ಅಪ್ಪು ಮೆಚ್ಚಿದ ಹಾಡೇ ಸಾಂತ್ವನ: 'ಮೆ ಶಾಯರ್ ತೊ ನಹಿ' ಮ್ಯೂಸಿಕ್ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳ ಅಶ್ರುತರ್ಪಣ
ಯಾವುದೇ ಪರಭಾಷೆಯ ಯೂಟ್ಯೂಬ್ ಮ್ಯೂಸಿಕ್ ವಿಡಿಯೋಗಳಲ್ಲಿ ಕನ್ನಡದ ಕಾಮೆಂಟುಗಳು ಕಂಡು ಬರುವುದು ಅಪರೂಪ. ಆದರೆ ಈ ಮ್ಯೂಸಿಕ್ ವಿಡಿಯೋ ವಿಷಯದಲ್ಲಿ ಕನ್ನಡದ ಕಮೆಂಟುಗಳು ಸಹಸ್ರಾರು ಸಂಖ್ಯೆಯಲ್ಲಿರುವುದು ವಿಶೇಷ. ಅವೆಲ್ಲವೂ ಅಪ್ಪು ಅಭಿಮಾನಿಗಳದು ಎನ್ನುವುದು ಮತ್ತೊಂದು ವಿಶೇಷ.
Published: 26th January 2022 04:32 PM | Last Updated: 27th January 2022 01:12 PM | A+A A-

ಪುನೀತ್ ರಾಜ್ ಕುಮಾರ್
- ಹರ್ಷವರ್ಧನ್ ಸುಳ್ಯ
ಬೆಂಗಳೂರು: ನಮಗೆ ಅತ್ಯಾಪ್ತರಾಗಿದ್ದ ವ್ಯಕ್ತಿಗಳು ದೂರವಾದಾಗ ಅವರಿಗೆ ಸೇರಿದ ವಸ್ತುಗಳನ್ನು ಇಟ್ಟುಕೊಳ್ಳುವುದು, ಅವರಿಗಿಷ್ಟದ ತಿಂಡಿ ತಿನ್ನುವುದು, ಅವರಿಗಿಷ್ಟದ ಸ್ಥಳಕ್ಕೆ ಭೇಟಿ ನೀಡುವುದು ಇವೆಲ್ಲವೂ ಮನಸ್ಸಿಗೆ ಒಂಚೂರು ಸಮಾಧಾನ ನೀಡುವ ಸಂಗತಿಗಳು. ಅಂಥದ್ದೇ ವಿದ್ಯಮಾನಕ್ಕೆ ಕನ್ನಡಿಗರನ್ನು ಸಾಕ್ಷಿಯನ್ನಾಗಿಸಿದ್ದು ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ಅಗಲಿಕೆ.
ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯನ್ನು ಭರಿಸಲಾಗದ ಕನ್ನಡಿಗರು ಆ ನೋವನ್ನು ಮರೆಯಲು ಮತ್ತು ಪುನೀತ್ ರನ್ನು ಸದಾ ಕಾಲ ತಮ್ಮ ಹೃದಯಗಳಲ್ಲಿ ಜೀವಂತವಾಗಿರಿಸಲು ಮೊರೆ ಹೋಗಿದ್ದು ಒಂದು ಮ್ಯೂಸಿಕ್ ವಿಡಿಯೋಗೆ. ಅದು ಪುನೀತ್ ಅವರ ಅಚ್ಚುಮೆಚ್ಚಿನ ಹಾಡಿನ ಯೂಟ್ಯೂಬ್ ಮ್ಯೂಸಿಕ್ ವಿಡಿಯೊ 'ಮೆ ಶಾಯರ್ ತೊ ನಹಿ'.
ರಿಷಿ ಕಪೂರ್, ಡಿಂಪಲ್ ಕಪಾಡಿಯಾ ಅಭಿನಯದ 1973ರ 'bobby' ಹಿಂದಿ ಸಿನಿಮಾದ ಅತ್ಯಂತ ಜನಪ್ರಿಯ ಹಾಡು 'ಮೆ ಶಾಯರ್ ತೊ ನಹಿ'. ಲಕ್ಷ್ಮೀಕಾಂತ್- ಪ್ಯಾರೇಲಾಲ್ ಸಂಗೀತ ನಿರ್ದೇಶನ. ಆನಂದ್ ಭಕ್ಷಿ ಸಾಹಿತ್ಯ. ಶೈಲೇಂದ್ರ ಸಿಂಗ್ ಕಂಠಸಿರಿ ಇರುವ ಈ ಹಾಡು ಭಾರತದ ಪ್ರೇಮಿಗಳಿಗೆ ಸ್ವಪ್ನಸದೃಶವಾದ ಹಾಡು. ಈ ಎವರ್ ಗ್ರೀನ್ ಹಾಡು ಅಪ್ಪು ಅವರ ಮೆಚ್ಚಿನ ಹಾಡು. ಅದನ್ನು ಅವರೇ ಹಿಂದೊಮ್ಮೆ ಹೇಳಿಯೂ ಇದ್ದರು.
ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರ ಗೌರವಾರ್ಥ ನಡೆದ 'ಅಪ್ಪು ನಮನ' ಕಾರ್ಯಕ್ರಮದಲ್ಲಿ ಸಹೋದರ ಶಿವರಾಜಕುಮಾರ್ ವೇದಿಕೆ ಮೇಲೆ ತಮ್ಮನ ನೆನಪಿಗಾಗಿ ಕಂಬನಿ ತುಂಬಿದ ಕಣ್ಣುಗಳಲ್ಲಿ 'ಮೆ ಶಾಯರ್ ತೊ ನಹಿ' ಹಾಡು ಹೇಳಿದ್ದನ್ನು ನಾವ್ಯಾರೂ ಮರೆಯುವಂತೆಯೇ ಇಲ್ಲ.
'ಮೆ ಶಾಯರ್ ತೊ ನಹಿ' ಮ್ಯೂಸಿಕ್ ವಿಡಿಯೋಗೆ ಲಿಂಕ್: bit.ly/33QNuOk
ಅಪ್ಪು ಮೆಚ್ಚಿದ ಹಾಡನ್ನು ಅಭಿಮಾನಿಗಳಿಗೆ ಮತ್ತೆ ನೆನಪಿಸಿದ ಶಿವರಾಜ್ ಕುಮಾರ್ ನಿಜಾರ್ಥದಲ್ಲಿ ಅಪ್ಪು ಅಭಿಮಾನಿಗಳಿಗೆ ಅಂದು ಸಹಾಯ ಮಾಡಿದ್ದರು. ಅಪ್ಪು ಅಗಲಿಕೆಯ ನೋವಿನಿಂದ ತತ್ತರಿಸಿದ್ದ ಆಭಿಮಾನಿಗಳಿಗೆ ಸಾಂತ್ವನ ನೀಡಿದ್ದು ಇದೇ 'ಮೆ ಶಾಯರ್ ತೊ ನಹಿ' ಹಾಡು. ಈ ಮ್ಯೂಸಿಕ್ ವಿಡಿಯೋದ ಕಮೆಂಟ್ ಬಾಕ್ಸಿನತ್ತ ಒಮ್ಮೆ ಕಣ್ಣಾಡಿಸಿದರೆ ಪವರ್ ಸ್ಟಾರ್ ಅಭಿಮಾನಿಗಳ ಅಸಲಿ ಪವರ್ ತಿಳಿಯುತ್ತದೆ.
ಯಾವುದೇ ಪರಭಾಷೆಯ ಯೂಟ್ಯೂಬ್ ಮ್ಯೂಸಿಕ್ ವಿಡಿಯೋಗಳಲ್ಲಿ ಕನ್ನಡದ ಕಾಮೆಂಟುಗಳು ಕಂಡು ಬರುವುದು ಅಪರೂಪ. ಆದರೆ ಈ ಮ್ಯೂಸಿಕ್ ವಿಡಿಯೋ ವಿಷಯದಲ್ಲಿ ಕನ್ನಡದ ಕಮೆಂಟುಗಳು ಸಹಸ್ರಾರು ಸಂಖ್ಯೆಯಲ್ಲಿರುವುದು ವಿಶೇಷ. ಅವೆಲ್ಲವೂ ಅಪ್ಪು ಅಭಿಮಾನಿಗಳದು ಎನ್ನುವುದು ಮತ್ತೊಂದು ವಿಶೇಷ.

ಈ ಹಿಂದಿ ಚಿತ್ರಗೀತೆಯ ಕಮೆಂಟ್ ಬಾಕ್ಸಿನ ಉದ್ದಗಲಕ್ಕೂ ಪುನೀತ್ ಅಭಿಮಾನಿಗಳು ಹಾಕಿರುವ ಕಮೆಂಟುಗಳು ಕಾಣುತ್ತವೆ. ತಮ್ಮ ನೋವನ್ನು ಹಾಡಿನ ಮೂಲಕ ಅವರ ಅಭಿಮಾನಿಗಳು ಮರೆಯಲೆತ್ನಿಸುತ್ತಿರುವುದು ನಿಜಕ್ಕೂ ಹೃದಯಸ್ಪರ್ಶಿ ಸಂಗತಿ.

ಕೆಲ ಅಭಿಮಾನಿಗಳು ತಮಗೆ ಹಾಡಿನ ಅರ್ಥ ತಿಳಿಯದೇ ಇದ್ದರೂ ತುಂಬಾ ಇಷ್ಟವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಇಡೀ ಗೀತೆಯ ಕನ್ನಡ ಅನುವಾದವನ್ನು ಪೋಸ್ಟ್ ಮಾಡಿ ಹಿಂದಿ ಬಾರದ ಅಪ್ಪು ಅಭಿಮಾನಿಗಳಿಗೆ ಸಹಕರಿಸಿದ್ದಾರೆ.
