
25 ನೇ ವರ್ಷದ ಸಂಭ್ರಮದಲ್ಲಿ ಚಿತ್ರ ತಂಡ
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ 'ಅಮೆರಿಕಾ ಅಮೆರಿಕಾ' ಸಿನಿಮಾ ಕೂಡ ಒಂದು. ಈ ಅದ್ಭುತ ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದಲ್ಲಿ ಬಂದಿರುವ ಈ ಸೂಪರ್ ಹಿಟ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಅಕ್ಷಯ್ ಆನಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಾಲ ಶತಮಾನ ಕಳೆದರೂ ಈ ಸಿನಿಮಾ ಇಂದಿಗೂ ಪ್ರಸ್ತುತವಾಗಿದೆ. ಆಗಿನ ಕಾಲದಲ್ಲೇ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕಾಗೆ ಹೋಗಿ ಶೂಟಿಂಗ್ ಮಾಡಿದ ಹೆಗ್ಗಳಿಕೆ ಕೂಡ ಈ ಚಿತ್ರಕ್ಕಿದೆ.
1997 ಏಪ್ರಿಲ್ 11ರಂದು ತೆರೆಗೆ ಬಂದ ಈ ಸಿನಿಮಾ ಕನ್ನಡ ಚಿತ್ರರಸಿಕರ ಮನಗೆದ್ದಿತ್ತು. 1996 ಜೂನ್ 26ರಂದು ಅಮೆರಿಕಾ ಅಮೆರಿಕಾ ಸಿನಿಮಾದ ಮುಹೂರ್ತ ನಡೆದಿತ್ತು. ತ್ರಿಕೋನ ಪ್ರೇಮಕಥೆಯ ಜೊತೆಗೆ ಭಾರತ ಮತ್ತು ಅಮೆರಿಕಾದ ನಡುವಿನ ಸಾಂಸ್ಕೃತಿಕ ವ್ಯತ್ಯಾಸ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದರು. ಅಮೆರಿಕದಲ್ಲಿರುವ ಹುಡುಗನನ್ನು ಮದುವೆಯಾಗಿ ಭಾರತದಿಂದ ಅಮೆರಿಕಾಗೆ ಹೋಗುವ ಹುಡುಗಿಯ ಪಾತ್ರದಲ್ಲಿ ಹೋಮಾ ಪಂಚಮುಖಿ ನಟಿಸಿದ್ದರು. ಅಮೆರಿಕಾ ಹುಡುಗನ ಪಾತ್ರದಲ್ಲಿ ಅಕ್ಷಯ್ ಆನಂದ್ ಕಾಣಿಸಿಕೊಂಡಿದ್ದರು.
1997ರಲ್ಲಿ ರಿಲೀಸ್ ಆಗಿದ್ದ ಅಮೆರಿಕಾ ಅಮೆರಿಕಾ ಸಿನಿಮಾ, ಆ ಕಾಲದಲ್ಲಿ ನಿರ್ಮಾಪಕ ನಂದಕುಮಾರ್ ಬರೋಬ್ಬರಿ 70 ರಿಂದ 75 ಲಕ್ಷ ರೂಪಾಯಿಯಲ್ಲಿ ನಿರ್ಮಾಣ ಮಾಡಿದ್ದರು. ಆ ಕಾಲದಲ್ಲಿ 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ, ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಈ ಸಿನಿಮಾದ್ದಾಗಿದೆ. ಹೀಗೆ ಸಾಕಷ್ಟು ಸ್ಪೆಷಾಲಿಟಿ ಇರುವ ಅಮೆರಿಕಾ ಅಮೆರಿಕಾ ಸಿನಿಮಾದ, ಬಗ್ಗೆ ಮಾತನಾಡೋದಿಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟರಾದ ರಮೇಶ್ ಅರವಿಂದ್, ಅಕ್ಷಯ್ ಆನಂದ್, ನಟಿ ಹೇಮಾ ಪಂಚಮುಖಿ, ನಿರ್ಮಾಪಕ ನಂದಕುಮಾರ್, ಸಂಗೀತ ನಿರ್ದೇಶಕ ಮನೋಮೂರ್ತಿ, ಹಿರಿಯ ನಟ ದತ್ತಣ್ಣ ಸೇರಿದಂತೆ ಕೆಲ ತಾರೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್, ಅಮೆರಿಕಾ ಅಮೆರಿಕಾ ಸಿನಿಮಾ ನನ್ನ ಸಿನಿ ಜರ್ನಿಯ ಬೆಸ್ಟ್ ಸಿನಿಮಾಗಳಲ್ಲಿ ಒಂದು. ನಾನು, ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕದಲ್ಲಿ ಕನ್ನಡ ಸಿನಿಮಾ ಮಾಡಬೇಕು ಅಂತಾ ಹೋಗಿದ್ವಿ. ಆದರೆ ಅಮೆರಿಕಾದಲ್ಲಿ ಆದ ಅನುಭವಗಳು ಮರೆಯೋದಿಕ್ಕೆ ಆಗೋಲ್ಲ ಎಂದರು. ಇದರ ಜೊತೆಗೆ ಈ ಸಿನಿಮಾಗಾಗಿ ಎರಡನೇ ಬಾರಿ ವೀಸಾ ಮಾಡಿಸಿದ್ದು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಾಯಕಿ ಹೇಮಾ ಅವರನ್ನು ಬದಲಾವಣೆ ಮಾಡಬೇಕು ಅಂದಾಗ ಎದುರಾದ ಚಾಲೆಂಜ್ ಮತ್ತು ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ನನ್ನ ಪಾತ್ರದ ರಮೇಶ್ ಅರವಿಂದ್ ತಮ್ಮದೇ ಮಾತುಗಳಲ್ಲಿ ವರ್ಣಿಸಿದರು. ಈ ವೇಳೆ ಅಮೆರಿಕಾ ಅಮೆರಿಕಾ ಪುಸ್ತಕವನ್ನ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅನಂತರ ಮಾತು ಶುರು ಮಾಡಿದ ನಿರ್ದೇಶಕ ನಾಗತಿಹಳ್ಳಿ, ಈ ಸಿನಿಮಾ ಶುರು ಮಾಡೋದಿಕ್ಕೆ ಕಾರಣ ಮುದ್ದು ಕೃಷ್ಣ. ಯಾಕೆಂದರೆ ಈ ಸಿನಿಮಾ ಮಾಡೋದಿಕ್ಕೆ ನಿರ್ಮಾಪಕ ಸಿಗದೆ ಇದ್ದ ಸಮಯದಲ್ಲಿ ನನಗೆ ನಂದಕುಮಾರ್ ಅವರನ್ನು ಪರಿಚಯ ಮಾಡಿಸಿ ಸಿನಿಮಾ ಮಾಡೋದಕ್ಕೆ ಸಹಾಯ ಮಾಡಿದ್ದರು. ಆ ಸಮಯದಲ್ಲಿ ನಾನು ಅಮೆರಿಕಕ್ಕೆ ಹೋದಾಗ ತಬ್ಬಲಿಯಾಗಿ ನಿಂತಿದ್ದೆ. ನಾವು ಸಿನಿಮಾ ಶೂಟಿಂಗ್ ಅಂತಾ ಅಮೆರಿಕಕ್ಕೆ ಹೋರಟಾಗ, ಪ್ರಖ್ಯಾತ ಸಿನಿಮಾ ನಿರ್ಮಾಪಕರು ನಮ್ಮನ್ನ ಗೇಲಿ ಮಾಡಿದ್ದರು.
ಅಮೆರಿಕಾದಲ್ಲಿ ಸಿನಿಮಾ ಶೂಟಿಂಗ್ ಮಾಡೋದಕ್ಕೆ ಮುಖ್ಯ ಕಾರಣ ನನ್ನ ಪತ್ನಿ ಶೋಭಾ. ಈ 25 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂದರು. ಈ ಸಿನಿಮಾದಲ್ಲಿ ಅಕ್ಷಯ್ ಆನಂದ್ ಪಾತ್ರವನ್ನು ಸುದೀಪ್ ಮಾಡಬೇಕಿತ್ತು. ದತ್ತಣ್ಣ ಅವರ ಸಹಾಯದಿಂದ ಹೇಮಾ ಪಂಚಮುಖಿ ಈ ಸಿನಿಮಾಗೆ ನಾಯಕಿ ಆಗಿ ಸೆಲೆಕ್ಟ್ ಆದರು ಎಂಬುದನ್ನು ವಿವರಿಸಿದರು. ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗೋದಕ್ಕೆ ಕಾರಣ ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತು ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಮಂಜುಳಾ ಗುರುರಾಜ್ ಎಂದರು.