
ಗಣ-ಪ್ರಜ್ವಲ್ ದೇವರಾಜ್-ವೇದಿಕಾ
ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಅಭಿನಯದ ಗಣ ಚಿತ್ರದ ನಾಯಕಿ ಪಾತ್ರಕ್ಕೆ ಶಿವಲಿಂಗ, ಸಂಗಮ ಖ್ಯಾತಿಯ ನಟಿ ವೇದಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗಷ್ಟೇ ನಗರದ ಆರ್‌ಪಿಸಿ ಲೇಔಟ್‌ನ ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ಈಚೆಗಷ್ಟೇ ಮುಹೂರ್ತ ನೆರವೇರಿಸಿಕೊಂಡಿತ್ತು. ಚಿತ್ರದ ಮೊದಲ ದೃಶ್ಯಕ್ಕೆ ವಿತರಕ ದೇವೇಂದ್ರ ರೆಡ್ಡಿ ಆರಂಭಫಲಕ ತೋರಿದರೆ, ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕ್ಯಾಮೆರಾ ಚಾಲನೆ ಮಾಡಿದ್ದರು.
ಆದರೆ ನಾಯಕಿ ಪಾತ್ರ ಸೇರಿದಂತೆ ಹಲವು ಪಾತ್ರಗಳು ಇನ್ನೂ ಆಯ್ಕೆಯಾಗಿರಲಿಲ್ಲ. ಇದೀಗ ನಾಯಕಿಯಾಗಿ ನಟಿ ವೇದಿಕಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ವೇದಿಕಾ ಈ ಹಿಂದೆ ನಟ ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಮತ್ತು ಗಣೇಶ್ ಅಭಿನಯದ ಸಂಗಮ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಸದ್ಯ 'ಬಂಗಾರ್‌ರಾಜು', 'ವಿನೋದನ್', 'ಜಂಗಲ್' ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ವೇದಿಕಾ ಮೊದಲು ಬಣ್ಣ ಹಚ್ಚಿದ್ದು ತಮಿಳು ಚಿತ್ರದಲ್ಲಿ. ಬಳಿಕ 2008ರಲ್ಲಿ ತೆರೆಕಂಡ 'ಸಂಗಮ' ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿದ್ದರು. ಆ ನಂತರ 2016ರಲ್ಲಿ ತೆರೆಗೆ ಬಂದ 'ಶಿವಲಿಂಗ'ದಲ್ಲಿ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದರು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿರುವ ವೇದಿಕಾ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.
ಇದನ್ನೂ ಓದಿ: ವರ್ಷಪೂರ್ತಿ ಪ್ರಜ್ವಲ್ ದೇವರಾಜ್ ಬ್ಯುಸಿ: ನಿರ್ದೇಶಕ ಪನ್ನಾಗಭರಣ ಜೊತೆ 2 ಹೊಸ ಸಿನಿಮಾ!
ಪ್ರಜ್ವಲ್ ದೇವಾರಾಜ್ ರ ಈ ಚಿತ್ರವನ್ನು ಹರಿ ಪ್ರಸಾದ್ ಜಕ್ಕ ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ ದರ್ಶಕುಡು' ಸಿನಿಮಾಗೆ ನಿರ್ದೇಶನ ಮಾಡಿ, 'ನೆನೊಕ್ಕಡೇನೆ', '100% ಲವ್' ಮುಂತಾದ ಸಿನಿಮಾಗಳಿಗೆ ಸುಕುಮಾರ್ ಜೊತೆಗೆ ರೈಟರ್ ಆಗಿ ಕೆಲಸ ಮಾಡಿದ್ದ ಹರಿ ಪ್ರಸಾದ್ ಜಕ್ಕ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ನೀಡಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ಫೆಬ್ರವರಿ ಮೊದಲ ವಾರದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಟಿ ಅರ್ಚನಾ ಕೊಟ್ಟಿಗೆ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚರಿ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ಪಾರ್ಥು ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಇನ್ನು, ಈಚೆಗಷ್ಟೇ 'ಮಾಫಿಯಾ' ಸಿನಿಮಾಕ್ಕೆ ಚಾಲನೆ ಕೊಟ್ಟಿದ್ದರು ಪ್ರಜ್ವಲ್. 'ಮಮ್ಮಿ' ಖ್ಯಾತಿಯ ಲೋಹಿತ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಬೆಂಗಳೂರು ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 40-50% ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ.