ರವೀನಾ ಟಂಡನ್‌ರಿಂದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಲಾಂಚ್
ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ರ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಅನ್ನು ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಬಿಡುಗಡೆ ಮಾಡಲಿದ್ದಾರೆ.
Published: 08th April 2022 12:48 PM | Last Updated: 08th April 2022 01:31 PM | A+A A-

Mute ಚಿತ್ರದ ಪೋಸ್ಟರ್
ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ರ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಅನ್ನು ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಬಿಡುಗಡೆ ಮಾಡಲಿದ್ದಾರೆ.
ಇದೇ ಏಪ್ರಿಲ್ 9ರ ಸಂಜೆ ಕನ್ನಡ ಸೇರಿ 5 ಭಾಷೆಗಳಲ್ಲಿ "ಮ್ಯೂಟ್"ನ ಟ್ರೇಲರ್ ಬಿಡುಗಡೆಯಾಗಲಿದ್ದು, ಈಗಾಗಲೇ ತನ್ನ ಟೈಟಲ್ ಹಾಗೂ ಫಸ್ಟ್‌ಲುಕ್‌ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ "# ಮ್ಯೂಟ್" ತೆರೆಗೆ ಬರಲು ಸಜ್ಜಾಗಿದ್ದು, ಇದೇ ಏಪ್ರಿಲ್ 9(ಶನಿವಾರ)ರಂದು ಸಿನಿಮಾದ ಟ್ರೇಲರ್ ಲಾಂಚ್ ಆಗುತ್ತಿದೆ.
ಬಾಲಿವುಡ್ ಬೆಡಗಿ ರವೀನಾ ಟಂಡನ್ ಏಕಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಐದೂ ಭಾಷೆಗಳಲ್ಲೂ "#ಮ್ಯೂಟ್"ನ ಟ್ರೇಲರ್ ಅನ್ನು ಸಾಮಾಜಿಕ ತಾಣಗಳ ಮೂಲಕ ಬಿಡುಗಡೆ ಮಾಡುತ್ತಿದ್ದು, ರವೀನಾ ಟಂಡನ್ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದರ ಟ್ರೇಲರ್ ಲಾಂಚ್ ಮಾಡುತ್ತಿರುವುದು ಇದೇ ಮೊದಲು.
ಇನ್ನು ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅರ್ಚನಾ ಜೋಯಿಸ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಸಹ ಮುಖ್ಯಪಾತ್ರ ನಿರ್ವಹಿಸಿದ್ದಾರೆ.
ಇ.ಕೆ.ಫಿಕ್ಚರ್ಸ್ ಬ್ಯಾನರ್‌ನಲ್ಲಿ ಮುಂಗಾರುಮಳೆ-2 ಖ್ಯಾತಿಯ ಜಿ.ಗಂಗಾಧರ್ "# ಮ್ಯೂಟ್" ಚಿತ್ರದ ನಿರ್ಮಾಪಕರಾಗಿದ್ದಾರೆ. ಜಿ.ಗಂಗಾಧರ್ ಅವರು ಮುಂಗಾರುಮಳೆ ಮತ್ತು ಮೊಗ್ಗಿನ ಮನಸು ಚಿತ್ರಗಳಲ್ಲೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದರು. ಮೊಗ್ಗಿನಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಮುಂಗಾರುಮಳೆ-2ರಲ್ಲಿ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ತೇಜಸ್ ಪಬ್ಲಿಕೇಷನ್ ಡಿಜಿಟಲ್ ತಂತ್ರಗಳನ್ನು ರೂಪಿಸಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಿಷಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರೆ, ಡಾಲಿ ಧನಂಜಯ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗೊಳ್ಳಲಿದೆ. ಚಿತ್ರ ರೋಚಕ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳಿದ್ದು, ಪಾತ್ರಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.