ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ
ಅದ್ಯಾವ ಘಳಿಗೆಯಲ್ಲಿ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟರೋ. ರಾಣಾ ನಾಯಕನಾಗಲು ಅಸಂಖ್ಯ ಗುರುಗಳು ಪ್ರೇರಣೆಯಾಗಿದ್ದಾರೆ. ಆ ಏಕಲವ್ಯನಿಗೆ ಒಬ್ಬರೇ ಪರೋಕ್ಷ ಗುರು. ಆದರೆ ಈ 'ಏಕ್ ಲವ್ ಯಾ' ಗುರಿ ಮುಟ್ಟಲು ಹಲವು ಮಂದಿ ಪ್ರತ್ಯಕ್ಷ ಗುರುಗಳು ಬೆಂಬಲಕ್ಕಿದ್ದಾರೆ.
Published: 24th February 2022 08:34 AM | Last Updated: 24th February 2022 08:34 AM | A+A A-

ರಾಣಾ
- ಹರ್ಷವರ್ಧನ್ ಸುಳ್ಯ
ರಕ್ಷಿತಾರ ಕಿರಿಯ ಸಹೋದರ ರಾಣಾ ಅವರನ್ನು ನಿರ್ದೇಶಕ ಪ್ರೇಮ್ 'ಏಕ್ ಲವ್ ಯಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಲಾಂಚ್ ಮಾಡುತ್ತಿರುವುದು ಈ ವೇಳೆಗೆ ಕನ್ನಡ ಚಿತ್ರಪ್ರೇಮಿಗಳಿಗೆ ತಿಳಿದೇ ಇರುತ್ತದೆ. ಫೆ.24ರಂದು ತೆರೆಕಾಣುತ್ತಿರುವ 'ಏಕ್ ಲವ್ ಯಾ' ಸಿನಿಮಾ ಈಗಾಗಲೇ ನಿರೀಕ್ಷೆ ಹುಟ್ಟುಹಾಕಿದೆ. ಚೊಚ್ಚಲ ಸಿನಿಮಾ ಬಗ್ಗೆ ರಾಣಾ 'Kannadaprabha.Com' ಜೊತೆ ಅನುಭವ ಹಂಚಿಕೊಂಡಿದ್ದಾರೆ.
ರೌಡಿಗಿಂತ ಮೊದಲು ಲವರ್ ಬಾಯ್ ಆಗು
ರೌಡಿಸಂ ಸಿನಿಮಾಗಳಿಗೆ ಹೆಸರಾದ ಪ್ರೇಮ್, ರಾಣಾ ಅವರನ್ನು ಲವರ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಮೊದಲ ಸಿನಿಮಾಗೆ ಲವರ್ ಬಾಯ್ ಪಾತ್ರ ಸೂಟ್ ಆಗುತ್ತೆ ಎನ್ನುವುದು ಪ್ರೇಮ್ ಅವರದೇ ಐಡಿಯಾ. ಇಷ್ಟಕ್ಕೂ ಹೀರೋ ಆಗಬೇಕು ಅನ್ನೋ ಐಡಿಯಾ ಮೊದಲು ಬಂದಿದ್ದು ರಾಣಾ ಅವರಿಗೇ ಅಂತೆ. ಸಿನಿಮಾ ಹಿನ್ನೆಲೆಯ ಕುಟುಂಬವಾದ್ದರಿಂದ ಹಿಂದಿನಿಂದಲೂ ನಟ ಆಗಬೇಕು ಅನ್ನೋ ಕನಸು ಮನದಲ್ಲಿತ್ತು.
ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ ತಮ್ಮ ಮನದಾಸೆಯನ್ನು ತಾಯಿ ಬಳಿ ಹೇಳಿಕೊಂಡಿದ್ದಾರೆ. ಅವರ ಮೂಲಕ ಅಕ್ಕ ರಕ್ಷಿತಾ ಅವರಿಗೆ ಈ ಸಂಗತಿ ತಿಳಿದುಹೋಗಿದೆ. 'ನಂತರ ತಾಯಿ ಹಾಗೂ ಅಕ್ಕ ಇಬ್ಬರೂ ಈ ಮಾತನ್ನು ನಮ್ ಡೈರೆಕ್ಟರ್ ಕಿವಿಗೆ ಹಾಕಿದ್ದಾರೆ, ರಾಣಾಗೆ ಒಂದು ಸಿನಿಮಾ ಮಾಡಿಕೊಡಿ ಅಂತ' ಎಂದು ನಗುತ್ತಾರೆ ರಾಣಾ. ಅದರಂತೆ ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ.
ಯುದ್ಧಕ್ಕೂ ಮೊದಲೇ ಶಸ್ತ್ರಾಭ್ಯಾಸ
ಸಿನಿಮಾ ಕುಟುಂಬದ ಹಿನ್ನೆಲೆಯಿದ್ದಿದ್ದರಿಂದ ಹೀರೋ ಆಗಿ ಏಕಾಏಕಿ ಸಿನಿಮಾ ಮಾಡಬಹುದಿತ್ತು. ಆದರೆ ರಾಣಾ ಸಿನಿಮಾಗೂ ಮುನ್ನ ಹಲವು ಬಗೆಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಖ್ಯಾತನಾಮರೆಲ್ಲ ಕಲಿತುಬಂದಿದ್ದ ನ್ಯೂಯಾರ್ಕ್ ಥಿಯೇಟರ್ ತರಬೇತುಶಾಲೆಯಲ್ಲಿ ಒಂದೂವರೆ ವರ್ಷ ತರಬೇತಿ ಪಡೆದಿದ್ದಾರೆ. ಕೃಷ್ಣಮೂರ್ತಿ ಕವತ್ತಾರ್ ಅವರ ಬಳಿ ರಂಗಭೂಮಿ ತರಬೇತಿ ಪಡೆದಿದ್ದಾರೆ. ಇಮ್ರಾನ್ ಸರ್ದಾರಿಯಾ ಬಳಿ ನೃತ್ಯ ತರಬೇತಿ ಪಡೆದಿದ್ದಾರೆ.
'ಥಿಯರಿ ತರಗತಿಗಳೆಲ್ಲಾ ಸಾಕು ಅಖಾಡಕ್ಕಿಳಿ' ಎಂದು ಪ್ರೇಮ್ ಹೇಳಿದಾಗ ವಿಲನ್ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. 2015ರಿಂದಲೇ ರಾಣಾ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನುವುದು ಗಮನಾರ್ಹ. ಹೊಸಬರಿಗೆ ಅವರು ಹೇಳುವುದು ಇಷ್ಟೇ. ಯುದ್ಧಕಾಲದಕ್ಕೂ ಮುನ್ನವೇ ಶಸ್ತ್ರಾಭ್ಯಾಸ ಮಾಡಬೇಕು. ಹಾಗೆಯೇ ಸಿದ್ಧತೆ ಮಾಡಿ ಸಿನಿಮಾರಂಗಕ್ಕೆ ಬನ್ನಿ. ರಾಣಾರ ಈ ಮಾತು ಸಿನಿಮಾರಂಗಕ್ಕೆ ಮಾತ್ರವಲ್ಲ ಎಲ್ಲಾ ರಂಗಕ್ಕೂ ಅನ್ವಯಿಸುತ್ತದೆ.
ಪ್ರೇಮ್ ಅವರನ್ನ ಹೀಗ್ ಕರೀತಾರೆ
ಹಿಂದಿನಿಂದಲೂ ನಿರ್ದೇಶಕ ಪ್ರೇಮ್ ಅವರನ್ನು ರಾಣಾ ಮನೆಯಲ್ಲಿ ಕರೆಯುವುದು ಅಂಕಲ್ ಎಂದು. ಈ ಸಂಗತಿ ಹಲವರಿಗೆ ಅಚ್ಚರಿಯೆಂದು ತೋರಬಹುದು. ರಕ್ಷಿತಾ ಅವರನ್ನು ಪ್ರೇಮ್ ವಿವಾಹವಾದಾಗ ರಾಣಾ ಅವರು ಏಳೆಂಟು ವಯಸ್ಸಿನ ಹುಡುಗ. ಆಗಿನಿಂದ ಅಂಕಲ್ ಎಂದೇ ಕರೆದು ಅಭ್ಯಾಸವಾಗಿ ಇಂದಿಗೂ ಉಳಿದುಕೊಂಡಿದೆ. ಆದರೆ ವಿಲನ್ ಸಿನಿಮಾದಲ್ಲೆ ಕೆಲಸ ಮಾಡಿದ ನಂತರ ನಮ್ ಡೈರೆಕ್ಟ್ರು ನಮ್ ಡೈರೆಕ್ಟ್ರು ಎಂದು ಪ್ರೊಫೆಷನಲ್ ಆಗಿ ಕರೆಯೋ ಅಭ್ಯಾಸ ಶುರುವಾಯ್ತೆಂದು ರಾಣಾ ಚಟಾಕಿ ಹಾರಿಸುತ್ತಾರೆ.
ಸುದೀಪ್ ನೀಡಿದ ಅಮೂಲ್ಯ ಟಿಪ್
ವಿಲನ್ ಶೂಟಿಂಗ್ ಸಮಯದಲ್ಲಿ ಸುದೀಪ್ ನೀಡಿದ ಸಹಾಯವನ್ನು ರಾಣಾ ಮರೆತಿಲ್ಲ. ಸೆಟ್ ನಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ ರಾಣಾ ಅವರನ್ನು ಕರೆದು ಕೂರಿಸಿಕೊಂಡು ಆಕ್ಟಿಂಗ್ ಕುರಿತು ನೀಡಿದ ಸಲಹೆಯನ್ನು ಸದಾ ನೆನೆಸಿಕೊಳ್ಳುತ್ತಾರೆ. ಅಲ್ಲದೆ ರಾಣಾ ಅವರಿಗೆ ಗಡ್ಡ ಬಿಡುವಂತೆ ಸಲಹೆ ನೀಡಿದ್ದು ಕೂಡಾ ಅವರೇ. ಗಡ್ಡ ಬಿಟ್ಟ ನಂತರ ತಮ್ಮ ಕೆರಿಯರ್ ನಲ್ಲಿ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದಾಗಿ ಸುದೀಪ್ ಮಾಡಿದ ಅನುಭವ ಪಾಠ ರಾಣಾ ಕಿವಿಯಲ್ಲಿ ಅನುರಣಿಸುತ್ತಿದೆ.
ವರ್ಲ್ಡ್ ಸಿನಿಮಾಗಳ ಫ್ಯಾನ್
ಸ್ಟಾರ್ ಆಗೋ ಮುಂಚೆ ಪ್ರತಿಯೊಬ್ಬರೂ ಒಬ್ಬರಲ್ಲ ಒಬ್ಬರ ಫ್ಯಾನೇ ಎನ್ನುವ ಸಿನಿಮಾ ಡಯಲಾಗು ರಾಣಾ ಅವರಿಗೆ ಒಪ್ಪುತ್ತದೆ. ಸ್ಯಾಂಡಲ್ ವುಡ್ ನಲ್ಲಿ ರೋಲ್ ಮಾಡೆಲ್ ಯಾರು ಎನ್ನುವ ಪ್ರಶ್ನೆಗೆ ರಾಣಾ ಎಲ್ಲರಿಂದಲೂ ಕಲಿತಿದ್ದೇನೆ ಎಂದು ಜಾಣತನದ ಉತ್ತರ ನೀಡುತ್ತಾರೆ. ಅದೇ ಹಾಲಿವುಡ್ ನಲ್ಲಿ ಲಿಯೋನಾರ್ಡೊ ಡಿಕ್ಯಾಪ್ರಿಯೊ ಅವರ ನೆಚ್ಚಿನ ನಟ. ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವ ರಾಣಾ ಅವರಿಗೆ ಕೊರಿಯನ್ ಡ್ರಾಮಾ ಸಿನಿಮಾಗಳು ಅಚ್ಚುಮೆಚ್ಚು. Last but not least ಎಂಬಂತೆ ತಮ್ಮ ಜೊತೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ ರೀಷ್ಮಾ ನಾಣಯ್ಯ ಮತ್ತು ರಚಿತಾ ರಾಮ್ ಸಹಕಾರವನ್ನು ರಾಣಾ ನೆನೆಯುತ್ತಾರೆ.