'ಅಪ್ಪು' ಜನ್ಮದಿನಕ್ಕೆ ಮುನ್ನ 1 ಲಕ್ಷ ಗಿಡ ನೆಡಲು ಸಂಕಲ್ಪ: ಕೈಜೋಡಿಸುವಂತೆ ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ ಮನವಿ
ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಜನವರಿ 29ಕ್ಕೆ ಮೂರು ತಿಂಗಳಾಗುತ್ತಿದೆ. ಆದರೂ ಅವರ ನೆನಪು, ಪ್ರೀತಿ ಅಭಿಮಾನ ಕಡಿಮೆಯಾಗೇ ಇಲ್ಲ. ಅವರ ಅಭಿಮಾನಿಗಳು, ಕನ್ನಡದ ಜನತೆ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ.
Published: 29th January 2022 11:13 AM | Last Updated: 29th January 2022 01:14 PM | A+A A-

ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಜನವರಿ 29ಕ್ಕೆ ಮೂರು ತಿಂಗಳಾಗುತ್ತಿದೆ. ಆದರೂ ಅವರ ನೆನಪು, ಪ್ರೀತಿ ಅಭಿಮಾನ ಕಡಿಮೆಯಾಗೇ ಇಲ್ಲ. ಅವರ ಅಭಿಮಾನಿಗಳು, ಕನ್ನಡದ ಜನತೆ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ.ಇಂದಿಗೂ ನೂರಾರು ಅಭಿಮಾನಿಗಳು ಸಮಾಧಿಗೆ ಬಂದು ದರ್ಶನ ಮಾಡುತ್ತಲೇ ಇದ್ದಾರೆ.
ಇಂದಿಗೆ ಅವರು ಗತಿಸಿ ಮೂರು ತಿಂಗಳಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಠೀರವ ಸ್ಟುಡಿಯೊದಲ್ಲಿರುವ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು.ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಇದ್ದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ಮೇಲಿನ ಅಭಿಮಾನ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವನನ್ನು ದೇವರ ರೂಪದಲ್ಲಿ ಹಲವರು ನೋಡುತ್ತಿದ್ದಾರೆ. ಈ ಸಂದರಭದಲ್ಲಿ ಅಭಿಮಾನಿಗಳನ್ನು ಬಳಸಿಕೊಂಡು ಅವರಿಗೆ ಹತ್ತಿರವಾಗುವ ರೀತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಬೇಕೆಂದು ನಾವು ಯೋಚನೆ ಮಾಡಿದೆವು. ಅಪ್ಪಾಜಿಯವರು ಸಾಯುವುದಕ್ಕೆ ಕೆಲವು ವರ್ಷ ಮೊದಲು ಕಾಡಲ್ಲಿ ಮೂರು ತಿಂಗಳು ಕಳೆದಿದ್ದರು. ಅಪ್ಪು ಗಂಧದ ಗುಡಿ ಸಿನೆಮಾ ಮಾಡಬೇಕೆಂದು ನಿರ್ಧರಿಸಿ ಸಾಯುವುದಕ್ಕೆ ಮೊದಲು ಕಾಡಿನಲ್ಲಿ ಕಳೆದಿದ್ದಾನೆ. ಅವನ ಆತ್ಮಕ್ಕೆ ಖುಷಿ ಕೊಡುವ ಕೆಲಸ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಗಿಡ ನೆಡುವ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ 'ಜೇಮ್ಸ್' ಸಿನಿಮಾ ಪೋಸ್ಟರ್ ಲಾಂಚ್: ಯೋಧನ ರೂಪದಲ್ಲಿ ಪವರ್ ಸ್ಟಾರ್
1 ಲಕ್ಷ ಗಿಡ ನೆಡುವ ಗುರಿ: ಮಾರ್ಚ್ 17 ಪುನೀತ್ ಜನ್ಮದಿನ, ಅದಕ್ಕೆ ಮೊದಲು ರಾಜ್ಯಾದ್ಯಂತ 1 ಲಕ್ಷ ಗಿಡ ನೆಟ್ಟು ಈ ರಾಜ್ಯವನ್ನು ಹಸಿರುಗೊಳಿಸಬೇಕೆಂಬ ಗುರಿಯನ್ನು ನಾವು ಇಟ್ಟುಕೊಂಡಿದ್ದು ಅದಕ್ಕೆ ಚಾಲನೆ ನೀಡಲಾಗಿದೆ. ಗಿಡ ನೆಟ್ಟು ಹಸಿರೀಕರಣ ರಾಜ್ಯ, ದೇಶ, ಪ್ರಪಂಚಕ್ಕೆ ಮಾದರಿಯಾಗಬೇಕೆಂಬುದು ನಮ್ಮ ಆಶಯ. ಅಭಿಮಾನಿಗಳು ಎಲ್ಲಿಯೇ ಆಗಲಿ ಅಪ್ಪು ಹೆಸರಿನಲ್ಲಿ, ಸ್ಮರಣೆಯಲ್ಲಿ ಗಿಡ ನೆಟ್ಟು ಕನಿಷ್ಠ 1 ವರ್ಷ ನೋಡಿಕೊಳ್ಳಿ, ನಂತರ ಅದು ಅದರ ಪಾಡಿಗೆ ಬೆಳೆಯುತ್ತದೆ. ಈ ಮೂಲಕ ಅಪ್ಪು ಕನಸನ್ನು, ಒಳ್ಳೆಯ ಕೆಲಸಗಳನ್ನು ಜೀವಂತವಾಗಿಡೋಣ ಎಂದು ಅಭಿಮಾನಿಗಳನ್ನು ಕೇಳಿಕೊಂಡರು.
ಅಪ್ಪು ಸಮಾಧಿ ಬಳಿ ಇಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗಿಡ ವಿತರಣೆ ಮಾಡಿದರು.
ಇನ್ನು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಯ ಕೊಳ್ಳೂರು ಎಂ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅವರ 6 ಅಡಿ ಪ್ರತಿಮೆಯನ್ನು ಅವರ ಅಭಿಮಾನಿಗಳು ಪ್ರತಿಷ್ಠಾಪನೆ ಮಾಡಿದ್ದಾರೆ.