Source : Online Desk
- ಹರ್ಷವರ್ಧನ್ ಸುಳ್ಯ
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬೆಳಗಿಸಿದ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಮೌನವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಮಾತುಗಳ ಅರ್ಥ ಗ್ರಹಿಸುವ ಸಾಮರ್ಥ್ಯವನ್ನೂ ಕಳೆದುಕೊಂಡುಬಿಡುತ್ತೇವೆ ಎಂದು ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಸಂದರ್ಶನವೊಂದರಲ್ಲಿ ಹೇಳಿದ್ದು ನೆನಪು. ಈ ಸಾಲು ಕಾಸರವಳ್ಳಿಯವರಿಗೆ ಚೆನ್ನಾಗಿ ಒಪ್ಪುವ ಮಾತು. ಸಾಮಾನ್ಯವಾಗಿ ಚಂದನವನದ ಸಿನಿಮಾ ಕಾರ್ಯಕ್ರಮಗಳಲ್ಲಿ ಅವರು ಕಾಣಸಿಗರು.
ಮೌನದ ಮೂಲಕವೇ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾರೇನೋ ಎನ್ನುವ ಅನುಮಾನ ಕೆಲವು ಸೂಕ್ಷ್ಮ ಮನಸ್ಸುಗಳಿಗಾದರೂ ಬಂದೀತು. ಇಂತಿಪ್ಪ ಕಾಸರವಳ್ಳಿಯವರು 'ಪೆದ್ರೊ' ಎನ್ನುವ ಕನ್ನಡ ಸಿನಿಮಾದ ಪೋಸ್ಟರ್ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನೂ ಓದಿ: 'ತಿಥಿ' ನಂತರ ವಿದೇಶಿ ನೆಲದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ 'ಪೆದ್ರೊ': ಪೋಸ್ಟರ್ ಮತ್ತು ಅಧಿಕೃತ ಟ್ರೇಲರ್ ಬಿಡುಗಡೆ
ಮಗಳು ಮಾಡಿದ ಶಿಫಾರಸು
ಉತ್ತರಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿದೆ. ಕಾಸರವಳ್ಳಿಯವರ ಮಗಳು ಅನನ್ಯಾ ಕಾಸರವಳ್ಳಿ ಚಿತ್ರೋತ್ಸವವೊಂದರಲ್ಲಿ ನಟೇಶ್ ಹೆಗಡೆ ನಿರ್ದೇಶನದ 'ಪೆದ್ರೊ' ಸಿನಿಮಾವನ್ನು ನೋಡಿ ಮೆಚ್ಚಿದ್ದರು. ಮನೆಗೆ ಬಂದ ಬಳಿಕ ಆಕೆ ತಂದೆಯ ಬಳಿ ಆ ಸಿನಿಮಾದಲ್ಲಿ ಏನೋ ಒಂದು ವಿಶೇಷತೆಯಿದೆ ಖಂಡಿತ ನೋಡುವಂತೆ ಹೇಳಿದರು.
ಮಗಳ ಶಿಫಾರಸ್ಸಿನ ಮೇರೆಗೆ ಸಿನಿಮಾ ನೋಡಿದ ಗಿರೀಶ್ ಕಾಸರವಳ್ಳಿಯವರಿಗೆ 'ಪೆದ್ರೊ' ಸಿನಿಮಾ ತುಂಬಾ ಇಷ್ಟವಾಗಿಬಿಟ್ಟಿತು. ತಮಗೆ ಪರಿಚಿತವಲ್ಲದ ಭಾಷೆ ಮತ್ತು ಜನಜೀವನವನ್ನು ಪರಿಚಯ ಮಾಡಿಕೊಟ್ಟದ್ದು ಅವರಿಗೆ ಪೆದ್ರೊ ಸಿನಿಮಾ ಇಷ್ಟವಾಗಲು ಒಂದು ಕಾರಣ.
ಇದನ್ನೂ ಓದಿ: ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿ
ಇಷ್ಟಪಟ್ಟ 3 ಸಿನಿಮಾಗಳು
ಗಿರೀಶ್ ಕಾಸರವಳ್ಳಿ ಯುವ ನಿರ್ದೇಶಕ ನಟೇಶ್ ಹೆಗಡೆ ಅವರಿಗೆ ಸಿನಿಮಾ ಮೇಕಿಂಗ್ ಕ್ರಾಫ್ಟ್ ಮೇಲಿರುವ ಹಿಡಿತ ಅಚ್ಚರಿ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಇಷ್ಟವಾಗಿದ್ದು ಮೂರು ಸಿನಿಮಾಗಳು. 'ತಿಥಿ', 'ಹರಿಕಥಾ ಪ್ರಸಂಗ' ಮತ್ತು 'ಪೆದ್ರೊ'. ಮೂರು ಸಿನಿಮಾಗಳೂ ಇಷ್ಟವಾಗಿದ್ದು ಮೂರು ವಿಭಿನ್ನ ಕಾರಣಗಳಿಗೆ ಎನ್ನುವುದು ವಿಶೇಷ.
ಕಥೆಯೊಂದನ್ನು Non manipulative ಆಗಿ ಕಟ್ಟಿಕೊಟ್ಟದ್ದಕ್ಕೆ 'ತಿಥಿ' ಸಿನಿಮಾ ಇಷ್ಟವಾಗಿತ್ತು. ಸಿನಿಮಾದಲ್ಲಿ ಟೈಮನ್ನು ಸ್ಟ್ರೆಚ್ ಮಾಡೋದು ಹೇಗೆ ಎಂದು ತಿಳಿಸಿಕೊಟ್ಟಿದ್ದು ಅನನ್ಯಾ ಕಾಸರವಳ್ಳಿ ಅವರ 'ಹರಿಕಥಾ ಪ್ರಸಂಗ' ಸಿನಿಮಾ. ಆ ಕಾರಣಕ್ಕೆ ಆ ಸಿನಿಮಾ ಆಪ್ತ. ಇನ್ನು ನಟೇಶ್ ಹೆಗಡೆ 'ಪೆದ್ರೊ' ಸಿನಿಮಾ ಇಷ್ಟ ಆಗೋಕೆ ಕಾರಣ ಅದರಲ್ಲಿನ ತಾಧ್ಯಾತ್ಮತೆ (meditative nature). ಪ್ರೇಕ್ಷಕನಲ್ಲಿ ಅಧ್ಯಾತ್ಮಿಕತೆಯ ಭಾವ ಸ್ಫುರಿಸುವ ಸಾಮರ್ಥ್ಯ ಆ ಸಿನಿಮಾಗಿದೆ ಎನ್ನುವುದು ಗಿರೀಶ್ ಕಾಸರವಳ್ಳಿ ಅವರ ನಂಬುಗೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ಪೆಡ್ರೋ' ಚಿತ್ರ ಆಯ್ಕೆ
ಗೇಲಿಯಿಂದ ಕೀಳರಿಮೆ
ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಭಾಷೆಯೆಂದರೆ ಬೆಂಗಳೂರು, ಮೈಸೂರು ಕಡೆಯ ಕನ್ನಡ ಮಾತ್ರ ಎಂಬ ಭಾವನೆಯಿದೆ. ಸಿನಿಮಾಗಳಲ್ಲಿ ಕರ್ನಾಟಕದ ಇತರೆ ಪ್ರಾಂತ್ಯಗಳ ಕನ್ನಡ ಬಳಕೆಯಾದರೂ ಅದು ಗೇಲಿ ಮಾಡುವ ಕಾರಣಕ್ಕೆ. ಅದರಿಂದಾಗಿ ನಿರ್ದಿಷ್ಟ ಪ್ರಾಂತ್ಯದ ಕನ್ನಡ ಭಾಷೆಯ ಸೊಗಡಿನ ಕುರಿತು ಕೀಳರಿಮೆ, ತಾತ್ಸಾರ ಬೆಳೆಯುತ್ತದೆ. ಈ ಪ್ರವೃತ್ತಿ ಬಗ್ಗೆ ಗಿರೀಶ್ ಕಾಸರವಳ್ಳಿ ಬೇಸರ ವ್ಯಕ್ತಪಡಿಸುತ್ತಾರೆ.
ಸಿನಿಮಾ ಧ್ವನಿಸುವ ಭಾಷೆಯೇ ಒಂದು ತೂಕವಾದರೆ, ಸಿನಿಮಾದಲ್ಲಿ ಬಳಕೆಯಾಗುವ ಭಾಷೆಯದೇ ಮತ್ತೊಂದು ತೂಕ. ಕಥೆ ಹೇಳುವಲ್ಲಿ(story telling) ಅವೆರಡರ ಪಾತ್ರವೂ ನಿರ್ಣಾಯಕವಾದುದು. ಅವರೇ ಹೇಳುವಂತೆ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸಿನಿಮಾ ಮೇಕಿಂಗ್ ಕ್ರಾಫ್ಟ್ ದೃಷ್ಟಿಯಿಂದ ಔಚಿತ್ಯಪೂರ್ಣವೂ ಹೌದು.
ಇದನ್ನೂ ಓದಿ: ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ 'ಹೊಸ ಬೆಳಕು' ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ