ಅಪ್ಪು ನಮ್ಮನ್ನು ಬಿಟ್ಟುಹೋಗೋ ಹಿಂದಿನ ದಿನ ‘ಗಂಧದ ಗುಡಿ’ ಟೀಸರ್ ತೋರಿಸಿದ್ರು: ‘ಮದಗಜ’ ಟೈಟಲ್ ಸಾಂಗ್ ರಿಲೀಸ್ ವೇಳೆ ಶ್ರೀಮುರಳಿ ಭಾವುಕ

ಅಪ್ಪು ನಮ್ಮನ್ನು ಬಿಟ್ಟುಹೋಗೋ ಹಿಂದಿನ ದಿನ ಒಟ್ಟಿಗೆ ಇದ್ವಿ... ಮಾತನಾಡಿದ್ವಿ.. ಯಾವುದೇ ಕಾರಣಕ್ಕೂ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಹೀಗೆಂದು ಭಾವುಕರಾಗಿದ್ದು ರೋರಿಂಗ್ ಸ್ಟಾರ್ ಶ್ರಿಮುರಳಿ.
ಶ್ರಿಮುರಳಿ
ಶ್ರಿಮುರಳಿ

ಬೆಂಗಳೂರು: ಅಪ್ಪು ನಮ್ಮನ್ನು ಬಿಟ್ಟುಹೋಗೋ ಹಿಂದಿನ ದಿನ ಒಟ್ಟಿಗೆ ಇದ್ವಿ... ಮಾತನಾಡಿದ್ವಿ.. ಯಾವುದೇ ಕಾರಣಕ್ಕೂ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಹೀಗೆಂದು ಭಾವುಕರಾಗಿದ್ದು ರೋರಿಂಗ್ ಸ್ಟಾರ್ ಶ್ರಿಮುರಳಿ.

‘ಮದಗಜ’ ಟೈಟಲ್ ಸಾಂಗ್ ರಿಲೀಸ್ ಗೂ ಮುನ್ನ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನದೊಡನೆ ಗೌರವ ಸಲ್ಲಿಸಲಾಯಿತು.

ಬಳಿಕ ಸುದ್ದಿಗಾರರೊಡನೆ ಮಾತನಾಡಿ ಶ್ರೀಮುರಳಿ, ಅಕ್ಟೋಬರ್ 29ರಂದು ಅಪ್ಪು ಮಾಮ ನಮ್ಮನ್ನು ಅಗಲಿದರು. ಅದರ ಹಿಂದಿನ ದಿನ 28ರಂದು ನಾನು ಅವರೊಡನೆ ಒಂದೂವರೆ ಗಂಟೆ ಕಾಲ ಕಳೆದೆ. ಒಟ್ಟಿಗೆ ಜಿಮ್ ಮಾಡಿದ್ವಿ. ‘ಗಂಧದ ಗುಡಿ’ ವೈಲ್ಡ್ ಲೈಫ್ ಟೀಸರ್ ತೋರಿಸಿದ್ರು. ನಾನು ‘ಮದಗಜ’ ಚಿತ್ರದ ಟ್ರೇಲರ್ ತೋರಿಸಿದ್ದೆ ಎಂದರು.

ಭೇಟಿಯಾದಾಗಲೆಲ್ಲ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡ್ತಿದ್ವಿ. ದೇಹದಾರ್ಢ್ಯತೆ ಬಗ್ಗೆ ಅಪ್ಪು ಮಾಮ ಸಲಹೆ ನೀಡ್ತಿದ್ರು. ಇನ್ನು ಬಾಲ್ಯದ ದಿನಗಳ ನೆನಪು ನೂರಾರಿವೆ ಎಂದು ಶ್ರೀಮುರಳಿ ಕಣ್ಣೀರಾದರು.

‘ಮದಗಜ’ ಟೈಟಲ್ ಸಾಂಗ್ ರಿಲೀಸ್
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್​ ನಟನೆಯ ‘ಮದಗಜ’ ಸಿನಿಮಾ ಹಾಡುಗಳ ಮೂಲಕ ‘ಭಾರಿ ಸೌಂಡು ಮಾಡುತ್ತಿದೆ. ಈಗ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ನಟ ಶ್ರೀಮುರಳಿ ಅಬ್ಬರಿಸಿದ್ದಾರೆ. ಆನಂದ್​ ಆಡಿಯೋ ಮೂಲಕ ‘ಮದಗಜ’ ಟೈಟಲ್​ ಸಾಂಗ್​ ರಿಲೀಸ್​ ಆಗಿದ್ದು ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.

‘ಅಯೋಗ್ಯ’ ಖ್ಯಾತಿಯ ಮಹೇಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಶ್ರೀಮುರಳಿ, ಕೋಪ, ದ್ವೇಷ, ಸೇಡು, ಅಸೂಯೆಗಳಿಗೂ ಅಂತ್ಯವಿದೆ. ಇಂತಹ ಗುಣಗಳ ಬಗ್ಗೆ ಒಂದಲ್ಲ ಒಂದು ದಿನ ಬೋರ್ ಆಗುತ್ತದೆ. ಆದಾಗ್ಯೂ ದುರ್ಗುಣಗಳಿಂದ ಹೊರಬರಲು ತಾಳ್ಮೆ ಅಗತ್ಯ ಎಂದಿದ್ದಾರೆ.

ಶ್ರೀಮುರಳಿ, ಆಶಿಕಾ ರಂಗನಾಥ್​ ಜೊತೆಗೆ ಖ್ಯಾತ ನಟ ಜಗಪತಿ ಬಾಬು ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್​ ಕೂಡ ಅದ್ದೂರಿಯಾಗಿ ಮೂಡಿಬರುತ್ತಿದೆ ಎಂಬುದನ್ನು ಟೀಸರ್ ಮತ್ತು ಹಾಡುಗಳೇ ತೋರಿಸಿವೆ.

ಬೃಹತ್​ ಸೆಟ್​ಗಳು ಮತ್ತು ಅದ್ದೂರಿ ಮೇಕಿಂಗ್​ನಿಂದಾಗಿ ಟೈಟಲ್ ಸಾಂಗ್ ಗಮನ ಸೆಳೆಯುತ್ತಿದ್ದು, ಸಂತೋಷ್​ ವೆಂಕಿ ಹಿನ್ನೆಲೆ ಗಾಯನವಿದೆ. ನವೀನ್​ ಕುಮಾರ್​ ಛಾಯಾಗ್ರಹಣ, ಹರೀಶ್​ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ‘ಮದಗಜ’ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಡಿಸೆಂಬರ್ 3ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com