
ಸುಧೀಂದ್ರ ವೆಂಕಟೇಶ್

ಯಾವುದೇ ಒಂದು ಸಿನಿಮಾ ತೆರೆಕಾಣುತ್ತಿರುವಾಗ ಜನರನ್ನು ಥಿಯೇಟರುಗಳಿಗೆ ಕರೆತರುವ ಹೊಣೆ ಕೇವಲ ನಾಯಕ ನಟ ಅಥವಾ ನಾಯಕಿಯರದು ಮಾತ್ರವೇ ಅಲ್ಲ. ಸಿನಿಮಾದ ಪ್ರಚಾರ ಕೂಡಾ ಕಾರಣವಾಗಿರುತ್ತದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಜನರ ನಡುವೆ ಆ ಸಿನಿಮಾ ಬಗ್ಗೆ ಹವಾ ಕ್ರಿಯೇಟ್ ಮಾಡುವ ಪ್ರಚಾರಕರಲ್ಲಿ ವೆಂಕಟೇಶ್ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸುಧೀಂದ್ರ ವೆಂಕಟೇಶ್ ಎಂದೇ ಅವರು ಉದ್ಯಮದಲ್ಲಿ ಚಿರಪರಿಚಿತರು.
ಅವರು ಖ್ಯಾತ ಸಿನಿಮಾ ಪ್ರಚಾರಕ ಡಿ.ವಿ. ಸುಧೀಂದ್ರ ಅವರ ಸಹೋದರನ ಪುತ್ರ. ವೆಂಕಟೇಶ್ ಅವರು 1985ರಲ್ಲಿ ಚಿಕ್ಕಪ್ಪನವರ ಪ್ರಚಾರ ಸಂಸ್ಥೆ 'ರಾಘವೇಂದ್ರ ಚಿತ್ರವಾಣಿ'ಗೆ ಸೇರುವ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದರು. ಖ್ಯಾತ ನಿರ್ದೇಶಕರು, ನಿರ್ಮಾಪಕರ ಜೊತೆ ಕೆಲಸ ಮಾಡುವ ಮೂಲಕ ಪ್ರಚಾರೋದ್ಯಮದ ಒಳಹೊರಗುಗಳನ್ನೆಲ್ಲ ವೆಂಕಟೇಶ್ ಅರಿತುಕೊಂಡರು.
ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಪ್ರಚಾರ ವೈಖರಿಯನ್ನೂ ಬದಲಾಯಿಸಿಕೊಳ್ಳುತ್ತಾ ಸೋಷಿಯಲ್ ಮೀಡಿಯ ಜಮಾನಾದಲ್ಲೂ ಉದ್ಯಮದಲ್ಲಿ ತೊಡಗಿಸಿಕೊಂಡಿರುವುದು ಅವರ ಹೆಗ್ಗಳಿಕೆ. 2006ರಿಂದ ಇದುವರೆಗೂ 3,000 ಸಿನಿಮಾಗಳಿಗೆ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿನಿಮಾದ ಪ್ರಮೋಷನ್ ನಿಂದ ಹಿಡಿದು, ಮಾಧ್ಯಮ ಸಂಪರ್ಕ, ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲೂ ಅವರು ಎತ್ತಿದ ಕೈ.
ಬಿಡುಗಡೆಗೆ ಸಿದ್ಧವಾಗಿರುವ ಕೆಜಿಎಫ್2 ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ರಾಕ್ ಲೈನ್ ಪ್ರೊಡಕ್ಷನ್ಸ್ ಜಯಣ್ಣ ಕಂಬೈನ್ಸ್, ಶೈಲೇಂದ್ರ ಪ್ರೊಡಕ್ಷನ್ಸ್, ರಾಮೋಜಿ ಫಿಲಂಸ್, ಉಪೇಂದ್ರ ಪ್ರೊಡಕ್ಷನ್ಸ್, ಕಿಚ್ಚ ಕ್ರಿಯೇಷನ್ಸ್, ತೂಗುದೀಪ ಪ್ರೊಡಕ್ಷನ್ಸ್, ಪುಷ್ಕರ್ ಫಿಲಂಸ್. ಎಸ್.ವಿ.ಪ್ರೊಡಕ್ಷನ್ಸ್ ಸೇರಿದಂತೆ ಹಲವು ಹೆಸರಾಂತ ಸಿನಿಮಾ ನಿರ್ಮಾಣ ಸಂಸ್ಥೆಗಳು ವೆಂಕಟೇಶ್ ಜೊತೆ ಸಹಭಾಗಿತ್ವ ಹೊಂದಿವೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲೂ ವೆಂಕಟೇಶ್ ತಮ್ಮದೇ ಛಾಪು ಮೂಡಿಸಿದ್ದಾರೆ.