
ಸಾಂದರ್ಭಿಕ ಚಿತ್ರ
ಬೆಂಗಳೂರು: 73 ವರ್ಷದ ಕೈಗಾರಿಕೋದ್ಯಮಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ನಟನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ನಟನ ಸ್ನೇಹಿತರು ಎಂದು ಹೇಳಲಾದ ಇಬ್ಬರು ಮಹಿಳೆಯರು ಸೇರಿದಂತೆ ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಟನನ್ನು ಜೆಪಿ ನಗರದ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ನಿಧಿ ಮತ್ತು ಕವನಾ ಎಂದು ಗುರುತಿಸಲಾಗಿದೆ. ಸಂತ್ರಸ್ತನಿಗೆ ಕೆಲ ದಿನಗಳ ಹಿಂದೆ ಕವನ ಪರಿಚಯವಾಗಿದ್ದು, ಬಳಿಕ ಆಕೆ ತನ್ನ ಸ್ನೇಹಿತೆ ನಿಧಿಯನ್ನು ಕೂಡ ಆತನಿಗೆ ಪರಿಚಯಿಸಿದ್ದಳು.
ಸಂತ್ರಸ್ತ ಮತ್ತು ಕವನ ಹಾಗೂ ನಿಧಿ ವಾಟ್ಸಾಪ್‌ನಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಇವರಿಬ್ಬರು ಕೈಗಾರಿಕೋದ್ಯಮಿಗೆ ತಮ್ಮ ಅಶ್ಲೀಲ ಚಿತ್ರಗಳನ್ನು ಕಳುಹಿಸುವ ಮೂಲಕ ಆಮಿಷ ಒಡ್ಡುತ್ತಿದ್ದರು ಎನ್ನಲಾಗಿದೆ. ನಂತರ, ಆಗಸ್ಟ್ 3 ರಂದು ತನ್ನನ್ನು ಭೇಟಿಯಾಗಲು ನಿಧಿ ವ್ಯಕ್ತಿಯನ್ನು ಕೇಳಿದ್ದಾಳೆ. ಆತ ಆಕೆಯನ್ನು ಭೇಟಿಯಾದಾಗ, ಪೋಲೀಸರೆಂದು ಹೇಳಿಕೊಳ್ಳುವ ಇಬ್ಬರು ಪುರುಷರು, ಕವನಾ ಮತ್ತು ನಿಧಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿರುವ ಸಂದೇಶಗಳ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಹಣ ನೀಡಿದರೆ ವಿಷಯವನ್ನು ಮುಚ್ಚಿಹಾಕಲು ಸಹಾಯ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
'ಬೆದರಿಕೆ ಹಾಕಿದ ನಂತರ ಸಂತ್ರಸ್ತ, ವಾಟ್ಸಾಪ್ ಸಂದೇಶಗಳನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳದಿರಲು ಅವರಿಗೆ 3.4 ಲಕ್ಷ ರೂ. ಮತ್ತು ನಂತರ 6 ಲಕ್ಷ ರೂ. ಗಳನ್ನು ನೀಡಿದ್ದಾರೆ. ಹೀಗಿದ್ದರೂ, ಆರೋಪಿಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಕೈಗಾರಿಕೋದ್ಯಮಿ ನಮ್ಮನ್ನು ಸಂಪರ್ಕಿಸಿದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಮಧ್ಯೆ, ಆ ಇಬ್ಬರು ಮಹಿಳೆಯರು ಮತ್ತು ಯುವರಾಜ್ ಸ್ನೇಹಿತರು ಎಂಬುದು ಪೊಲೀಸರಿಗೆ ತಿಳಿದಿದೆ. ಆತನು ಕೂಡ ಬೇರೆ ಮೊಬೈಲ್ ಸಂಖ್ಯೆಯಿಂದ ನಿಧಿ ಹೆಸರಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ. ಇನ್ನೂ ಬಿಡುಗಡೆಯಾಗದ ಕನ್ನಡ ಸಿನಿಮಾವೊಂದರಲ್ಲಿ, ಯುವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.