ಡಾ.ರಾಜ್, ವಿಷ್ಣುವರ್ಧನ್ ರಂತಹ ದೇವಮಾನವರನ್ನು ಬಾಲಿವುಡ್ ಅವಮಾನಿಸಿತು: 23 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಮೆಗಾಸ್ಟಾರ್ ಚಿರಂಜೀವಿ
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ನೀಡಿರುವ ಹೇಳಿಕೆಗೆ ಬಾಲಿವುಡ್ ಸಿಂಗಂ ಅಜಯ್ ದೇವಗನ್ ಪ್ರತಿಕ್ರಿಯೆ ಕೊಟ್ಟ ನಂತರ ದೇಶಾದ್ಯಂತ ಭಾಷಾ ವಿಚಾರ, ಭಾರತೀಯ ಚಿತ್ರೋದ್ಯಮ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
Published: 29th April 2022 11:18 AM | Last Updated: 29th April 2022 12:46 PM | A+A A-

ಡಾ ರಾಜ್ ಕುಮಾರ್, ಮೆಗಾಸ್ಟಾರ್ ಚಿರಂಜೀವಿ, ಡಾ ವಿಷ್ಣುವರ್ಧನ್(ಸಂಗ್ರಹ ಚಿತ್ರ)
ಹೈದರಾಬಾದ್: ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ (Kichcha Sudeepa) ನೀಡಿರುವ ಹೇಳಿಕೆಗೆ ಬಾಲಿವುಡ್ ಸಿಂಗಂ ಅಜಯ್ ದೇವಗನ್ (Ajay Devagan) ಪ್ರತಿಕ್ರಿಯೆ ಕೊಟ್ಟ ನಂತರ ದೇಶಾದ್ಯಂತ ಭಾಷಾ ವಿಚಾರ, ಭಾರತೀಯ ಚಿತ್ರೋದ್ಯಮ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇದೀಗ ವಾರದ ಹಿಂದೆ ಮೆಗಾಸ್ಟಾರ್ ಚಿರಂಜೀವಿಯವರು (Mega star Chiranjeevi) ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಅದು ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ನಟಿಸಿರುವ ಮುಂಬರುವ ಚಿತ್ರ ಆಚಾರ್ಯದ ಪ್ರಿ ರಿಲೀಸ್ ಕಾರ್ಯಕ್ರಮ. ಅದರಲ್ಲಿ ಚಿರಂಜೀವಿಯವರು 1989ರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಅದು 1989ರಲ್ಲಿ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಳಿಗೆಯಾಗಿತ್ತಂತೆ. ತಮ್ಮ ರುದ್ರವೀಣ ಚಿತ್ರಕ್ಕೆ ಪ್ರತಿಷ್ಟಿತ ನರ್ಗೀಸ್ ದತ್ ಪ್ರಶಸ್ತಿ ಪ್ರದಾನ ಸಂದರ್ಭ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಟೀ ಪಾರ್ಟಿ ಆಯೋಜಿಸಲಾಗಿತ್ತು. ಆ ಸಭಾಂಗಣದ ಗೋಡೆಯಲ್ಲಿ ಭಾರತೀಯ ಚಿತ್ರೋದ್ಯಮದ ಇತಿಹಾಸ, ಖ್ಯಾತನಾಮರ ಚಿತ್ರಗಳನ್ನು ತೋರಿಸಲಾಗಿತ್ತು. ಅಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಿದ್ದನ್ನು, ಅಲ್ಲಿ ಜಯಲಲಿತಾ ಜೊತೆ ಎಂಜಿಆರ್ ಇರುವ ಸ್ಟಿಲ್ ಮತ್ತು ಪ್ರೇಮ್ ನಜೀರ್ ಫೋಟೋ ಮಾತ್ರ ಇತ್ತು. ಅದಕ್ಕೆ ‘ಸೌತ್ ಫಿಲಂಸ್’ ಎಂದು ಹೆಸರಿಟ್ಟಿದ್ದರಂತೆ.
ಡಾ. ರಾಜ್‌ಕುಮಾರ್ (Dr Rajkumar), ವಿಷ್ಣುವರ್ಧನ್ (Dr Vishnuvardhan) , ಎನ್‌ಟಿ ರಾಮರಾವ್, ನಾಗೇಶ್ವರ ರಾವ್ ಅಥವಾ ಶಿವಾಜಿ ಗಣೇಶನ್ ಅವರಂತಹ ದಿಗ್ಗಜರನ್ನು ಅಥವಾ ನಮ್ಮ ಉದ್ಯಮಗಳ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರನ್ನು ಗುರುತಿಸಿರಲಿಲ್ಲವಂತೆ. ಆ ಕ್ಷಣದಲ್ಲಿ ನನಗೆ ತುಂಬಾ ಅವಮಾನವಾಯಿತು. ಅದೊಂದು ಅಪಮಾನದಂತಿತ್ತು. ಭಾರತೀಯ ಚಿತ್ರರಂಗ ಎಂದರೆ ಹಿಂದಿ ಸಿನಿಮಾ ಎಂಬ ಭಾವನೆಯಿತ್ತು. ಇತರ ಚಿತ್ರಗಳನ್ನು 'ಪ್ರಾದೇಶಿಕ ಚಿತ್ರಗಳು' ಎಂದು ಪರಿಗಣಿಸಿ ಅಷ್ಟೊಂದು ಗೌರವ ಸಿಗುತ್ತಿರಲಿಲ್ಲ ಎಂದಿದ್ದಾರೆ ಮೆಗಾಸ್ಟಾರ್.
ಇದನ್ನೂ ಓದಿ: ಉತ್ತರದ ಸ್ಟಾರ್ ಗಳಿಗೆ ದಕ್ಷಿಣದ ಸ್ಟಾರ್ ಗಳ ಬಗ್ಗೆ ಅಸೂಯೆ: ಕಿಚ್ಚ ಸುದೀಪ್ ಪರ ನಿಂತ ಆರ್ ಜಿವಿ!
ಬಾಹುಬಲಿ, ಆರ್ ಆರ್ ಆರ್, ಕೆಜಿಎಫ್, ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಸಕ್ಸಸ್: ಬಾಹುಬಲಿ, ಆರ್‌ಆರ್‌ಆರ್, ಪುಷ್ಪ ಮತ್ತು ಕೆಜಿಎಫ್‌ನಂತಹ ಚಲನಚಿತ್ರಗಳು ದಕ್ಷಿಣ ಭಾರತದ ನಿರ್ದೇಶಕರು, ನಟರು ಮತ್ತು ಬರಹಗಾರರನ್ನು ರಾಷ್ಟ್ರವು ಗುರುತಿಸುವಂತೆ ಮಾಡುತ್ತಿವೆ ಎಂದರು.
ಪ್ರಾದೇಶಿಕ ಅಡೆತಡೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿ ಚಲನಚಿತ್ರಗಳನ್ನು ನಿರ್ಮಿಸಿದ ಎಸ್ಎಸ್ ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಅವರಂತಹ ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ರಾಜಮೌಳಿ ಅವರನ್ನು ‘ಭಾರತೀಯ ಚಿತ್ರರಂಗದ ದೇವಮಾನವ’ ಎಂದು ಕರೆದಿದ್ದಾರೆ. “ಬಾಹುಬಲಿ ಪ್ರಾದೇಶಿಕ ಮತ್ತು ಹಿಂದಿ ಚಿತ್ರರಂಗದ ನಡುವಿನ ವಿಭಜನೆಯನ್ನು ತೆಗೆದುಹಾಕಿ ನಾವೆಲ್ಲರೂ ಭಾರತೀಯ ಚಲನಚಿತ್ರೋದ್ಯಮದ ಭಾಗವೆಂದು ಸಾಬೀತುಪಡಿಸಿದಂತೆ ನನಗೆ ಹೆಮ್ಮೆ ತಂದಿತು. ಈ ಚಿತ್ರಗಳು ತೆಲುಗು ಪ್ರೇಕ್ಷಕರಿಗೆ ಹೆಮ್ಮೆ ತಂದಿವೆ. ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತಹ ಚಿತ್ರಗಳನ್ನು ನಮಗೆ ನೀಡಿದ ಎಸ್‌ಎಸ್ ರಾಜಮೌಳಿ ಅವರಿಗೆ ಹ್ಯಾಟ್ಸ್ ಆಫ್. ಅವರು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ಚಿರಂಜೀವಿ ಮನಸಾರೆ ಕಾರ್ಯಕ್ರಮದಲ್ಲಿ ಹೊಗಳಿದರು.