'ಬೇರೆಯವರ ಜೊತೆ ಹೋಲಿಸಬೇಡಿ, ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆಂಬ ಭಯಬೇಡ; ಎಂದೆಂದೂ ನಾನು ಉಪೇಂದ್ರ'

ರಿಯಲ್ ಸ್ಟಾರ್ ಉಪೇಂದ್ರ ಕೊರೋನಾ ಲಾಕ್ ಡೌನ್ ಸಮಯದಲ್ಲಿ ನೊಂದವರ ಪಾಲಿಗೆ ನಿಜವಾಗಿಯೂ ರಿಯಲ್ ಲೀಡರ್ ಆಗಿದ್ದಾರೆ. 
ಉಪೇಂದ್ರ
ಉಪೇಂದ್ರ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾ ಲಾಕ್ ಡೌನ್ ಸಮಯದಲ್ಲಿ ನೊಂದವರ ಪಾಲಿಗೆ ನಿಜವಾಗಿಯೂ ರಿಯಲ್ ಲೀಡರ್ ಆಗಿದ್ದಾರೆ. 

ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ನಟ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ಅನೇಕ ಕುಟುಂಬಗಳಿಗೆ ನಟ ಉಪೇಂದ್ರ ದಿನಸಿ ಕಿಟ್ ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಉಪೇಂದ್ರ ಜೊತೆಗೆ ಹಲವರು ಕೈಜೋಡಿಸಿದ್ದಾರೆ.

ಆದರೆ ಉಪೇಂದ್ರ ಅವರ ಈ ಕಾರ್ಯಕ್ಕೆ ಕೆಲವು ಕಿಡಿಗೇಡಿಗಳು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ, ಈ ನಡುವೆ ನಟ ಹಾಗೂ ಪ್ರಜಾಕಾರಣಿ ಉಪೇಂದ್ರ ಎಲ್ಲಾ ರಾಜಕೀಯ ಬೆಂಬಲಿಗರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ.

ನನ್ನನ್ನು ಬೇರೆಯವರ ಜೊತೆಗೆ ಹೋಲಿಸಬೇಡಿ. ಇನ್ನೊಬ್ಬ ನಾಯಕ ಹುಟ್ಟಿಕೊಳ್ತಾನೆ ಎಂದು ಆತಂಕ ಪಡಬೇಡಿ. ನಾನೆಂದೂ ನಾಯಕನಾಗುವುದಿಲ್ಲ'' ಎಂದು ತಮ್ಮ ಬಹಿರಂಗ ಪತ್ರದಲ್ಲಿ ನಟ ಹಾಗೂ ಪ್ರಜಾಕಾರಣಿ ಉಪೇಂದ್ರ ಉಲ್ಲೇಖಿಸಿದ್ದಾರೆ.

ಎಲ್ಲಾ ರಾಜಕೀಯ (ವಿವಿಧ ಪಕ್ಷ, ವಿವಿಧ ನಾಯಕರು, ವಿವಿಧ ಜಾತಿ, ಧರ್ಮ) ಬೆಂಬಲಿಗರಿಗೆ ಬಹಿರಂಗ ಪತ್ರ

 ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ - ಎಂದೆಂದೂ ನಾನು ಉಪೇಂದ್ರ
ಆತಂಕ ಪಡಬೇಡಿ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದು - ನಾನೆಂದೂ ನಾಯಕನಾಗುವುದಿಲ್ಲ.
ಭಯ ಪಡಬೇಡಿ ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ ಆಗುತ್ತದೆ ಎಂದು - ನಾಯಕನಾಗಬೇಕೆಂದು ದೃಢ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂಇನ್ನು ಮುಂದೆ ಮತ ನೀಡುವುದಿಲ್ಲ.

ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ ರಾಜಕೀಯ ಭದ್ರತೆ ಮತ್ತು ಆರ್ಥಿಕ ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆಂಬ ಆತಂಕ ಬೇಡ, ಅದು ಕಡಿಮೆಯಾಗಬಾರದು. ಇಮ್ಮಡಿ ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ.

20% ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೇನೆಂದು ಹೆಮ್ಮೆ ಪಡಬೇಡಿ. 80% ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ.
ನಾನು ಎಲೆಕ್ಷನ್‌ನಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ, ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡ್ತೀರಾ ಎಂದಿರಿ! ಇರಲಿ ಒಂದು ಸತ್ಯ ತಿಳಿಯಿರಿ. 20% 'ನಾನು' ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ. ನೀನು ಎನ್ನುವ 80% ಜನರ ಜೊತೆ ಅವನೇ ಇರುತ್ತಾನೆ ಎಂದು ಪತ್ರದಲ್ಲಿ ಬರೆದಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com