
ಚಿತ್ರದ ಫಸ್ಟ್ ಲುಕ್
ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸುತ್ತಿದ್ದು, ಕನ್ನಡದ ಜತೆಗೆ ತೆಲುಗು ಭಾಷೆಯ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ 'ಕಾಲಚಕ್ರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸಜ್ಜಾಗಿದ್ದಾರೆ. ಚಿತ್ರಕ್ಕೆ 'Love..ಲಿ' ಎಂಬ ಹೆಸರನ್ನು ಇಡಲಾಗಿದೆ.
ನಿನ್ನೆಯಷ್ಟೇ ಬೆಂಗಳೂರಿನ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಚಿತ್ರದ ಮುಹೂರ್ತ ಸರಳವಾಗಿ ನೆರವೇರಿದ್ದು, ಚಿತ್ರತಂಡ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದೆ.
ಚಿತ್ರದ ಫಸ್ಟ್ ಲುಕ್ ನಲ್ಲಿ ವಸಿಷ್ಠ ಸಿಂಹ ಅವರು ಬೈಕ್ ಮೇಲೆ ಕುಳಿತು... ಧಮ್ ಹೊಡೆಯುತ್ತಾ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Love…ಲಿ’ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, ರೋಮ್ಯಾಂಟಿಕ್ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ರವೀಂದ್ರ ಕುಮಾರ್ ಅವರ ಅಭುವನಾಶ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ Love…ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಮುಂದಿನವಾರ ಚಿತ್ರ ಸೆಟ್ ಏರಲಿದೆ.
ಚೇತನ್ ಕುರಿತಂತೆ ಮಾತನಾಡಿರುವ ವಸಿಷ್ಠ ಅವರು, ಚೇತನ್ ಮಲ್ಟಿ ಪ್ರೊಫೈಲ್ ಪರ್ಸನಾಲಟಿಯುಳ್ಳ ವ್ಯಕ್ತಿಯೆಂದೇ ಹೇಳಬಹುದು. ಡ್ಯಾನ್ಸರ್, ಆರ್ಟಿಸ್ಟ್ ಹಾಗೂ ಫಿಟ್ನೆಸ್ ಟ್ರೈನರ್ ಕೂಡ ಆಗಿದ್ದಾರೆ. ಮುಫ್ತಿ ಚಿತ್ರ (2016)ದಿಂದಲೂ ಅವರು ನನ್ನೊಂದಿಗಿದ್ದಾರೆ. ಅವರೊಂದಿಗೆ ಕೆಲಸ ಮಾಡುತ್ತಾ ಅವರ ಕಲೆಯನ್ನೂ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಇನ್ನು ಸಿನಿಮಾ ಕುರಿತು ಮಾತನಾಡಿ, ಚಿತ್ರವು ಥ್ರಿಲ್ಲರ್ ಜೊತೆಗೆ ಪ್ರೇಮಕಥೆಯನ್ನು ಹೊಂದಿದೆ. ಕೆಲವು ಸಾಮಾಜಿಕ ಅನಿಷ್ಟಗಳನ್ನು ಚಿತ್ರವು ಎತ್ತಿ ತೋರಿಸುತ್ತದೆ. ಇದು ಸಾಮಾನ್ಯ ಚಿತ್ರ ಎಂದು ನಾನು ಭಾವಿಸುವುದಿಲ್ಲ. ಹೀಗಾಗಿಯೇ ಚಿತ್ರವನ್ನು ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.