ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯ
ಸಿನಿಮಾ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
Published: 26th February 2022 07:11 PM | Last Updated: 26th February 2022 07:39 PM | A+A A-

ನಿಶಾನ್ ನಾಣಯ್ಯ
ಸಂದರ್ಶನ: ಹರ್ಷವರ್ಧನ್ ಸುಳ್ಯ
ಸಿನಿಮಾಗಳ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ನಮಗಿರುವ ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ಬೆಳೆದಿದ್ದೆಲ್ಲಾ ದೂರದ ಕೋಲ್ಕತಾದಲ್ಲಿ. ಸದ್ಯ ಹೆಸರು ಮಾಡುತ್ತಿರುವುದು ಮಲಯಾಳಂ ಚಿತ್ರರಂಗದಲ್ಲಾದರೂ 5 ಭಾಷೆಗಳ ಚಿತ್ರರಂಗದಲ್ಲಿ ಆತ ಸಕ್ರಿಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
FTI ಎಂಬ ಮೊದಲ ಶಾಲೆ
ಐಐಟಿಯಲ್ಲಿ ಕಲಿತವರಿಗೆ ಯಾವ ರೀತಿ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತದೆಯೋ ಹಾಗೆಯೇ ಪುಣೆಯ ಫಿಲಂ ಇನ್ ಸ್ಟಿಟ್ಯೂಟ್ FTI ವಿದ್ಯಾರ್ಥಿ ಎಂದರೆ ಚಿತ್ರರಂಗದಲ್ಲಿ ಅವರಿಗೆ ಸಿಗುವ ಗೌರವವೇ ಬೇರೆ. FTI ಇತಿಹಾಸವೇ ಹಾಗಿದೆ. ಅಲ್ಲಿಂದ ಹೊರಬಿದ್ದ ಅನೇಕ ಮಹನೀಯರು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಿನಿಮಾ ವಿದ್ಯಾರ್ಥಿಯಾದರೆ ಆಡಿಷನ್ ಗಳಿಗೆ ಅವಕಾಶ ಸಿಗುತ್ತದೆ ನಿಜ, ಆದರೆ ಆ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಸಾಮರ್ಥ್ಯವೊಂದೇ ಮಾನದಂಡ ಎನ್ನುತ್ತಾರೆ ನಿಶಾನ್. ಸಿನಿಮಾ ವಿದ್ಯಾರ್ಥಿಯಾಗುವ ಒಂದು ಪ್ರಯೋಜನ ಎಂದರೆ ಸಿನಿಮಾರಂಗದವರು ಅವರನ್ನು ಸೀರಿಯಸ್ಸಾಗಿ ಪರಿಗಣಿಸುವುದು.

ಘಟಾನುಘಟಿ ಶಿಕ್ಷಕರು
FTI ಕಾಲೇಜಿನಲ್ಲಿ ಕಲಿಯುವಾಗ ನಿಶಾನ್ ಗೆ ಅಲ್ಲಿ ಘಟಾನುಘಟಿ ಶಿಕ್ಷಕರ ಸಾಂಗತ್ಯ ಸಿಕ್ಕಿತ್ತು. ನಾಸಿರುದ್ದೀನ್ ಶಾ, ರವಿ ಬಸ್ವಾನಿ ಮುಂತಾದ ಘಟಾನುಘಟಿಗಳು ನಿಶಾನ್ ಗೆ ಪಾಠ ಹೇಳಿದ್ದಾರೆ ಎನ್ನುವುದೇ ನಿಜಕ್ಕೂ ಹೆಮ್ಮೆಯ ಸಂಗತಿ. ಅಲ್ಲಿನ ಶಿಕ್ಷಕರು ನಟನೆ ಕುರಿತಾಗಿ ಹೇಳಿದ್ದಕ್ಕಿಂತ ಜೀವನದ ಕುರಿತು ಮಾತನಾಡಿದ್ದೇ ಹೆಚ್ಚು ಎಂದು ನಗುತ್ತಾರೆ ನಿಶಾನ್. ಜೀವನವೇ ಒಂದು ನಾಟಕ ಎನ್ನುವ ಹಿರಿಯರ ಮಾತನ್ನು ಆ ಶಿಕ್ಷಕರು ಚೆನ್ನಾಗಿ ಅರಿತಿದ್ದರೆಂದು ಕಾಣುತ್ತದೆ. ಒಟ್ಟಿನಲ್ಲಿ ಅದರಿಂದಲೇ ನಟನಾರಂಗ ಕುರಿತು ಅಗಾಧ ತಿಳಿವಳಿಕೆ ಹೊಂದಲು ಸಾಧ್ಯವಾಯಿತು ಎಂದು ಹೇಳಲು ನಿಶಾನ್ ಮರೆಯುವುದಿಲ್ಲ.
ಸುಭಾಷ್ ಘಾಯ್ ಕಣ್ಣಿಗೆ ಬಿದ್ದ ಕನ್ನಡಿಗ
ಪರ್ದೇಸ್, ಸೌದಾಗರ್, ಖಳ್ ನಾಯಕ್, ತಾಲ್ ನಂಥ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ಸಿನಿಮಾದಲ್ಲಿ ನಟಿಸಲು ಸ್ಟಾರ್ ಕಲಾವಿದರೇ ಕಾದಿರುತ್ತಾರೆ. ಅಂಥದ್ದರಲ್ಲಿ ಮೊದಲ ಸಿನಿಮಾದಲ್ಲೇ ನಿಶಾನ್ ದೇವಯ್ಯ ಅವರಿಗೆ ಸುಭಾಷ್ ಘಾಯ್ ಅವರ ಸಿನಿಮಾದಲ್ಲಿ ನಾಯಕ ಪಾತ್ರ ಅರಸಿ ಬಂದಿತ್ತು. ಒಲ್ಲದ ಮನಸ್ಸಿನಿಂದಲೇ ಆಡಿಷನ್ ನೀಡಿಬಂದಿದ್ದ ನಿಶಾನ್ ಮೊದಲಿಗೆ ಆಯ್ಕೆಯಾಗಿರಲಿಲ್ಲ. ಒಂದು ವಾರದ ಬಳಿಕ ಸುಭಾಷ್ ಘಾಯ್ ಕಚೇರಿಯಿಂದ ನಾಯಕ ಪಾತ್ರಕ್ಕೆ ಕರೆ ಬಂದಿತ್ತು. 'ಸೈಕಲ್ ಕಿಕ್' ಎಂಬ ಸಿನಿಮಾ ಕಾರಣಾಂತರಗಳಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣದೆ ಚಿತ್ರೋತ್ಸವಗಳಲ್ಲಿ ಮಾತ್ರ ತೆರೆಕಂಡಿದ್ದು ಬೇಸರದ ಸಂಗತಿ.
ಕೈಬೀಸಿ ಕರೆದ ಕೇರಳ
ಎಲ್ಲವೂ ಉರಿದು ಮಣ್ಣಾದ ನಂತರವೂ ಬೂದಿಗಳಡಿಯಲ್ಲಿ ಕಿಡಿಯೊಂದು ಜೀವಂತವಾಗಿರುತ್ತದೆ. ಸುಭಾಷ್ ಘಾಯ್ ಸಿನಿಮಾದಲ್ಲಿ ನಟಿಸಿದ ನಂತರ ಬಾಲಿವುಡ್ ಹೆಬ್ಬಾಗಿಲು ತೆರೆದಂತೆ ಎನ್ನುವ ಎಣಿಕೆಯೇನೋ ಮಣ್ಣಾಯಿತು. ಆದರೆ ಆ ಸಿನಿಮಾದ ಎಡಿಟಿಂಗ್ ಕೆಲಸದಲ್ಲಿ ನೆರವಾಗಿದ್ದ ಓರ್ವ ವ್ಯಕ್ತಿಗೆ ನಿಶಾನ್ ನಲ್ಲಿದ್ದ ಕಲಾವಿದ ಕಂಡಿದ್ದ. ಆತ ಬೇರಾರೂ ಆಗಿರದೆ ಖ್ಯಾತ ಮಲಯಾಳಂ ಚಿತ್ರನಿರ್ದೇಶಕ ಶ್ಯಾಮ್ ಪ್ರಸಾದ್ ಅವರ ಮಗನಾಗಿದ್ದ. ಆ ಸಮಯದಲ್ಲಿ ಶ್ಯಾಮ್ ಪ್ರಸಾದ್ ಅವರು 'ರಿತು' ಎನ್ನುವ ಸಿನಿಮಾಗೆ ಕಥಾನಾಯಕನನ್ನು ಹುಡುಕುತ್ತಿದ್ದರು. ಆಡಿಷನ್ ನೀಡಿದ ನಂತರ ನಿಶಾ ಆಯ್ಕೆಯಾಗಿದ್ದ. 2009ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ರಿತು ಹಿಟ್ ಆಗಿದ್ದಲ್ಲದೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹೆಸರನ್ನೂ ಪಡೆಯಿತು. ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೂ ನಿಶಾನ್ ಬೆಂಗಾಲಿ, ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಮೋಹನ್ ಲಾಲ್, ಚಿಯಾ ವಿಕ್ರಮ್, ಅರ್ಜುನ್ ರಾಮ್ ಪಾಲ್ ಮುಂತಾದ ಖ್ಯಾತನಾಮರೊಂದಿಗೆ ನಿಶಾನ್ ನಟಿಸಿದ್ದಾರೆ.
ಅನಿಲ್ ಕಪೂರ್ ಬಿಚ್ಚಿಟ್ಟ ರಹಸ್ಯ
ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಬ್ಯಾಕ್ ಸ್ಟೇಜಿನಲ್ಲಿ ನಿಶಾನ್ ನಿಂತಿದ್ದರು. ಪಕ್ಕದಲ್ಲಿ ಅನಿಲ್ ಕಪೂರ್ ಚಡಪಡಿಸುತ್ತಾ ಅತ್ತಿತ್ತ ನಡೆದಾಡುತ್ತಿದ್ದರು. ಅವರಿಗೆ ಒಂದು ಕ್ಷಣವೂ ಸುಮ್ಮನೆ ಕೂತಿರಲು ಆಗಿರಲಿಲ್ಲ. ಅವರ ಎನರ್ಜಿ ಮತ್ತು ಆಕ್ಟಿವ್ ನೆಸ್ ಹಿಂದಿನ ಗುಟ್ಟನ್ನು ಕೇಳಿದಾಗ ಅವರು ಹೇಳಿದ ಮಾತುಗಳು ಎಲ್ಲರಿಗೂ ಮಾದರಿ. ಒಳ್ಳೆ ಊಟ, ಉತ್ತಮ ಚಿಂತನೆ ಮತ್ತು ಒಳ್ಳೆ ಜೀವನಶೈಲಿ. ಇದಿಷ್ಟನ್ನು ಸರಿಯಾಗಿ ಪಾಲಿಸಿದರೆ ದೇಹಕ್ಕೆ ಮನಸ್ಸಿಗೆ ಮುಪ್ಪಾಗದು ಎಂದಿದ್ದರವರು. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಉತ್ತಮ ವಾಗ್ಮಿ. ಮನುಷ್ಯನಿಗೆ 40ರ ಮೇಲೆ ಆತನ ಕರ್ಮಕ್ಕೆ ತಕ್ಕಂತೆ ಮುಖಭಾವ ಪ್ರಾಪ್ತವಾಗುತ್ತದೆ ಎನ್ನುತ್ತಿದ್ದರು ಅವರು.
ಸ್ಯಾಂಡಲ್ ವುಡ್ ಪ್ರವೇಶ
ನಿಶಾನ್ 'ವೆಡ್ಡಿಂಗ್ ಗಿಫ್ಟ್' ಎನ್ನುವ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಸೋನು ಗೌಡ ಅವರಿಗೆ ನಾಯಕಿ. ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಸಹಾಯಕರಾಗಿದ್ದ ವಿಕ್ರಮ್ ಪ್ರಭು ಈ ಸಿನಿಮಾ ನಿರ್ದೇಶಕರು, ನಿರ್ಮಾಪಕರು. ಚಿತ್ರರಂಗದಿಂದ ದೂರವಾಗಿ ಸ್ಟಾಕ್ ಮಾರ್ಕೆಟ್ ನಲ್ಲಿ ಸಕ್ರಿಯರಾಗಿದ್ದ ವಿಕ್ರಮ್ ಪ್ರಭು ಈಗ ಸಿನಿಮಾ ನಿರ್ಮಾಣಕ್ಕೆ ಮರಳಿದ್ದಾರೆ. ಗಂಡ ಹೆಂಡತಿ ಸಂಬಂಧವನ್ನೊಳಗೊಂಡ ಕೋರ್ಟ್ ರೂಮ್ ಡ್ರಾಮ, ಥ್ರಿಲ್ಲರ್ ವಸ್ತುವನ್ನು ಒಳಗೊಂಡ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಎದುರುನೋಡುತ್ತಿದೆ.