'ತಿಥಿ' ನಂತರ ವಿದೇಶಿ ನೆಲದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ 'ಪೆದ್ರೊ': ಪೋಸ್ಟರ್ ಮತ್ತು ಅಧಿಕೃತ ಟ್ರೇಲರ್ ಬಿಡುಗಡೆ
'ವಿಸಾರಣೈ', 'ಆಡುಕುಲಂ', 'ಅಸುರನ್'ನಂಥ ಸಿನಿಮಾಗಳನ್ನು ನೀಡಿದ ಹೆಸರಾಂತ ತಮಿಳು ಚಿತ್ರನಿರ್ದೇಶಕ ವೆಟ್ರಿಮಾರನ್, ನಟೇಶ್ ಹೆಗಡೆ ನಿರ್ದೇಶನದ 'ಪೆದ್ರೊ' ಸಿನಿಮಾವನ್ನು ತಮ್ಮ ಬ್ಯಾನರ್ ಅಡಿ ಪ್ರಸ್ತುತ ಪಡಿಸುತ್ತಿದ್ದಾರೆ ಎನ್ನುವುದು ವಿಶೇಷ.
Published: 26th February 2022 12:51 PM | Last Updated: 26th February 2022 01:44 PM | A+A A-

ಪೋಸ್ಟರ್ ಅನಾವರಣಗೊಳಿಸುತ್ತಿರುವ ಗಿರೀಶ್ ಕಾಸರವಳ್ಳಿ ಜೊತೆ 'ಪೆದ್ರೊ' ಚಿತ್ರತಂಡ
- ಹರ್ಷವರ್ಧನ್ ಸುಳ್ಯ
'ತಿಥಿ' ಸಿನಿಮಾ ನಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ 'ಪೆದ್ರೊ' ಸಿನಿಮಾದ ಪೋಸ್ಟರ್ ಮತ್ತು ಅಫೀಷಿಯಲ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತ್ತು. ಹೊಸ ಪ್ರತಿಭೆ ನಟೇಶ್ ಹೆಗಡೆ ನಿರ್ದೇಶನದ 'ಪೆದ್ರೊ' ಸಿನಿಮಾವನ್ನು ನೋಡಿ ಮೆಚ್ಚಿದ ಪ್ರತಿಭಾವಂತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಿದ್ದು ವಿಶೇಷ. ಪೋಸ್ಟರ್ ಹಾಗೂ 'ಪೆದ್ರೊ' ಸಿನಿಮಾದ ಟ್ರೇಲರ್ ಅನ್ನು ಅವರು ಬಿಡುಗಡೆಗೊಳಿಸಿದರು.
ಸದ್ಯ ದೇಶ ವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆಯುತ್ತಿರುವ 'ಪೆದ್ರೊ' ಸಿನಿಮಾವನ್ನು ಆದಷ್ಟು ಬೇಗನೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿರುವುದಾಗಿ ನಿರ್ಮಾಪಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ಪೆಡ್ರೋ' ಚಿತ್ರ ಆಯ್ಕೆ
'ವಿಸಾರಣೈ', 'ಆಡುಕುಲಂ', 'ಅಸುರನ್'ನಂಥ ಸಿನಿಮಾಗಳನ್ನು ನೀಡಿದ ಖ್ಯಾತ ತಮಿಳು ಚಿತ್ರನಿರ್ದೇಶಕ ವೆಟ್ರಿಮಾರನ್ 'ಪೆದ್ರೊ' ಸಿನಿಮಾವನ್ನು ತಮ್ಮ ಬ್ಯಾನರ್ ಅಡಿ ಪ್ರಸ್ತುತ ಪಡಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ 'ಪೆದ್ರೊ' ಸಿನಿಮಾದ ನಿರ್ಮಾಪಕ ರಿಷಬ್ ಶೆಟ್ಟಿ, ಸೌಂಡ್ ಎಂಜಿನಿಯರ್ ಶ್ರೇಯಾಂಕ್ ನಂಜಪ್ಪ, ಸಿನಿಮಾದಲ್ಲಿ ನಟಿಸಿರುವ ಗೋಪಾಲ್ ಹೆಗಡ್ದೆ, ರಾಜು ಮತ್ತು ಹೊಸ ಸೆನ್ಸೇಷನ್ ನಟ/ ನಿರ್ದೇಶಕ ರಾಜ್ ಶೆಟ್ಟಿ ಹಾಜರಿದ್ದರು. ಸಿನಿಮಾದ ಸಿನಿಮೆಟೊಗ್ರಫಿ ಹೊಣೆ ಹೊತ್ತವರು ವಿಕಾಸ್ ಅರಸ್.
ಇದನ್ನೂ ಓದಿ: ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ 'ಹೊಸ ಬೆಳಕು' ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ

ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್ ಕಾಸರವಳ್ಳಿಯವರು ಫಿಲಂ ಮೇಕಿಂಗ್ ಕಲೆಯ ಮೇಲೆ ನಟೇಶ್ ಅವರಿಗಿರುವ ಹಿಡಿತದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಪೆದ್ರೊ' ರೀತಿಯ ಸೆನ್ಸಿಬಲ್ ಸಿನಿಮಾಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವಂತೆ ರಿಷಬ್ ಶೆಟ್ಟಿ ಹಾಗೂ ಮಾಧ್ಯಮ ವೃಂದವನ್ನು ಕಾಸರವಳ್ಳಿಯವರು ಕೋರಿದರು.
ಪೆದ್ರೊ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗೋಪಾಲ ಹೆಗಡೆಯವರು, ನಿರ್ದೇಶಕ ನಟೇಶ್ ಅವರ ತಂದೆ ಎನ್ನುವುದು ಅಚ್ಚರಿಯ ವಿಷಯ. ಶಿರಸಿಯ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಕಥಾನಾಯಕ ಆಕಸ್ಮಿಕವಾಗಿ ದನವೊಂದನ್ನು ಸಾಯಿಸುತ್ತಾನೆ. ನಂತರ ನಡೆಯುವ ಘಟನಾಸರಣಿಯೇ ಸಿನಿಮಾಗೆ ವಸ್ತುವಾಗಿದೆ.
ಇದನ್ನೂ ಓದಿ: ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿ
ಪ್ರತಿಷ್ಟಿತ ಬೂಸಾನ್ ಚಿತ್ರೋತ್ಸವ, ತೈವಾನಿನ ಗೋಲ್ಡನ್ ಹಾರ್ಸ್, ಚೀನಾದ ಪಿಂಗ್ಯಾವೊ ಚಿತ್ರೋತ್ಸವ, ಲಂಡನ್ ನ BFI ಹಾಗೂ 3 ಕಾಂಟಿನೆಂಟ್ಸ್ ಸೇರಿದಂತೆ ಹಲವು ಪ್ರಖ್ಯಾತ ಚಿತ್ರೋತ್ಸವಗಳಲ್ಲಿ 'ಪೆದ್ರೊ' ತೆರೆ ಕಂಡು ಮೆಚ್ಚುಗೆ ಪಡೆದಿದೆ. ಚೀನಾದ ಪಿಂಗ್ಯಾವೊ ಚಿತ್ರೋತ್ಸವದಲ್ಲಿ 'ಬೆಸ್ಟ್ ಡೈರೆಕ್ಟರ್' ಮತ್ತು 3 ಕಾಂಟಿನೆಂಟ್ಸ್ ಚಿತ್ರೋತ್ಸವದಲ್ಲಿ 'ಸಿಲ್ವರ್ ಬಲೂನ್' ಪ್ರಶಸ್ತಿಯನ್ನು ನಟೇಶ್ ಹೆಗಡೆ ಸಿನಿಮಾ 'ಪೆದ್ರೊ' ಗೆದ್ದುಕೊಂಡಿದೆ.
ಇದನ್ನೂ ಓದಿ: ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ ನಿರ್ದೇಶಕ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಆಯ್ಕೆ