
ವಾಸುಕಿ ವೈಭವ್
ಸಂದರ್ಶನ- ಬರಹ: ಹರ್ಷವರ್ಧನ್ ಸುಳ್ಯ
ಅಪರೂಪಕ್ಕೆ ನಮ್ಮೊಳಗಿನ ಫಿಲಾಸಫರ್ ಜಾಗೃತಗೊಂಡಾಗ, ಫ್ರೆಂಡ್ಸ್ ಜೊತೆ ಪಾರ್ಟಿ ಮಾಡೋವಾಗ, ಹಳೇ ಪ್ರೇಯಸಿ ನೆನಪಾದಾಗ ಹೀಗೆ ಯಾವ ಯಾವುದೋ ಕಾರಣಕ್ಕೆ ಮನಸ್ಸು ಖುಷಿಯಾದಾಗ ಗುನುಗುವಂಥಾ ಹಾಡುಗಳನ್ನು ನೀಡಿದ ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್. 'ಆಗಾಗ ನೆನಪಾಗುತಾಳೆ', 'ಉಡುಪಿ ಹೋಟೆಲು', 'ಇನ್ನೂ ಬೇಕಾಗಿದೆ', 'ಬದುಕೇ ಬದುಕಾ ಕಲಿಸೋ' ಇಂಥ ಹಲವು ಸುಮಧುರ ಹಾಡುಗಳು ಅವರ ಕಾಣಿಕೆ. ಸದ್ಯ ಸ್ಯಾಂಡಲ್ ವುಡ್ ನ ಬಿಝಿ ಸಂಗೀತ ನಿರ್ದೇಶಕರಲ್ಲಿ ವಾಸುಕಿ ಒಬ್ಬರು. ಇತ್ತೀಚಿನ ಡಾಲಿ ಧನಂಜಯ್ ಅವರ 'ಬಡವ ರಾಸ್ಕಲ್' ಸಿನಿಮಾದ ಯಶಸ್ಸು ಮಾಸ್ ಸಂಗೀತ ಪ್ರಕಾರದ ಮೇಲೆ ವಾಸುಕಿ ಅವರಿಗಿರುವ ಹಿಡಿತವನ್ನು ಸಾಬೀತುಪಡಿಸಿದೆ. ರಿಷಬ್ ಶೆಟ್ಟಿ ಅವರ 'ಹರಿಕಥೆಯಲ್ಲ ಗಿರಿಕಥೆ', 'ದೂರದರ್ಶನ' ಮತ್ತು ತೆಲುಗು ವೆಬ್ ಸಿರೀಸ್ ವೊಂದರ ಸಂಗೀತ ನಿರ್ದೇಶನದಲ್ಲಿ ವಾಸುಕಿ ಮುಳುಗಿದ್ದಾರೆ.
ಖಾಲಿತನದ ಆತಂಕ
ಒಂದು ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡರೆ ಊಟ, ನಿದಿರೆ, ಸಮಯ ಎಲ್ಲವೂ ಅದಕ್ಕಾಗಿಯೇ ಮುಡಿಪು. ನಿದ್ದೆ ಮಾಡುವಾಗಲೂ ಆ ಸಿನಿಮಾ ಸಂಗೀತ ತುಣುಕುಗಳ ಲೆಕ್ಕಾಚಾರವನ್ನೇ ಮನದ ತುಂಬಾ ತುಂಬಿಕೊಳ್ಳುತ್ತಾರೆ. ಹೀಗಾಗಿ ಒಂದು ಪ್ರಾಜೆಕ್ಟ್ ಮುಗಿಯುವಷ್ಟರಲ್ಲಿ ವಾಸುಕಿ ಫುಲ್ exhaust ಆಗುತ್ತಾರೆ. ಒಂದು ಬಗೆಯ ಖಾಲಿತನ ಅವರನ್ನು ಆವರಿಸಿಕೊಳ್ಳುತ್ತದೆ. ಯಾವುದೇ ಕ್ರಿಯೇಟಿವ್ ವ್ಯಕ್ತಿಗೆ ಈ ಖಾಲಿತನ ಆತಂಕ ತರುತ್ತದೆ. ಮುಂದೆ ತನ್ನಿಂದ ಏನೂ ಸೃಷ್ಟಿಯಾಗದು ಎನ್ನುವ ಭಯ ಈ ಆತಂಕದ ಮೂಲ. ಅ ಭಯ, ಚಡಪಡಿಕೆಯಲ್ಲೇ ಮಜಾ ಇರೋದು ಅಂತಾರೆ ವಾಸುಕಿ. ಖಾಲಿಯಾದಾಗಲೇ ಹೊಸತೇನೋ ಹುಟ್ಟುವುದು. ಖಾಲಿಯಾಗದೇ ಇದ್ದರೆ ಹೊಸತಿನ ಸೃಷ್ಟಿ ಸಾಧ್ಯವಿಲ್ಲ. ಈ ಪರಿಕಲ್ಪನೆಯೇ ಸುಂದರ ಅಲ್ವಾ?
ಸಂಗೀತ ಎಂದರೆ...
ವಾಸುಕಿ ಪ್ರಕಾರ ಸಂಗೀತ ಎಂದರೆ ಅವ್ಯಕ್ತವಾದುದನ್ನು ವ್ಯಕ್ತಪಡಿಸುವ ಮಾಧ್ಯಮ. ಬದುಕು ಎಷ್ಟು ಸೋಜಿಗ ಎಂದರೆ ಮನುಷ್ಯ, ಸಂವಹನ ನಡೆಸಲು ಭಾಷೆಯನ್ನು ಕಂಡುಕೊಂಡ. ಆದರೆ, ಮಾತುಗಳಲ್ಲಿ ಹೇಳಲಾಗದ್ದು, ಕಂಗಳಲ್ಲಿ ಇಣುಕದ್ದು, ಬಾಡಿ ಲ್ಯಾಂಗ್ವೇಜಿನಲ್ಲೂ ವ್ಯಕ್ತಪಡಿಸಲಾಗದ ಸಂಗತಿಗಳು ಮೂಟೆಗಟ್ಟಲೆ ಇವೆ. ಇವೆಲ್ಲವನ್ನೂ ಹೊರಹಾಕಲು ಸಂಗೀತ ಒಂದು ಮಾಧ್ಯಮ ಅನ್ನೋದು ವಾಸುಕಿ ಅನಿಸಿಕೆ. ಖ್ಯಾತ ರಂಗಕರ್ಮಿ ಬಿ.ವಿ.ಕಾರಂತರು, ಹಂಸಲೇಖ, ಎ.ಆರ್. ರಹಮಾನ್, ವಾಸುಕಿ ಅವರಿಗೆ ಸ್ಫೂರ್ತಿ.
ರಂಗಭೂಮಿ ತವರುಮನೆ
ಸಿನಿಮಾರಂಗದಲ್ಲಿ ಬಿಜಿಯಾಗಿದ್ದರೂ ಯಾವುದೇ ಕಾರಣಕ್ಕೂ ರಂಗಭೂಮಿಯ ನಂಟನ್ನು ಅವರು ಬಿಡರು. 'ರಂಗಭೂಮಿ ನನ್ನ ತವರುಮನೆ. ಈಗ ಬೆಳಗುತ್ತಿರೋದು ಸಿನಿಮಾರಂಗದಲ್ಲೇ ಆದರೂ, ಸಂಗೀತ ಪ್ರಪಂಚಕ್ಕೆ ನನ್ನನ್ನು ತಯಾರುಮಾಡಿ ಕಳಿಸಿದ್ದು ರಂಗಭೂಮಿ' ಎನ್ನುತ್ತಾರೆ ವಾಸುಕಿ ವೈಭವ್. ಅವರ ಇಷ್ಟದ ಸಂಗೀತ ಪ್ರಕಾರ ಎಂಬುದು ಇಲ್ಲವಾದರೂ ಜಾನಪದ ಸಂಗೀತ ಎಲ್ಲಾ ಸಂಗೀತ ಪ್ರಕಾರಗಳ ತಾಯಿ ಅನ್ನೋದು ಅವರ ನಂಬಿಕೆ.
ನಾನೂ ಒಬ್ಬ ಶ್ರೋತೃ
ತರಗತಿಯಲ್ಲಿ ನಮಗೆ ನಮ್ಮ ಸಹಪಾಠಿಗಳು, ಓರಗೆಯವರ ಪರಿಚಯ ಚೆನ್ನಾಗಿಯೇ ಇರುತ್ತದೆ. ಅದೇ ರೀತಿ ಬೀಡುವಿನ ವೇಳೆಯಲ್ಲಿ ಸ್ಯಾಂಡಲ್ ವುಡ್ ನ ಇತರೆ ಸಂಗೀತ ನಿರ್ದೇಶಕರ ಸಂಗೀತವನ್ನು ವಾಸುಕಿ ಅಸ್ವಾದಿಸುತ್ತಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಮಿದುನ್ ಮುಕುಂದನ್ ಸಂಗೀತ, ಒಂಟಿ ಸಲಗ, ಟಗರು ಸಿನಿಮಾಗಳಲ್ಲಿ ಚರಣ್ ರಾಜ್ ಸಂಗೀತ, ಸಖತ್ ಸಿನಿಮಾದಲ್ಲಿ ಜುದಾ ಸ್ಯಾಂಡಿ ಕೆಲಸ ವಾಸುಕಿ ಅವರ ಫೇವರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಖುಷಿಯೇ ಸಕ್ಸಸ್ಸು
ಒಂದು ಸಿನಿಮಾ ಹಿಟ್ ಆದರೆ ಅದರ ಯಶಸ್ಸಿನ ಚುಂಗನ್ನೇ ಹಿಡಿದು ವರ್ಷಗಟ್ಟಲೆ ತಳ್ಳುವ ಜನರ ನಡುವೆ ವಾಸುಕಿ ಭಿನ್ನವಾಗಿ ನಿಲ್ಲುತ್ತಾರೆ. ಸಕ್ಸಸ್ ಎಂದರೇನೆಂದು ಕೇಳಿದರೆ ತಮಗೆ ನಿಜವಾಗಿಯೂ ಗೊತ್ತಿಲ್ಲ ಎಂದು ವಾಸುಕಿ ಕೈಚೆಲ್ಲುತ್ತಾರೆ. ಮತ್ತೂ ಪ್ರೀತಿಪೂರ್ವಕವಾಗಿ ಒತ್ತಾಯಿಸಿದಾಗ 'ನಾವು ಮಾಡ್ತಿರೋ ಕೆಲಸವನ್ನು ಎಂಜಾಯ್ ಮಾಡಲು ಸಾಧ್ಯವಾದರೆ ಅದೇ ಸಕ್ಸಸ್. ಅಲ್ಲದೆ ನಾವು ಮಾಡೋ ಕೆಲಸ ಹೆಚ್ಚೆಚ್ಚು ಜನರನ್ನು ರೀಚ್ ಆದಾಗ ಸಂತೋಷ ಆಗುತ್ತೆ' ಎಂದು ಲಾಗೌಟ್ ಆಗುತ್ತಾರೆ.