ಸಂಭ್ರಮಕ್ಕೆ ಇದು ಸಮಯವಲ್ಲ: ಜನ್ಮದಿನ ಆಚರಣೆಗೆ ಗೋಲ್ಡನ್ ಸ್ಟಾರ್ ಗಣೇಶ್ ಬ್ರೇಕ್‌!

ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್‌ ಮನವಿಯೊಂದನ್ನು ಮಾಡಿದ್ದಾರೆ.
ಗಣೇಶ್
ಗಣೇಶ್

ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್‌ ಮನವಿಯೊಂದನ್ನು ಮಾಡಿದ್ದಾರೆ. ಈ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿರುವ ಗಣೇಶ್‌, ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಗೋಲ್ಡನ್ ಸ್ಟಾರ್' ಗಣೇಶ್‌ ಅವರಿಗೆ ಜುಲೈ 2ರಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷವೂ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ಆಚರಣೆ ಮಾಡುತ್ತಿದ್ದರು. ಹಾರ, ಕೇಕ್ ತಂದು ಸಂಭ್ರಮಿಸುತ್ತಿದ್ದರು. ಆದರೆ, ಕಳೆದ ವರ್ಷ ಅದು ಸಾಧ್ಯವಾಗಿರಲಿಲ್ಲ. ಕಾರಣ, ಕೊರೋನಾ. ಈ ವರ್ಷವೂ ಕೂಡ ಅಭಿಮಾನಿಗಳ ಸಂಭ್ರಮಾಚರಣೆಗೆ ಕೊರೋನಾ ಅಡ್ಡಗಾಲು ಹಾಕಿದೆ. ನಟ ಗಣೇಶ್ ಅವರು ಈ ವರ್ಷವೂ ಕೂಡ ಯಾವುದೇ ಆಚರಣೆ ಬೇಡ ಎಂದಿದ್ದಾರೆ. 'ನೋವುಗಳ ನಡುವೆ ಸಂಭ್ರಮಕ್ಕೆ ಇದು ಸಮಯವಲ್ಲ' ಎಂದು ಫ್ಯಾನ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೂ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು.. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾದದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನಗಳು ನಲುಗಿ ಹೋಗಿವೆ. ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಚಿಸಿರುತ್ತೇನೆ' ಎಂದು ಗಣೇಶ್ ಹೇಳಿದ್ದಾರೆ.

ಅಲ್ಲದೇ, ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆಗೆ ನೀವುಗಳು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ, ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ... ಅದೇ ನನಗೆ ಶ್ರೀರಕ್ಷೆ' ಎಂದು ಗಣೇಶ್ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com