
ಡಾ ರಾಜ್ ಕುಮಾರ್ ಸಂಗ್ರಹ ಚಿತ್ರ
ಬೆಂಗಳೂರು: ಕನ್ನಡದ ವರನಟ, ಗಾನ ಗಂಧರ್ವ, ಪದ್ಮ ಭೂಷಣ, ನಟಸಾರ್ವಭೌಮ ಡಾ.ರಾಜ್ ಕುಮಾರ್(Dr Rajkumar) ಅವರ 93ನೇ ಹುಟ್ಟುಹಬ್ಬ ಇಂದು(ಏಪ್ರಿಲ್ 24).
ಚಾಮರಾಜನಗರ ಜಿಲ್ಲೆ ಗಡಿಭಾಗದಲ್ಲಿರುವ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಮುತ್ತುರಾಜ್ ಜನಿಸಿ ಕನ್ನಡ ಚಿತ್ರರಂಗ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ಡಾ. ರಾಜ್ ಕುಮಾರ್ ಅವರೊಂದು ಶಕ್ತಿ, ಮೇರು ವ್ಯಕ್ತಿತ್ವ ಎಂದೇ ಜನರು ಭಾವಿಸುತ್ತಾರೆ.
ಇಂದು ಅವರ 93ನೇ ಹುಟ್ಟಿದ ದಿನದ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಡಾ.ರಾಜ್ ಸ್ಮಾರಕಕ್ಕೆ ಅವರ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು ಆಗಮಿಸಿ ಬೆಳಗ್ಗೆಯೇ ಪೂಜೆ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಂತರ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆ ಮಾಡಿದರು.
ಅಭಿಮಾನಿ ಸಂಘಗಳಿಂದ ರಥಯಾತ್ರೆ
ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಅಭಿಮಾನಿ ಸಂಘಗಳಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಡಾ.ರಾಜ್ ಸಮಾಧಿಯಿಂದ ಕೂಲಿ ನಗರ ಬ್ರಿಡ್ಜ್ ವರೆಗೆ ಶ್ರೀರಾಜ್ ರಥೋತ್ಸವ ನಡೆದ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ಡಾ.ರಾಜ್ ಸ್ಮಾರಕಕ್ಕೆ ನಳೀನ್ ಕುಮಾರ್ ಕಟೀಲ್ ಸೇರಿದಂತೆ ರಾಜಕೀಯ ನಾಯಕರು, ಸರ್ಕಾರದ ಜನಪ್ರತಿನಿಧಿಗಳು ಭೇಟಿ: ಡಾ.ರಾಜ್ ಕುಮಾರ್ ಅವರು ಪರಂಪರೆಗಳನ್ನು ಸೃಷ್ಟಿಸಿದ ಶ್ರೇಷ್ಠ ಕಲಾವಿದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇಂದು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಅವರು, ಕನ್ನಡ ಭಾಷೆ, ನೆಲಕ್ಕೆ ಅದ್ಬುತ ಕೊಡುಗೆ ಕೊಟ್ಟ ನಟ. ಅವರ ಹುಟ್ಟುಹಬ್ಬದ ಪ್ರಯುಕ್ತ ಸಮಾಜಕ್ಕೆ ಅವರು ನೀಡಿರುವ ಕೊಡುಗಗಳನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಅವರ ನೆನಪು ಸದಾ ನಮ್ಮ ಜೊತೆಗೆ ಇದೆ. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಡಾ.ರಾಜ್ ಸಮಾಧಿ ಸಂಬಂಧ ಕೆಲವು ಬೇಡಿಕೆಗಳು ಇದ್ದು, ಅವುಗಳನ್ನು ಸರ್ಕಾರಕ್ಕೆ ತಲುಪಿಸುತ್ತೇವೆ ಎಂದರು.
ಇಂದು ಡಾ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ನಾಡಿನ ಅನೇಕ ಗಣ್ಯರು, ಕಲಾವಿದರು ಅವರನ್ನು ಸ್ಮರಿಸಿಕೊಂಡಿದ್ದಾರೆ.