ಆಶ್ರಮ್-3 ಸೆಟ್ ಗೆ ನುಗ್ಗಿ ಧ್ವಂಸ ಮಾಡಿದ ಬಜರಂಗದಳ ಕಾರ್ಯಕರ್ತರು, ಪ್ರಕಾಶ್ ಝಾ ಮೇಲೆ ಮಸಿ 

ಹಿಂದೂಗಳ ಧಾರ್ಮಿಕ ಗುರುಗಳನ್ನು ಅವಮಾನಕರ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಆಶ್ರಮ್-3 ವೆಬ್ ಸೀರೀಸ್ ಚಿತ್ರೀಕರಣದ ಸೆಟ್ ಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಸೆಟ್ ನ್ನು ಧ್ವಂಸ ಮಾಡಿದ್ದಾರೆ. 
ಆಶ್ರಮ್-3
ಆಶ್ರಮ್-3

ಭೋಪಾಲ್: ಹಿಂದೂಗಳ ಧಾರ್ಮಿಕ ಗುರುಗಳನ್ನು ಅವಮಾನಕರ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಆಶ್ರಮ್-3 ವೆಬ್ ಸೀರೀಸ್ ಚಿತ್ರೀಕರಣದ ಸೆಟ್ ಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಸೆಟ್ ನ್ನು ಧ್ವಂಸ ಮಾಡಿದ್ದಾರೆ. 

ಭೋಪಾಲ್ ನಲ್ಲಿ ಈ ವೆಬ್ ಸೀರೀಸ್ ನ ಚಿತ್ರೀಕರಣ ನಡೆಯುತ್ತಿತ್ತು. ವೆಬ್ ಸೀರೀಸ್ ನಿರ್ದೇಶಕ ಪ್ರಕಾಶ್ ಝಾ ವಿರುದ್ಧ ಹಿಂದೂಗಳನ್ನು ತಪ್ಪಾಗಿ ಚಿತ್ರೀಕರಿಸಿರುವ ಆರೋಪ ಮಾಡಿರುವ ಬಜರಂಗದಳ ಕಾರ್ಯಕರ್ತರು ಆತನ ವಿರುದ್ಧ ಮಸಿ ಎರಚಿ ಪ್ರತಿಭಟನೆ ನಡೆಸಿದ್ದಾರೆ. 

ವೆಬ್ ಸೀರೀಶ್ ತಂಡಕ್ಕೆ ಸೇರಿದ ಎರಡು ಬಸ್ ಗಳ ಗಾಜುಗಳು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಪುಡಿಯಾಗಿದ್ದು ಈ ವೆಬ್ ಸೀರೀಸ್ ನ ಚಿತ್ರೀಕರಣ ಮುಂದುವರೆಯುವುದಕ್ಕೆ ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದಾರೆ. 

ಈ ಘಟನೆ ಬಗ್ಗೆ ಭೋಪಾಲ್ ದಕ್ಷಿಣದ ಎಸ್ ಪಿ ಸಾಯಿ ಕೃಷ್ಣ ಥೋಟ ಮಾತನಾಡಿದ್ದು, "ವೆಬ್ ಸೀರೀಸ್ ನ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅರೇರಾ ಹಿಲ್ಸ್ ನ ಪ್ರದೇಶದಲ್ಲಿರುವ ಹಳೆಯ ಜೈಲಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ" ಎಂದು ತಿಳಿಸಿದ್ದಾರೆ.

ಹಿಂದೂಗಳನ್ನು ಅವಮಾನಿಸುವ, ಮಹಿಳೆಯರನ್ನು ಧಾರ್ಮಿಕ ಗುರುಗಳು ವಂಚಿಸುವ ಅಶ್ಲೀಲ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಲಾಗಿದ್ದು ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬುದು ಸಂಘಟನೆಯ ಪ್ರಮುಖ ಆರೋಪವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

ಬಜರಂಗದಳ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವುದರ ಪರಿಣಾಮವಾಗಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಈ ವರೆಗೂ ಯಾರನ್ನೂ ಬಂಧಿಸಿಲ್ಲ.

ವೆಬ್ ಸೀರೀಸ್ ನ ಮುಖ್ಯ ಭಾಗವಾಗಿರುವ ಬಾಬಿ ಡಿಯೋಲ್ ವಿರುದ್ಧವೂ ಬಜರಂಗದಳ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. 

ವೆಬ್ ಸೀರೀಸ್ ಬಗ್ಗೆ ಮಾತನಾಡಿರುವ ಬಜರಂಗದಳದ ರಾಜ್ಯ ಸಂಚಾಲಕ ಸುಶೀಲ್ ಸುರ್ಹೆಲೆ, ಭೋಪಾಲ್ ನಲ್ಲಿ ಆಶ್ರಮ್ ನ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ. ಪ್ರಕಾಶ್ ಝಾ ಹಿಂದೂಗಳ ಆಶ್ರಮದಲ್ಲಿನ ಪದ್ಧತಿಗಳನ್ನು ತಪ್ಪಾಗಿ ಚಿತ್ರೀಕರಿಸಿದ್ದಾರೆ. ಆಶ್ರಮದಲ್ಲಿನ ಗುರುಗಳು  ಮಳೆಯರನ್ನು ವಂಚಿಸುವ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಸಾಮಾಜಿಕ ಮೌಲ್ಯಗಳನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಆಶ್ರಮಗಳಿವೆ. ವೆಬ್ ಸೀರೀಸ್ ನಲ್ಲಿ ತೋರಿಸಿರುವುದರಲ್ಲಿ ಯಾವುದೇ ಸತ್ಯವೂ ಇಲ್ಲ.ಇದೇ ರೀತಿಯ ವೆಬ್ ಸೀರೀಸ್ ಗಳನ್ನು ಬೇರೆ ಧರ್ಮದ ಬಗ್ಗೆ ಮಾಡಲು ಝಾಗೆ ಧೈರ್ಯ ಇದೆಯೇ? ಎಂದು ಸುಶೀಲ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com