ಕೊರೋನಾ ಸಂಕಷ್ಟ: ರೈತರಿಂದ ನೇರವಾಗಿ ಬೆಳೆ ಖರೀದಿ, ನಟ ಉಪೇಂದ್ರ ಟ್ವೀಟ್

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದ ಕಾರ್ಮಿಕರಿಗೆ ದಾನಿಗಳ ಮೂಲಕ ಸಹಕಾರ ನೀಡುತ್ತಿರುವ ನಟ ಉಪೇಂದ್ರ ಈಗ, ರೈತರ ನೆರವಿಗೆ ಮುಂದಾಗಿದ್ದಾರೆ.
ಉಪೇಂದ್ರ
ಉಪೇಂದ್ರ

ಬೆಂಗಳೂರು: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದ ಕಾರ್ಮಿಕರಿಗೆ ದಾನಿಗಳ ಮೂಲಕ ಸಹಕಾರ ನೀಡುತ್ತಿರುವ ನಟ ಉಪೇಂದ್ರ ಈಗ, ರೈತರ ನೆರವಿಗೆ ಮುಂದಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಉಪ್ಪಿ, ನಮ್ಮ ಅನೇಕ ರೈತರು ಸಂಕಷ್ಟದಲ್ಲಿದ್ದಾರೆ ಮತ್ತು ಕರೋನಾ ಲಾಕ್‌ಡೌನ್‌ನಿಂದಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ದಾನಿಗಳಿಂದ ಬರುವ ಹಣದಿಂದ ನಾವು ತರಕಾರಿಗಳನ್ನು ನೇರವಾಗಿ ರೈತರಿಂದ ಖರೀದಿಸಿ ದಿನಸಿ ಕಿಟ್‌ನೊಂದಿಗೆ ಪೂರೈಸುತ್ತೇವೆ ಎಂದು ಹೇಳಿದ್ದಾರೆ.

ಉಪೇಂದ್ರ ಅವರ ಈ ಟ್ವೀಟ್ ಗೆ ಅನೇಕರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ತೋಟಗಾರಿಕೆ ಇಲಾಖೆ ಮತ್ತು ಹಾಪ್ ಕಾಮ್ಸ್ ಗಳು ಮಾಡಬೇಕಿದ್ದ ಕೆಲಸವನ್ನ ನೀವು ಮಾಡುತ್ತಿರುವುದು ಶ್ಲಾಘನೀಯ ಮತ್ತು ಅನುಕರಣೀಯ, ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುತ್ತಿರುವ ನಿಮಗೆ ಒಳ್ಳೆಯದಾಗಲಿ. ನಿಮ್ಮ ಈ ಕೆಲಸ ಇತರ ಸ್ಟಾರ್ ನಟರಿಗೂ ಮಾದರಿಯಾಗಲಿ” ಎಂದು ಓರ್ವ ವ್ಯಕ್ತಿ ಹೇಳಿದ್ದಾರೆ.

ಮತ್ತೊಬ್ಬರು, ಈ ರೀತಿ ಕೆಲಸಗಳು ಮಾಡಿ ಸ್ವಾಮಿ... ಸುಮ್ನೆ ಆದರ್ಶ ಸಮಾಜ ಅಂತ ಟ್ವಿಟ್ಟರ್ ನಲ್ಲಿ ಸಮಾಜ ಉದ್ಧಾರ ಮಾಡೋ ಕನಸು ಕಾಣಬೇಡಿ ಎಂದಿದ್ದರೆ, ಮತ್ತೋರ್ವ ವ್ಯಕ್ತಿ, ಪೂರ್ತಿ ಅರ್ಥವಾಗ್ಲಿಲ್ಲ "vegetable" ಅಂದ್ರೆ ತರಕಾರಿ "farmers" ಅಂದ್ರೆ ರೈತರು ಅಂತ ಗೊತ್ತಾಯ್ತು ಮಿಕ್ಕಿದ್ದು ಯಾವುದೂ ಗೊತ್ತಾಗ್ಲಿಲ್ಲ ಕ್ಷಮಿಸಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ದಾನಿಗಳು ನೀಡಿರುವ ವಸ್ತುಗಳು ಮತ್ತು ದಾನಿಗಳೊಡನಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com