್ಡಿನಾಂಡ್ ಕಿಟಲ್ ಪಾತ್ರದಲ್ಲಿ ಇವರು ನಟಿಸಿದ್ದಾರೆ.
ಈ ನಟರೊಂದಿಗೆ ಕನ್ನಡಿಗ ಸಿನಿಮಾದಲ್ಲಿ ಪಾವನ, ರಾಕ್ ಲೈನ್ ವೆಂಕಟೇಶ್, ಬಾಲಾಜಿ ಮನೋಹರ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಜಿಎಸ್ ವಿ ಸೀತಾರಾಮ್ ಛಾಯಾಗ್ರಹಣ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜವಾಬ್ದಾರಿಯನ್ನು ಗಿರಿರಾಜ್ ನಿರ್ವಹಿಸುತ್ತಿದ್ದಾರೆ.