ಪವರ್ ಸ್ಟಾರ್ ಪುನೀತ್ ಸ್ಫೂರ್ತಿ: ಬಣ್ಣದ ಲೋಕಕ್ಕೆ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಎಂಟ್ರಿ!
ಕರ್ನಾಟಕದ ಮಾಜಿ ಸಚಿವ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸದ್ಯದಲ್ಲೇ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.
Published: 07th January 2022 10:30 AM | Last Updated: 07th January 2022 12:52 PM | A+A A-

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ
ಬಳ್ಳಾರಿ: ಕರ್ನಾಟಕದ ಮಾಜಿ ಸಚಿವ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸದ್ಯದಲ್ಲೇ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.
ಡೈರೆಕ್ಟರ್ ರಾಧಾಕೃಷ್ಣ ನಿರ್ದೇಶನದ ಸಿನಿಮಾ ಮೂಲಕ ಕಿರೀಟಿ ರೆಡ್ಡಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಮಗನಿಗೆ ಈಗಾಗಲೇ ನಟನೆ, ನೃತ್ಯ, ಫೈಟಿಂಗ್ ತರಬೇತಿಯನ್ನೂ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಕೊಡಿಸಿದ್ದಾರೆ. ನಿರ್ದೇಶಕ ರಾಧಾಕೃಷ್ಣ ಕನ್ನಡದಲ್ಲಿ ಮಾಯಾಬಜಾರ್ ಚಿತ್ರವನ್ನು ನಿರ್ದೇಶಿಸಿದ್ದರು. ಮೂಲಗಳ ಪ್ರಕಾರ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಧಾಕೃಷ್ಣ ಹೇಳುವುದು ಹೀಗೆ.
ನಟನಾಬೇಕೆಂಬುದು ಕಿರೀಟಿಯ ಬಹುದಿನದ ಕನಸು. ಅವರು ಈಗಾಗಲೇ ನಟನೆ, ನೃತ್ಯ, ಫೈಟಿಂಗ್ ಜೊತೆಗೆ ಮಾರ್ಷಲ್ ಆರ್ಟ್ಗಳಲ್ಲಿ ತರಬೇತಿ ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಜಾಕಿ’ ಚಿತ್ರದ ಸ್ಫೂರ್ತಿಯಿಂದ ಕಿರೀಟಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದರು. ಈ ಚಿತ್ರಕ್ಕೆ ತೆಲುಗಿನಲ್ಲಿ ಲೆಜೆಂಡ್, ಯುದ್ಧ ಶರಣಂ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಸಾಯಿ ಕೊರ್ರಪಾಟಿ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹೆಸರಲ್ಲಿ ಉಚಿತ ಶಾಲೆ ಮತ್ತು ಆಸ್ಪತ್ರೆ ನಿರ್ಮಾಣ: ಜನಾರ್ಧನ ರೆಡ್ಡಿ
ಸ್ವಂತವಾಗಿ ಸ್ಟಂಟ್ಸ್ಗಳನ್ನು ಮಾಡುವಷ್ಟರ ಮಟ್ಟಿಗೆ ಸಿದ್ಧಗೊಂಡಿದ್ದಾರಂತೆ ಕಿರೀಟಿ. ಪ್ರತಿದಿನ ಜಿಮ್ಗೆ ಹೋಗಿ ಬೆವರಿಳಿಸುವ ಅವರು, ಡ್ಯಾನ್ಸ್ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಜೊತೆಗೆ ಕ್ಯಾಮೆರಾ ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಅವರು ಬೆಳೆಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಅನೇಕ ರಾಜಕಾರಣಿಗಳ ಮಕ್ಕಳು ಈಗಾಗಲೇ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್, ಜಮೀರ್ ಅಹಮದ್ ಪುತ್ರ ಜೈದ್ ಖಾನ್ ಹಾಗೂ ಚೆಲುವರಾಯ ಸ್ವಾಮಿ ಪುತ್ರ ಸಚಿನ್ ಈಗಾಗಲೇ ಹೀರೋ ಆಗಿ ಪರಿಚಯವಾಗಿದ್ದಾರೆ ಈಗ ಈ ಸಾಲಿಗೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸೇರ್ಪಡೆಯಾಗಿದ್ದಾರೆ.