ಕನ್ನಡ ನಾಡಿನ ಲೇಡೀಸ್ ಅಂಡ್ ಜೆಂಟಲ್ ಮೆನ್ ಹೊಸ ಬಗೆಯ ಕಂಟೆಂಟ್ ವೆಲ್ಕಮ್ ಮಾಡ್ತಾರೆ: ನಟ ದಾನಿಶ್ ಸೇಟ್ ಸಂದರ್ಶನ
ಕನ್ನಡ ಚಿತ್ರರಂಗ ಹಾಗೂ ಮನರಂಜನಾ ಉದ್ಯಮದಲ್ಲಿ ತಮ್ಮದೇ ಸ್ಥಾನ ಕಂಡುಕೊಳ್ಳುತ್ತಿರುವ ದಾನಿಶ್ ಸೇಟ್ ನಟಿಸಿರುವ, ವಂಸೀಧರ್ ಭೋಗರಾಜು ಅವರ ನಿರ್ದೇಶನದ ಕನ್ನಡ ಸಿನಿಮಾ 'ಒನ್ ಕಟ್ ಟೂ ಕಟ್' ಫೆ.3ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾಗುತ್ತಿದೆ. ಈ ಪ್ರಯುಕ್ತ ದಾನಿಶ್ ಜೊತೆಗೆ kannadaprabha.com ನಡೆಸಿದ ಸಂದರ್ಶನ ಇಲ್ಲಿದೆ.
Published: 01st February 2022 07:52 PM | Last Updated: 05th February 2022 12:38 PM | A+A A-

ಸಿನಿಮಾ ಪೋಸ್ಟರ್
ಸಂದರ್ಶನ: ಹರ್ಷವರ್ಧನ್ ಸುಳ್ಯ
ಒನ್ ಕಟ್ ಟೂ ಕಟ್ ಸಿನಿಮಾ ಮೀನಿಂಗ್ ಹೇಳ್ತೀರಾ?
ನಾನು ಬೆಂಗ್ಳೂರ್ ಶಾಲೇಲಿ ಓದ್ತಾ ಇರೋವಾಗ ಒಬ್ರು ಕ್ರಾಫ್ಟ್ ಟೀಚರ್ ಇದ್ರು. ಪೇಪರ್ ನಲ್ಲಿ ಕ್ರಾಫ್ಟ್ ಮಾಡ್ತಾ ಒನ್ ಕಟ್ ಟೂ ಕಟ್ ಅಂತ ಹೇಳುತ್ತಾ ಕಾಗದದ ಹೂ ಮಾಡೋರು. ಕ್ರಾಫ್ಟ್ ಟೀಚರ್ ಆಗೋದು ಅಂದರೆ ಎಲ್ಲಾರ್ಗೂ ಸಾಧ್ಯವಿಲ್ಲ. ಜೀವನವನ್ನ, ಮಕ್ಕಳನ್ನ ಪ್ರೀತಿಸೋರು ಮಾತ್ರ ಆ ವೃತ್ತಿಯನ್ನ ಸೆಲೆಕ್ಟ್ ಮಾಡ್ಕೋತಾರೆ. ಹೀಗಾಗಿ ಒನ್ ಕಟ್ ಟೂ ಕಟ್ ಅಂತ ಇಟ್ವಿ.
ಸಿನಿಮಾದಲ್ಲಿ ನೀವು ಬಿಟ್ಟಿರೋ ಮೀಸೆ ಚಾಪ್ಲಿನ್ ದಾ? ಹಿಟ್ಲರ್ ದಾ?
ಡೆಫೆನೆಟ್ಲಿ ಚಾಪ್ಲಿನ್ ದು. ಟೂತ್ ಬ್ರಶ್ ಥರ ಇರೋ ಆ ಮೀಸೆ ಒಂದು ಕಾಲದಲ್ಲಿ ಟ್ರೆಂಡ್ ಆಗಿತ್ತು. ನಿರ್ದಿಷ್ಟ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಗತ ಕಾಲದ ಆ ಗತ್ತನ್ನು, ಇನೋಸೆನ್ಸ್ ಅನ್ನು ನೆನಪಿಸುವ ಪ್ರಯತ್ನ ಆ ಮೀಸೆ.
ಅಮೆಜಾನ್ ಪ್ರೈಮ್ ವಿಡಿಯೋಗೆ ಕನ್ನಡದ ಪೋಸ್ಟರ್ ಬಾಯ್ ಆಗ್ಬಿಟ್ಟಿದ್ದೀರಾ...
ಬಹಳ ಹಿಂದಿನಿಂದಲೇ ಇಂಟರ್ನೆಟ್ ನಲ್ಲಿ ನಂಬಿಕೆಯಿಟ್ಟವನು ನಾನು. ಇಂಟರ್ನೆಟ್ ಟ್ರೆಂಡ್ ತಕ್ಕಂತೆ ಕಂಟೆಂಟ್ ಮಾಡಿದ್ದೀನಿ. ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿರೋ ನನ್ನ ಮೂರನೇ ಸಿನಿಮಾ ಒನ್ ಕಟ್ ಟೂ ಕಟ್. ನನ್ನಂಥ ಸಣ್ಣ ಕಂಟೆಂಟ್ ಕ್ರಿಯೇಟರ್, ಕಲಾವಿದನಿಗೆ ಸಿನಿಮಾ ಡಿಸ್ಟ್ರಿಬ್ಯೂಷನ್ ಅನ್ನೋದು ರಾಕೆಟ್ ಸೈನ್ಸ್. ಆಯಾ ಸೆಂಟರ್ ಆಡಿಯೆನ್ಸ್ ಗೆ ತಕ್ಕಂತೆ ಸಿನಿಮಾ ಮಾಡೋದು ಅಂದರೆ ಏನೆಂದೇ ಗೊತ್ತಿಲ್ಲ. ಆ ತಲೆನೋವನ್ನು ಅಮೆಜಾನ್ ಪ್ರೈಮ್ ವಿಡಿಯೋ ಥರದ ಒಟಿಟಿ ನಿವಾರಿಸಿದೆ. ಹೋಗಬೇಕಾಗಿರೋ ಹಾದಿ ದೂರ ಇದೆ.
ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಸಿನಿಮಾದಲ್ಲಿ ವಂಸೀಧರ್ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು, ಒಂದು ಕಟ್ ಟೂ ಕಟ್ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ನಾನು ಅವನು ಹಳೆಯ ಸ್ನೇಹಿತರು. ಲೈಫಲ್ಲಿ ನಾವು ಬೆಳೆಯುತ್ತಿರುವ ಸಂತಸಕ್ಕಿಂತ ನಮ್ಮ ಜೊತೆ ಇರುವವರೂ ಬೆಳೆಯುತ್ತಿರೋದನ್ನು ನೋಡೋದು ಇದೆಯಲ್ಲ. ಅದು ತುಂಬಾ ಸಂತಸ ಕೊಡುತ್ತೆ.
ಕನ್ನಡ ಚಿತ್ರರಂಗ ಮತ್ತು ಮನರಂಜನಾ ಕ್ಷೇತ್ರದಲ್ಲಿ ನಿಮ್ಮದೇ ಆದ ಸ್ಥಾನ ಕಂಡುಕೊಳ್ಳುತ್ತಿದ್ದೀರಾ. ಹೊಸ ಬಗೆಯ ಕಂಟೆಂಟ್ ಕುರಿತಾಗಿ ಕನ್ನಡ ಆಡಿಯೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯ.
ಓಹ್ ಸರ್, ಕನ್ನಡ ಆಡಿಯೆನ್ಸ್ ಯಾವತ್ತೂ ಹೊಸ ಬಗೆಯ ಕಂಟೆಂಟ್ ಅನ್ನ ವೆಲ್ಕಮ್ ಮಾಡ್ತಾರೆ. ಅದರಲ್ಲಿ ದೂಸ್ರಾ ಮಾತೇ ಇಲ್ಲ. ಒನ್ ಕಟ್ ಟೂ ಕಟ್ ಸಿನಿಮಾ ಆಕ್ಷನ್, ಕಾಮಿಡಿ ಥ್ರಿಲ್ಲರ್ ಪ್ರಕಾರದ್ದು. ಈ ಹೊಸ ಪ್ರಯತ್ನವೂ ಅವರಿಗೆ ಇಷ್ಟ ಆಗುತ್ತೆ.
ಪುನೀತ್ ರಾಜ್ ಕುಮಾರ್ ಅವರ PRK ಪ್ರೊಡಕ್ಷನ್ ಸಂಸ್ಥೆ ಜೊತೆಗೆ ಇದು ನಿಮ್ಮ ಎರಡನೇ ಸಿನಿಮಾ. ಪುನೀತ್ ಅವರೊಂದಿಗಿನ ಒಡನಾಟ ಬಗ್ಗೆ ಹೇಳ್ತೀರಾ?
ಹೇಳ್ತಾ ಹೋದ್ರೆ ಪೇಜುಗಟ್ಟಲೆ ಬರೀಬೋದು. ಅವರದು ತುಂಬಾ ಲೈವ್ಲಿ ವ್ಯಕ್ತಿತ್ವ. ಹ್ಯಾಪಿನೆಸ್ ಅನ್ನೋದು infectious ಅಂತಾರೆ. ಅವರ ವಿಷಯದಲ್ಲಿ ಅದು ತುಂಬಾ ನಿಜ. ಅವರಿಲ್ಲದೆ ಕನ್ನಡ ಚಿತ್ರರಂಗ ಖಾಲಿಯಾಯಿತು. ಅಪರೂಪದ ವ್ಯಕ್ತಿ.
ನಿಮ್ಮ ಮಾತುಕತೆ ಹೇಗಿರುತ್ತಿತ್ತು?
ವರ್ಲ್ಡ್ ಲೆವೆಲ್ ನಲ್ಲಿ ಹಿಟ್ ಆಗಿರೋ ಸಿನಿಮಾಗಳು, ಸಿರೀಸ್ ಗಳ ಬಗ್ಗೆ ಮಾತನಾಡೋರು. ಸೌತ್ ಅಮೆರಿಕಾದ ನಾರ್ಕೋಸ್ ಧಾರಾವಾಹಿ ಅವರ ಫೇವರಿಟ್. ಅದರಿಂದ ಎಷ್ಟು ಇಂಪ್ರೆಸ್ ಆಗಿದ್ದರು ಎಂದರೆ, ಕೊಲಂಬಿಯಾಗೆ ಟ್ರಾವೆಲ್ ಮಾಡೋಣ ಅಂತ ಹೇಳಿದ್ರು.
ವಿಶಿಷ್ಟ ಪ್ರಕಾರದ ಸಿನಿಮಾ ಜೊತೆಗೆ 'ಒಂದು ಸಾಂಗು, ಫೈಟು, ಸೆಂಟಿಮೆಂಟು' ಥರದ ಫಾರ್ಮುಲಾ ಆಧಾರಿತ ಸಿನಿಮಾದಲ್ಲಿ ನಿಮ್ಮನ್ನ ನೋಡೋದು ಯಾವಾಗ?
ಐಯಾಮ್ ಆನ್ ದಿ ವೇ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಲವ್ ಸಾಂಗ್ ಮಾಡಿದ್ದೀನಿ. 'ಸಾಂಗು, ಫೈಟು, ಸೆಂಟಿಮೆಂಟು' ಫಾರ್ಮುಲಾಗೆ ಸೂಟ್ ಆಗ್ತೀನೋ ಇಲ್ವೋ ಸದ್ಯಕ್ಕೆ ಗೊತ್ತಿಲ್ಲ. ತಿಳಿದುಕೊಳ್ಳೋ ಪ್ರಯತ್ನವಂತೂ ಆಗ್ತಿದೆ.
Unconventional ಸಿನಿಮಾ ಮಾಡ್ತಿರೋ ನಿಮಗೆ ಡ್ರೀಮ್ ಗರ್ಲ್ ಕುರಿತಾದ conventional ಪ್ರಶ್ನೆ. ಯಾವ ಕನ್ನಡ ನಟಿಯ ಜೊತೆ ನಟಿಸಬೇಕು ಅನ್ನೋದು ನಿಮ್ಮ ಕನಸು?
ಸುಮನ್ ರಂಗನಾಥ್
ಕೊನೆಯದಾಗಿ ಔಟ್ ಆಫ್ ಸಿಲಬಸ್ ಪ್ರಶ್ನೆ. ಬಾಲಿವುಡ್ ನಲ್ಲಿ ಹೆಸರು ಮಾಡ್ತಿರೋ ನಿಮ್ಮ ತಂಗಿ ಕುಬ್ರಾ ಸೇಟ್ ಜೊತೆ ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡೋದು ಯಾವಾಗ?
ಹೇಳಬೇಕಂದ್ರೆ ಮನೇನಲ್ಲಿ ಈ ಬಗ್ಗೆ ನಾನೂ ಅವಳೂ ಮಾತಾಡಿದ್ದೀವಿ. ಪರ್ಫೆಕ್ಟ್ ಆಗಿರೋ ಪ್ರಾಜೆಕ್ಟ್ ಸಿಕ್ಕಾಗ ಇಬ್ಬರೂ ಪಕ್ಕಾ ಕನ್ನಡ ಪ್ರೇಕ್ಷಕರ ಮುಂದೆ ಬರ್ತೀವಿ. 'ಒನ್ ಕಟ್ ಟೂ ಕಟ್' ಸಿನಿಮಾ ನೋಡೋಕೆ ಮರೀಬೇಡಿ.