'ಗಿರ್ಕಿ' ಟೀಸರ್ ಬಿಡುಗಡೆ: ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಗೆ ಸಿದ್ಧತೆ
ಹಾಸ್ಯ ನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, "ಗಿರ್ಕಿ" ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ವಾಸುಕಿ ಭುವನ್ ಅವರು ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
Published: 13th April 2022 10:04 AM | Last Updated: 13th April 2022 01:22 PM | A+A A-

ಗಿರ್ಕಿ ಸಿನಿಮಾ ಸ್ಟಿಲ್
ಹಾಸ್ಯ ನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, "ಗಿರ್ಕಿ" ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ವಾಸುಕಿ ಭುವನ್ ಅವರು ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
ಮಾರ್ಚ್ ನಲ್ಲಿ ಶಿವರಾಜಕುಮಾರ್ ಅವರಿಂದ ಗಿರ್ಕಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಈಗ ಮೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ. ನಟ ಶರಣ್ ಬಿಡುಗಡೆ ಮಾಡಿರುವ ಟೀಸರ್ ಸಾಕಷ್ಟು ಗಮನ ಸೆಳೆದಿದೆ.
ಈ ಚಿತ್ರದ ಟೀಸರ್ ಈಗ ಎಲ್ಲೆಡೆ ಜನಪ್ರಿಯವಾಗಿದೆ. ವೀರೇಶ್ ಪಿ.ಎಂ. ನಿರ್ದೇಶನದ ಈ ಚಿತ್ರದ ಟೀಸರ್ ನಟ ಶರಣ್ ಅವರಿಂದ ಬಿಡುಗಡೆಯಾಗಿದೆ. ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭ ಅಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್‌ನಲ್ಲಿ ಎದ್ದುಕಾಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.
ವಾಸುಕಿ ಮೂವಿ ಪ್ರೊಡಕ್ಷನ್ ಸಹಯೋಗದಲ್ಲಿ ಎಡಿತ್ ಫಿಲ್ಮ್ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ತಯಾರಾದ ಚಿತ್ರಕ್ಕೆ ವೀರಸಮರತ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಸಾಹಿತ್ಯವನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮತ್ತು ಸ್ವತಃ ನಿರ್ದೇಶಕರು ಬರೆದಿದ್ದಾರೆ. ಗಿರ್ಕಿ ಚಿತ್ರಕ್ಕೆ ನವೀನ್ ಕುಮಾರ್ ಚಲ್ಲಾ ಅವರ ಛಾಯಾಗ್ರಹಣವಿದೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಶೀಘ್ರದಲ್ಲೇ ದಿನಾಂಕವನ್ನು ಅಂತಿಮಗೊಳಿಸಲಾಗುವುದು.