
ನಟ ದರ್ಶನ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ‘ಕ್ರಾಂತಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಚಿತ್ರ ತಂಡ ಪ್ರಸ್ತುತ ಹೈದರಾಬಾದ್ ನಲ್ಲಿದ್ದು, ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಚಿತ್ರದ ಶೇ.70ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ ಬಾಕಿಯಿರುವ ಚಿತ್ರೀಕರಣ ಪೂರ್ಣಗೊಳಿಸಿ, ಉಳಿದ ಚಿತ್ರೀಕರಣಕ್ಕೆ ಮೇ ತಿಂಗಳಿನಲ್ಲಿ ವಿದೇಶಕ್ಕೆ ತೆರಳಲಿದೆ ಎಂದು ತಿಳಿದುಬಂದಿದೆ. ಆದರೆ, ವಿದೇಶದಲ್ಲಿ ಯಾವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.
ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅವರು ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಸುಮಲತಾ ಅಂಬರೀಷ್ ಕೂಡ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ತಾರಾಗಣವೇ ಚಿತ್ರದಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿ: 'ಮೆಜೆಸ್ಟಿಕ್' ಸಿನಿಮಾ ಥರ ಇನ್ನೊಂದು ಸಿನಿಮಾ ಮಾಡೋಕಾಗಲ್ಲ: ದಾಸ ದರ್ಶನ್ ಅಭಿನಯದ 'ಮೆಜೆಸ್ಟಿಕ್' ರೀರಿಲೀಸ್
2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ‘ಕ್ರಾಂತಿ’ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗಿದೆ. ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಚಿತ್ರಕಥೆ, ನಿರ್ದೇಶನ ಹಾಗೂ ದರ್ಶನ್ ಅವರ ಭರ್ಜರಿ ಡೈಲಾಗ್ಗಳು ಹಾಗೂ ಸಾಹಸ ದೃಶ್ಯಗಳಿಂದ ‘ಯಜಮಾನ’ ಚಿತ್ರ ಯಶಸ್ಸು ಕಂಡಿತ್ತು. ನಿರ್ದೇಶನದ ಜೊತೆಗೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದವು. ಕೆಲ ದಿನಗಳ ಹಿಂದೆ ನಡೆದ ಸೈಮಾದಲ್ಲಿ 8 ಪ್ರಶಸ್ತಿಗಳನ್ನು ‘ಯಜಮಾನ’ ಚಿತ್ರವು ಪಡೆದಿತ್ತು. ದರ್ಶನ್ ಈ ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದಿದ್ದರು.