ಇರೋ ಒಂದೇ ಜನ್ಮದಲ್ಲಿ ಹಲವರ ಬದುಕನ್ನು ಬದುಕುವ, ಶೋಧಿಸುವ ಚಾನ್ಸು ಕಲಾವಿದನಿಗೆ ಮಾತ್ರ: ನಟ ಶೃಂಗ ಸಂದರ್ಶನ
ಕಷ್ಟ ಆದ್ರೂ ಇಷ್ಟ ಆಗೋದನ್ನೇ ಮಾಡ್ಬೇಕು ಅನ್ನೋದು ನಟ ಶೃಂಗ ಫಿಲಾಸಫಿ. ಐಟಿ ಕಂಪನಿಗಳ ಕ್ಯೂಬಿಕಲ್ ಗಳಲ್ಲಿ ಕಳೆದುಹೋಗಬೇಕಾಗಿದ್ದ ಈತ ಇಂದು ನಮ್ಮ ನಡುವಿನ finest ರಂಗಭೂಮಿ ಕಲಾವಿದರಲ್ಲೊಬ್ಬ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಅವರ ಹೊಸ 19.20.21 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಸಂದರ್ಶನ, ಬದುಕಿನ ಪಯಣದ ಝಲಕ್ಕು ಇಲ್ಲಿದೆ.
Published: 19th March 2022 05:32 PM | Last Updated: 19th March 2022 05:32 PM | A+A A-

ಶೃಂಗ
ಸಂದರ್ಶನ: ಹರ್ಷವರ್ಧನ್ ಸುಳ್ಯ
ನಿಮ್ಮನ್ನ ಆಕ್ಟಿಂಗ್ ಸೆಳೆಯೋಕೆ ಏನು ಕಾರಣ?
ಆಕ್ಟಿಂಗ್ ಅಂದ್ರೆ ಯಾಕಿಷ್ಟ ಅನ್ನೋದಕ್ಕೆ ಇನ್ನೂ ಉತ್ರ ಸಿಕ್ಕಿಲ್ಲ. ನಮ್ಗೆ ಇರೋದು ಒಂದೇ ಜನ್ಮ. ಈ ಒಂದೇ ಜನ್ಮದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹಲವರ ಬದುಕನ್ನು ಜೀವಿಸುವ ಅವಕಾಶ ಆಕ್ಟಿಂಗ್ ಅಲ್ಲೇ ಅನ್ಸುತ್ತೆ. ಅದಕ್ಕೇ ನಂಗೆ ಆಕ್ಟಿಂಗ್ ಅಂದ್ರೆ ಇಷ್ಟ.
ಸ್ಟೇಜ್ ಫಿಯರ್ ಆಗೊಲ್ವಾ?
ಆಗುತ್ತೆ. ಸ್ಟೇಜ್ ಮೇಲೆ ಹತ್ತೋಕೆ ವಿಪರೀತ ಧೈರ್ಯ ಬೇಕು. ರಿಹರ್ಸಲ್ ಮಾಡಿರಬೇಕು, ಡಯಲಾಗುಗಳನ್ನು ನೆನಪಿಟ್ಟುಕೊಳ್ಳಬೇಕು. ಹೋಮ್ ವರ್ಕ್ ಮಾಡಿದ್ದರೆ ಮಾತ್ರ ಸ್ಟೇಜ್ ಮೇಲೆ ಜನರನ್ನು ಫೇಸ್ ಮಾಡಬಹುದು.
ರಂಗಭೂಮಿ ಕಲಾವಿದರಿಗೆ ಉದ್ದುದ್ದ ಡಯಲಾಗುಗಳು ಹೇಳುವುದು ಸುಲಭ ಅಲ್ವಾ?
ಹಾಗೇನಿಲ್ಲ. ಆದರೆ ಡಯಲಾಗು ಎಷ್ಟೇ ಉದ್ದ ಇದ್ದರೂ ನಿರಾಯಾಸವಾಗಿ ಒಪ್ಪಿಸಬೇಕಾದ್ದು ಕಲಾವಿದರ ಕರ್ತವ್ಯ. ಸಿನಿಮಾಗಳಲ್ಲಿ ಪುಟಗಟ್ಟಲೆ ಡಯಲಾಗು ಇತ್ತು. ತುಂಬಾ ಕಷ್ಟಪಟ್ಟು ಆ ಸೀನ್ ನಲ್ಲಿ ನಟಿಸಿದ್ದಾಗಿ ಯಾರಾದರೂ ಹೇಳೋದನ್ನ ನೋಡಿದಾಗ ನಗು ಬರುತ್ತೆ. ಡಯಲಾಗ್ ಒಪ್ಪಿಸುವ ಕಲೆ ಕಲಾವಿದನಲ್ಲಿ ಇರಬೇಕಾದ ಫಂಡಮೆಂಟಲ್ ಕ್ವಾಲಿಟಿ.
ನಿಮ್ಮ ತಂದೆ ಬೆನಕ ರಂಗಭೂಮಿ ತಂಡದಲ್ಲಿ ಇದ್ರು ಅಂತ ಕೇಳ್ಪಟ್ಟೆ...
ಹೌದು ಅವರಿಂದಲೇ ಬೆನಕ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸೋ ಹಾಗಾಯ್ತು.
ರಂಗಭೂಮಿ ನಿಮ್ಮನ್ನ ಕಲಾವಿದನಾಗಿ ಹೇಗೆ ರೂಪುಗೊಳಿಸ್ತು?
ರಂಗಭೂಮಿಯಲ್ಲಿ ನಾಗಾಭರಣ, ಮೈಕೊ ಮಂಜುನಾಥ್, ಕೃಷ್ಣಮೂರ್ತಿ ಕವತ್ತಾರ್ ಮುಂತಾದ ಸೀನಿಯರ್ ಕಲಾವಿದರನ್ನು ನೋಡುತ್ತಾ ಬೆಳೆದೆ. ಅದು ಬೇರೆಯದ್ದೇ ಪ್ರಪಂಚ. ಧಾರಾವಾಹಿಗಳಲ್ಲಿ ಪಾಪ್ಯುಲರ್ ಆಗಿದ್ದ ಕಲಾವಿದರು ಬಹುತೇಕರು ರಂಗಭೂಮಿ ಕಲಾವಿದರೇ ಆಗಿರುತ್ತಿದ್ದರು. ಅವರ ಜೊತೆ ನಾಟಕಗಳಲ್ಲಿ ಪಾರ್ಟ್ ಮಾಡುವಾಗ ರೋಮಾಂಚನ.
ಕಲಾವಿದ ಆಗಿರದೇ ಇರುತ್ತಿದ್ದರೆ ಏನಾಗುತ್ತಿದ್ದಿರಿ?
ಕ್ರಿಕೆಟ್ ಆಟಗಾರನಾಗುತ್ತಿದ್ದೆ. ಪಕ್ಕಾ ಐಪಿಎಲ್ ಅಲ್ಲಿ ಆಡುವ ಆಟಗಾರನಾಗುತ್ತಿದ್ದೆ. ಕಾಲೇಜು ಟೀಮಿಗೆಲ್ಲಾ ಆಡಿದ್ದೀನಿ. ಕೋಚಿಂಗ್ ಹೋಗುತ್ತಿದ್ದೆ. ದಿನಬೆಳಗಾದರೆ ಬ್ಯಾಟಿಂಗ್ ಹಿಡಿದು ಅಭ್ಯಾಸ ಮಾಡುತ್ತಿದ್ದೆ. ಆದ್ರೆ ಕ್ರಮೇಣ ಆಕ್ಟಿಂಗ್ ಕಡೆ ಮನಸ್ಸು ವಾಲುತ್ತಿದ್ದಂತೆ ಕ್ರಿಕೆಟ್ ಮೇಲಿನ ಆಸಕ್ತಿ ಹೋಯ್ತು.
ಮೊತ್ತಮೊದಲು ಕ್ಯಾಮೆರಾ ಫೇಸ್ ಮಾಡಿದ ಅನುಭವ
ಕ್ಯಾಮೆರಾ ಮುಂದೆ ಮೊದಲು ನಟಿಸಿದ್ದು ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ. ಅದರಲ್ಲಿ ಪುಟ್ಟ ರೋಲ್. ಆ ಅವಕಾಶ ಸಿಕ್ಕಲು ಕಾರಣ ಯಶ್. ಅವರಾಗ ಬೆನಕ ನಾಟಕ ತಂಡದಲ್ಲಿ ಸಕ್ರಿಯರಾಗಿದ್ದರಿಂದ ಅವರ ಪರಿಚಯವಿತ್ತು. ಆ ದೃಶ್ಯದಲ್ಲಿ ಬಿ. ಜಯಶ್ರೀ ಜೊತೆ ನಟಿಸಬೇಕಿತ್ತು. ಹಲವು ಟೇಕ್ ಗಳು ಆದರೂ ಸೀನ್ ಸರಿಬರದೆ ಒದ್ದಾಡಿ ಹೋಗಿದ್ದೆ.
ಎಂಜಿನಿಯರಿಂಗ್ ಬಿಟ್ಟು ರಂಗಭೂಮಿ ಕಡೆ ಯಾಕಾದ್ರೂ ಬಂದ್ನೋ ಅಂತ ಯಾವತ್ತಾದ್ರೂ ಅನ್ಸಿದ್ಯಾ?
ಒಂದಿನಾನೂ ಅನ್ಸಿಲ್ಲ. ಮನಸ್ಸಿಗೆ ತೃಪ್ತಿ ಕೊಡೋದನ್ನು ಮಾಡೋದು ನಂಗೆ ಮುಖ್ಯ.. ಎಲ್ರೂ ಕೆಲಸದ ನಿಮಿತ್ತ ಅಥ್ವಾ ಪ್ರವಾಸದ ನಿಮಿತ್ತ ಫಾರಿನ್ ಟೂರ್ ಮಾಡ್ತಾರೆ. ನಾನು ಇಷ್ಟಪಟ್ಟು ಆರಿಸಿಕೊಂಡ ನಟನಾ ಕ್ಷೇತ್ರವೇ ನನ್ನನ್ನು ಫಾರಿನ್ ಟೂರ್ ಮಾಡಿಸಿತು ಎನ್ನುವ ಹೆಮ್ಮೆ ನನ್ನದು. 'ಬಾಯ್ ವಿತ್ ಎ ಸೂಟ್ ಕೇಸ್' ಎನ್ನುವ ಇಂಗ್ಲೀಷ್ ನಾಟಕವನ್ನು ಜರ್ಮನಿ, ಮ್ಯಾಡ್ರಿಡ್ ನಲ್ಲಿ ಪ್ರದರ್ಶನ ಮಾಡಿದ್ದೀನಿ. ಅದರಲ್ಲಿ ನನ್ನದು ಮುಖ್ಯ ಪಾತ್ರ. ಗಾಯಕಿ, ಕಲಾವಿದೆ ಎಂ.ಡಿ ಪಲ್ಲವಿ ಕೂಡಾ ಅದರಲ್ಲಿ ನಟಿಸಿದ್ದರು.
ಯಾವ ಪ್ರಕಾರದ ಪಾತ್ರಗಳನ್ನು ಮಾಡೋಕೆ ಆಸೆ?
ಈ ವಿಷಯದಲ್ಲಿ ನಾನು ತುಂಬ ಆಸೆಬುರುಕ. ಎಲ್ಲಾ ಪ್ರಕಾರಗಳ ಪಾತ್ರಗಳನ್ನು ಮಾಡ್ಬೇಕು ಅಂತ ನಂಗೆ ಆಸೆ. ಪಾತ್ರ ಯಾವುದೇ ಆಗಲಿ ಅದನ್ನು, ಅದರ ಪ್ರಪಂಚದೊಳಕ್ಕೆ ಪ್ರೇಕ್ಷಕರನ್ನು ಕರೆದೊಯ್ಯಬೇಕು. ಆ ಪಾತ್ರದ ಮನಸ್ಥಿತಿಯನ್ನು ಪ್ರೇಕ್ಷಕನ ಬಳಿಗೆ ಕರೆದೊಯ್ಯಬೇಕು.
ರವಿಚಂದ್ರನ್ ಅವರ 'ಕನ್ನಡಿಗ' ಸಿನಿಮಾದಲ್ಲಿ ನಟಿಸಿದ್ದೀರಾ
ಅದರಲ್ಲಿ ಕನ್ನಡ ನಿಘಂಟು ತಂದ ಫರ್ಡಿನೆಂಡ್ ಕಿಟೆಲ್ ಗೆ ಕನ್ನಡ ಹೇಳಿಕೊಡೋ ವ್ಯಕ್ತಿಯ ಪಾತ್ರ. ರವಿಚಂದ್ರನ್ ಜೊತೆ ಅಭಿನಯಿಸಿದ್ದು ಒಂದು ಖುಷಿಯಾದರೆ, ಕಿಟೆಲ್ ಪಾತ್ರಧಾರಿ ಜೇಮಿ ಅಲ್ಟರ್ ಜೊತೆ ನಟಿಸಿದ್ದು ಮೆಮೊರೇಬಲ್ ಅನುಭವ.
ಝೀ ಟಿವಿಯಲ್ಲಿ ಜೋಗಿ ಸಿನಿಮಾ ಕುರಿತ ನಿಮ್ಮ ಜಾಹೀರಾತು ಸಖತ್ ಪಾಪ್ಯುಲರ್ ಆಗಿತ್ತು
ಹಾ... ನನಗೇ ಅಚ್ಚರಿಯಾಗುವಷ್ಟು ಜನಪ್ರಿಯತೆ ಅದರಿಂದ ಸಿಕ್ಕಿತು. ಜೋಗಿ ಸಿನಿಮಾ ಪ್ರಸಾರವಾಗುತ್ತಿದ್ದ ನೆಪದಲ್ಲಿ ಝೀ ವಾಹಿನಿಯವರು ಒಂದು ಜಾಹೀರಾತು ಮಾಡಲು ಮುಂದಾಗಿದ್ದರು. ಸಿನಿಮಾ ಪ್ರಸಾರದ ಜಾಹೀರಾತು ಮಾಡುವ ವಾಹಿನಿಯ ಐಡಿಯಾ ತುಂಬಾ ಹೊಸತು. ಅದಕ್ಕಾಗಿ ನನ್ನನ್ನು ಸಂಪರ್ಕಿಸಿದರು. ಹೀಗಾಗಿ ನಾನು ಅದರಲ್ಲಿ ನಟಿಸುವಂತಾಯ್ತು. ಐಟಿ ಕಂಪನಿಯಲ್ಲಿ ಎಲ್ಲರೆದುರು ಜೋಗಿ ಮಾದೇಶನಂತೆಯೇ ಡ್ಯಾನ್ಸ್ ಮಾಡುವ ದೃಶ್ಯ ತುಂಬಾ ಜನರಿಗೆ ಇಷ್ಟವಾಗಿತ್ತು.
ನಟನೆ ಬಿಟ್ಟು ಇನ್ಯಾವುದರಲ್ಲಿ ತೊಡಗಿಸಿಕೊಂಡಿದ್ದೀರಾ?
ಸ್ಟೋರಿ ಟೆಲ್ ಎನ್ನುವ ಆಡಿಯೊ ಬುಕ್ಸ್ ಸಂಸ್ಥೆಗೆ ದನಿ ನೀಡುತ್ತೇನೆ. ಇವು ರೇಡಿಯೋ ನಾಟಕಗಳ ಹಾಗಿರುತ್ತವೆ. ಕಿರಣ್ ನಾಯ್ಕ್ ಎಂಬುವವರಿಂದ ನನಗೆ ಈ ಅವಕಾಶ ಸಿಕ್ಕಿದ್ದು. ಕಾದಂಬರಿಗಳನ್ನು ಆಡಿಯೊ ಬುಕ್ ಆಗಿ ರೂಪಿಸುವ ಪರಿಕಲ್ಪನೆಯೇ ಅದ್ಭುತವಾದುದು. ಈ ಕೆಲಸದಿಂದ ಖುಷಿಯೂ ಸಿಗುತ್ತಿದೆ, ಜೇಬು ಕೂಡಾ ತುಂಬುತ್ತಿದೆ.
ಸಿನಿಮಾಗಳನ್ನು ನೋಡ್ತೀರಾ? ನೋಡಿದ್ದರಲ್ಲಿ ಇತ್ತೀಚಿಗೆ ಯಾವುದಿಷ್ಟವಾಯಿತು?
ಸಮಯ ಸಿಕ್ಕಾಗ ನೋಡ್ತೀನಿ. ಹೊಸ ಸಿನಿಮಾಗಳನ್ನ ನೋಡೋದು ಕಡಿಮೆ. ಹಳೆಯ ಸಿನಿಮಾಗಳೇ ನನಗಿಷ್ಟ. ರೀಸೆಂಟ್ ಆಗಿ ನೋಡಿದ್ದರಲ್ಲಿ ತಮಿಳಿನ ಸರ್ಪಟ್ಟ, ಅಸುರನ್, ಪರಿಯೇರುಂ ಪೆರುಮಾಳ್ ಇಷ್ಟವಾದವು.
ಕನ್ನಡದಲ್ಲಿ ಯಾರು ಇಷ್ಟ ಆಗ್ತಾರೆ?
ಕನ್ನಡದಲ್ಲಿ ಕೆ.ವಿ ರಾಜು ಸಿನಿಮಾಗಳು ಇಷ್ಟ. ಅದರಲ್ಲೂ ಹುಲಿಯಾ ತುಂಬಾ ಇಷ್ಟ. ಬಿ.ಎಂ ಗಿರಿರಾಜ್ ಅವರ ಜಟ್ಟ, ಅಮರಾವತಿ ಸಿನಿಮಾಗಳು ಇಷ್ಟವಾಗಿದ್ದವು.
ನಿಮ್ಮ ಇಷ್ಟದ ಸಿನಿಮಾಗಳನ್ನ ನೋಡಿದರೆ ನಿಮಗೆ ವಸ್ತುನಿಷ್ಟ ಸಿನಿಮಾಗಳು ಹಿಡಿಸುತ್ತವೆ ಅನ್ಸುತ್ತೆ
ಕರೆಕ್ಟ್. ನಿರ್ದಿಷ್ಟ ವಿಚಾರದ ಕುರಿತು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಸಿನಿಮಾಗಳು ನನಗಿಷ್ಟ. ಹೀಗಾಗಿ ೧೯.೨.೨೧ ಸಿನಿಮಾಗೆ ಎದುರು ನೋಡುತ್ತಿದ್ದೇನೆ. ಮಾರ್ಚ್ ನಲ್ಲಿ ಅದರ ಶೂಟಿಂಗ್ ಶುರುವಾಗಲಿದೆ.
ನಿರ್ದೇಶಕ ಮನ್ಸೋರೆ ಅವರ 19.20.21 ಸಿನಿಮಾದಲ್ಲಿ ನಾಯಕರಾಗಿ ನಟಿಸ್ತಿದ್ದೀರಾ. ಸಿನಿಮಾದ ಕಥಾವಸ್ತು ಬಗ್ಗೆ ಕುತೂಹಲ ಹುಟ್ಟುತ್ತಿದೆ. ಕಥೆಯೇನು ಅಂತ ಹೇಳಬಹುದಾ?
ಇಲ್ಲ. ಈಗಲೇ ಏನೂ ಹೇಳುವಂತಿಲ್ಲ. ಸಿನಿಮಾ ತಂಡದಿಂದ ಸಿನಿಮಾ ಕಥೆಯ ಕುರಿತು ಈಗಲೇ ಏನನ್ನೂ ಬಾಯಿತೆರೆಯದಂತೆ ನಿರ್ದೇಶನ ಸಿಕ್ಕಿದೆ.
ಇಟ್ಸ್ ಓಕೆ. ಆ ಸಿನಿಮಾ ನಿಮಗೆ ಯಶಸ್ಸು ತಂದುಕೊಡುತ್ತೆ ಅಂತ ಹಾರೈಸುತ್ತೇನೆ
ಥ್ಯಾಂಕ್ ಯೂ