ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್
ಖ್ಯಾತ fairness ಕ್ರೀಮ್ ಸಂಸ್ಥೆಯೊಂದು ಹಿಂದೊಮ್ಮೆ ವಿವಾದಾತ್ಮಕ ಜಾಹೀರಾತಿನಲ್ಲಿ ಕಪ್ಪು ವರ್ಣದ ಯುವತಿ ತನ್ನ ಮೈಬಣ್ಣದಿಂದಾಗಿ ಉದ್ಯೋಗ ವಂಚಿತಳಾಗುವುದನ್ನು ತೋರಿಸಿತ್ತು. ಅಂಥದ್ದೇ ಅನುಭವ ನಟ ಶ್ರೀರಾಮ್ ಗೂ ಆಗಿದೆ. ನೋಡಲು ಕೆಂಪಗೆ, ಬೆಳ್ಳಗಿರುವ ಕಾರಣಕ್ಕೇ ಹಲವು ಸಿನಿಮಾ ಅವಕಾಶಗಳು ಅವರ ಕೈತಪ್ಪಿವೆ.
Published: 28th March 2022 01:47 PM | Last Updated: 28th March 2022 01:49 PM | A+A A-

ಶ್ರೀರಾಂ
ಸಂದರ್ಶನ: ಹರ್ಷವರ್ಧನ್ ಸುಳ್ಯ

ಸಿವಿಲ್ ಎಂಜಿನಿಯರ್ ಆಗಿ ಮನೆ ಕಟ್ಟುವುದರಲ್ಲಿ ಬಿಜಿಯಾಗಿರಬೇಕಿದ್ದ ಶ್ರೀರಾಮ್ ಇಂದು ಬಣ್ಣದ ಜಗತ್ತಿನಲ್ಲಿ ತಮ್ಮ ಕನಸು ಕಟ್ಟಿಕೊಳ್ಳುತ್ತಿದ್ದಾರೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಎಂಜಿನಿಯರ್ ಪ್ರತಿಭೆಗಳ ಸಾಲಿಗೆ ಶ್ರೀರಾಮ್ ಹೊಸ ಸೇರ್ಪಡೆ. ಅವರು ದಕ್ಷಿಣಕನ್ನಡದ ಪುತ್ತೂರಿನವರು. ಎಂಜಿನಿಯರಿಂಗ್ ವಿದ್ಯಾರ್ಥಿ ದೆಸೆಯಿಂದಲೂ ಆಕ್ಟಿಂಗ್ ಎಂದರೆ ಸೆಳೆತ. ಆ ಸೆಳೆತವೇ ಅವರಿಗೆ ಬಣ್ಣದ ಜಗತ್ತಿನಲ್ಲಿ ಐಡೆಂಟಿಟಿ ಸಿಗುವಂತೆ ಮಾಡಿದೆ. ಜೆ.ಕೆ ಪ್ರಮುಖಪಾತ್ರದಲ್ಲಿ ನಟಿಸಿರುವ, ಬಿಡುಗಡೆಗೆ ಸಿದ್ಧವಾಗುತ್ತಿರುವ ಕಾಡ ಸಿನಿಮಾದಲ್ಲಿ, ಶ್ರೀರಾಂ ವಿಲನ್. ಅನಂತ್ ನಾಗ್ ನಟಿಸಿದ್ದ ಪ್ಲ್ಯಾನ್ ಸಿನಿಮಾದ ಮೂವರು ನಾಯಕರಲ್ಲಿ ಶ್ರೀರಾಮ್ ಕೂಡಾ ಒಬ್ಬರು. ಅಶ್ವಿನಿ ನಕ್ಷತ್ರ, ಲಕ್ಷ್ಮಿ ಬಾರಮ್ಮ, ಕಾವೇರಿ, ರಾಧಾ ರಮಣ, ಮಗಳು ಜಾನಕಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆತಾದರು.
ಲೈಫಿಗಿಂತ ದೊಡ್ಡ ಟೀಚರ್ ಇಲ್ಲ
ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ತಿಂಗಳಿಗೆ 30,000 ಸಂಬಳದ ನೌಕರಿ ಮಾಡುತ್ತಾ ಬಣ್ಣದ ಗೀಳನ್ನು ಅಂಟಿಸಿಕೊಂಡಿದ್ದ ಶ್ರೀರಾಮ್ ಗೆ ಕಾಲೇಜು ದಿನಗಳಿಂದಲೂ ಆಕ್ಟಿಂಗ್ ಬಗ್ಗೆ ಒಲವು. ಆದರೆ ಅದಕ್ಕಾಗಿ ಕೆಲಸ ಬಿಡಲು ಭಯ. ಬಣ್ಣದ ಜಗತ್ತನ್ನು ಹೇಗೆ ನಂಬುವುದು ಎನ್ನುವುದೇ ಅವರಿಗಿದ್ದ ದೊಡ್ಡ ಗೊಂದಲ. ಹೀಗಾಗಿ ನೌಕರಿ ಜೊತೆಗೇ ಧಾರಾವಾಹಿಗಳಲ್ಲಿ ನಟನೆ, ರಂಗಭೂಮಿಯಲ್ಲಿ ಸಕ್ರಿಯರಾದರು.
ಈಗ ಬಣ್ಣದ ಜಗತ್ತಿನ ಬಗ್ಗೆ ತಮಗಿದ್ದ ಭಯವನ್ನು ಮೀರಿರುವ ಸಂಪೂರ್ಣ ನಟನೆಯಲ್ಲಿ ತೊಡಗಿದ್ದಾರೆ. ಕನಸಿನ ಸಾಕಾರಕ್ಕೆ ಅವರ ಪತ್ನಿ ಸುಪ್ರಿಯಾರ ಸಾಥ್ ಸಿಕ್ಕಿದೆ. ಆಕೆ ಫಾರ್ಮಾ ಸಂಸ್ಥೆಯೊಂದರಲ್ಲಿ ಸಂಶೋಧಕಿ.
ಸಿಕ್ಸ್ ಪ್ಯಾಕ್ ಮತ್ತು ಮನಿ
ಸಿನಿಮಾರಂಗಕ್ಕೂ ಸಿಕ್ಸ್ ಪ್ಯಾಕ್ ಗೂ ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಸಿಕ್ಸ್ ಪ್ಯಾಕ್ ಎಂದ ಕೂಡಲೆ ಶ್ರದ್ಧೆ, ಡೆಡಿಕೇಷನ್ ಕುರಿತು ಎಲ್ಲರೂ ಮಾತನಾಡುತ್ತಾರೆ. ಆದರೆ ವಿಲ್ ಪವರ್ ಗಿಂತ ಹೆಚ್ಚಾಗಿ ಮನಿ ಪವರ್ ಕೂಡಾ ತುಂಬಾ ಮುಖ್ಯ ಅಂತಾರೆ ಶ್ರೀರಾಮ್. ಹೇಳೋಕೆ ಮಾತ್ರ ಡಯೆಟ್. ಆದರೆ ಆ ಡಯೆಟ್ ಗೆ ಮಿಕ್ಕವರು ತಿನ್ನೋ ಆಹಾರಕ್ಕಿಂತ ತುಂಬಾ ಕಾಸ್ಟ್ಲಿ. ಆದರೂ 10ಕ್ಕಿಂತ ಹೆಚ್ಚು ಮೊಟ್ಟೆ, ಪ್ರೋಟೀನ್ ಪೌಡರ್, ಚಪಾತಿ, ಕ್ಯಾಲೊರಿಯುಕ್ತ ಆಹಾರಕ್ಕಾಗಿ ತುಂಬಾ ಖರ್ಚಾಗುತ್ತೆ ಎನ್ನುವುದು ಅವರ ಅನುಭವದ ಮಾತುಗಳು. ಸೆಲಬ್ರಿಟಿ ಫಿಟ್ನೆಸ್ ಟ್ರೇನರ್ ಶ್ರೀನಿವಾಸ ಗೌಡ್ರ ಪ್ರೋತ್ಸಾಹದಿಂದ ಫಿಟ್ನೆಸ್ ಕಾಪಾಡಿಕೊಳ್ಳೋಕೆ ಸಾಧ್ಯವಾಗ್ತಿದೆ ಎಂದು ಅವರಿಗೆ ಕೃತಜ್ಞತೆ ಅರ್ಪಿಸುತ್ತಾರೆ.
ಪ್ರಾಂಕ್ ಕಾಲ್ ಸಂದರ್ಶನ
ಅಡಿಷನ್ ಇರಲಿ, ಜಾಬ್ ಇಂಟರ್ ವ್ಯೂ ಇರಲಿ ಅಯ್ಕೆಯಾಗುತ್ತಿರುವ ಪೊಸಿಷನ್ ಗೆ ತಕ್ಕಂತೆ ಸಂದರ್ಶನವೂ ಇರುತ್ತದೆ. ಆಗ ತಾನೇ ಶ್ರೀರಾಮ್ ಒಂದು ಆಡಿಷನ್ ಮುಗಿಸಿ ಮನೆಯಲ್ಲಿದ್ದರು. ಆಡಿಷನ್ ಚೆನ್ನಾಗಿ ಮಾಡಿದ್ದರೂ ಈ ಹಿಂದಿನ ಆಡಿಷನ್ ಗಳ ಅನುಭವದ ಹಿನ್ನೆಲೆಯಲ್ಲಿ ಆಸೆಯನ್ನೇನೂ ಇಟ್ಟುಕೊಂಡಿರಲಿಲ್ಲ. ಹೀಗಿರುವಾಗ ಒಂದು ಪ್ರಾಂಕ್ ಕಾಲ್ ಬಂದಿತ್ತು. ಕರೆ ಮಾಡಿದಾತ ಕೆರಳುವಂತೆ ಅಸಂಬದ್ಧವಾಗಿ ಮಾತಾಡುತ್ತಿದ್ದ. ಶ್ರೀರಾಮ್ ಕೂಲ್ ಆಗಿಯೇ ಆತನನ್ನು ಹ್ಯಾಂಡಲ್ ಮಾಡಿ ಕರೆ ಕಟ್ ಮಾಡಿದರು. ನಂತರ ಗೊತ್ತಾಗಿದ್ದು ಆದು ಸಿನಿಮಾ ತಂಡದ ಆಡಿಷನ್ ನ ಕೊನೆಯ ಭಾಗ ಎಂದು. ಅದರ ನಂತರವೇ ಶ್ರೀರಾಮ್ ಆ ಸಿನಿಮಾಗೆ ಆಯ್ಕೆಯಾಗಿದ್ದು!
'ರಾಧಾ ರಮಣ' ಮಹಾತ್ಮೆ
ಮೊದಲ ಬ್ರೇಕ್ ನೀಡಿದ್ದು ಕಲರ್ಸ್ ಕನ್ನಡದ 'ರಾಧಾ ರಮಣ' ಧಾರಾವಾಹಿ. ಆಡಿಷನ್ ಮಾಡಿದ್ದು ನಟ, ನಿರ್ಮಾಪಕ ದಿಲೀಪ್ ರಾಜ್. ಬರೀ ಏಳೇ ದಿನಗಳ ಶೂಟಿಂಗ್ ಇರೋ ಪಾತ್ರಕ್ಕೆ ಶ್ರೀರಾಮ್ ಆಯ್ಕೆಯಾದರು. ಆದರೆ ಆ ಏಳು ದಿನ 3 ವರ್ಷಗಳ ಕಾಲ ಮುಂದುವರಿಯಿತು. ಧಾರಾವಾಹಿ ಡೆವೆಲಪ್ ಆಗುತ್ತಿದ್ದಂತೆಯೇ ಪಾತ್ರಗಳ ಹಣೆಬರಹವೂ ಬದಲಾಗಿ ಶ್ರೀರಾಮ್ ನಿರ್ವಹಿಸಿದ್ದ ಲಾಯರ್ ಪಾತ್ರ ಪ್ರಮುಖ ಪಾತ್ರವಾಗಿ ರೂಪುಗೊಂಡಿತ್ತು. ಅಲ್ಲದೆ ಆ ಪಾತ್ರಕ್ಕೆ ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಕೂಡಾ ವರದಾನವಾಗಿತ್ತು.
ಬೆಳ್ಳಗಿರೋದ್ ತಪ್ಪಾ?
ಒಂದು fairness ಕ್ರೀಮ್ ಜಾಹೀರಾತಿನಲ್ಲಿ ಕಪ್ಪು ವರ್ಣದ ಯುವತಿ, ಬಣ್ಣದಿಂದಾಗಿ ಉದ್ಯೋಗ ವಂಚಿತರಾಗುವುದನ್ನು ತೋರಿಸಿತ್ತು. ಅಂಥದ್ದೇ ಅನುಭವ ಶ್ರೀರಾಮ್ ಗೂ ಆಗಿದೆ. ನೋಡಲು ಕೆಂಪಗೆ, ಬೆಳ್ಳಗೆ ಇರುವ ಕಾರಣಕ್ಕೇ ಹಲವು ಸಿನಿಮಾ ಅವಕಾಶಗಳು ಅವರ ಕೈತಪ್ಪಿವೆ. ಕೆಲ ನಿರ್ದೇಶಕರೇ ಆ ಮಾತನ್ನು ಮುಖಕ್ಕೇ ಹೇಳಿರುವುದೂ ಇದೆ. ಅಚ್ಚರಿ ಎಂದರೆ ಕಿರುತೆರೆ ಕ್ಷೇತ್ರದಲ್ಲಿ ಆ ಅನುಭವ ಆಗಿಲ್ಲ. ಈ ಬಗ್ಗೆ ಶ್ರೀರಾಮ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸಿನಿಮಾಗಳಿಗೆ ಯಾವ ರೀತಿಯ ಪಾತ್ರಧಾರಿ ಬೇಕಾಗುತ್ತದೆ ಅನ್ನೋದು ನಿರ್ದೇಶಕರಿಗೆ ಚೆನ್ನಾಗಿ ಐಡಿಯಾ ಇರುತ್ತೆ. ಹೀಗಾಗಿ ಅದನ್ನು ದೂರೋಕೆ ಆಗಲ್ಲ ಎಂದಾತ ಮುಗುಳ್ನಗುತ್ತಾರೆ.

ಪಾನಿ ಪೂರಿ ಟ್ರಬಲ್
ಸಮಸ್ಯೆಗೆ ದೊಡ್ಡದು ಚಿಕ್ಕದು ಎನ್ನುವ ಹಂಗಿಲ್ಲ. ಪಾನಿ ಪೂರಿ ಕೂಡಾ ಕಲಾವಿದರಿಗೆ ಹೇಗೆ ಸಮಸ್ಯೆ ತರಬಹುದು ಎನ್ನುವುದಕ್ಕೆ ಒಳ್ಳೆ ನಿದರ್ಶನ ಇಲ್ಲಿದೆ. ಕಟ್ಟುನಿಟ್ಟಾಗಿ ಫಿಟ್ನೆಸ್ ಮಂತ್ರಗಳನ್ನು ಪಾಲಿಸುವ ಶ್ರೀರಾಮ್ ಗೆ ಪತ್ನಿ ಜೊತೆ ಸುತ್ತಾಡುವಾಗ ಸಂಧಿಗ್ಧತೆ ಎದುರಾಗುವುದುಂಟು. ಪಾನಿಪೂರಿ ಗಾಡಿಯೋ, ಇನ್ಯಾವುದೋ ಫಾಸ್ಟ್ ಫುಡ್ ರೆಸ್ಟೋರೆಂಟೋ ಕಣ್ಣಿಗೆ ಬಿದ್ದರೆ ಪತ್ನಿಗೆ ತಿನ್ನುವ ಆಸೆಯಾಗುತ್ತದೆ. ಆದರೆ ಶ್ರೀರಾಂ ತಿನ್ನುವ ಹಾಗಿಲ್ಲ. ಪತಿಯನ್ನು ಬಿಟ್ಟು ಒಬ್ಬರೇ ತಿನ್ನಲು ಆಕೆಗೂ ಮನಸ್ಸಿಲ್ಲ. ಆಗ ಪ್ಲ್ಯಾನ್ ಡ್ರಾಪ್. ಪತ್ನಿಯ ಚಿಕ್ಕ ಆಸೆ ಪೂರೈಸಲಿಲ್ಲವಲ್ಲಾ ಅನ್ನೋ ಕೊರಗು ಶ್ರೀರಾಮ್ ಗೆ. ಈಗೀಗ ಫಿಟ್ನೆಸ್ ಮಂತ್ರಕ್ಕೆ ವಿನಾಯಿತಿ ನೀಡಿ ಆಕೆ ಜೊತೆ ಪಾನಿ ಪೂರಿಗೆ ಕಂಪನಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ದುನಿಯಾ ಸೂರಿ ಫ್ಯಾನ್
ತಮಗೆ 'ಕಾಡ' ಸಿನಿಮಾ ಆಫರ್ ಸಿಗಲು ಕಾರಣರಾದ ಉಗ್ರಂ ಮಂಜು ಅವರನ್ನು ಶ್ರೀರಾಮ್ ನೆನೆಸಿಕೊಳ್ಳುತ್ತಾರೆ. ಮುಖ್ಯ ವಿಲನ್ ಆಗಲು ಹಿಂದೇಟು ಹಾಕಿದಾಗ ಮಂಜು ಅವರೇ 'ಯೂ ಕ್ಯಾನ್ ಡೂ ಇಟ್' ಎಂದು ಹುರಿದುಂಬಿಸಿದ್ದು. ಹೊಸಬರಿಗೆ ಅವಕಾಶ ನೀಡಲು ಹಿಂದೇಟು ಹಾಕದ ಪ್ರತಿಭಾನ್ವಿತ ನಿರ್ದೇಶಕ ದುನಿಯಾ ಸೂರಿ ಎಂದರೆ ಅಚ್ಚುಮೆಚ್ಚು. ಅವರ ಎಲ್ಲಾ ಸಿನಿಮಾಗಳನ್ನೂ ಹುಚ್ಚು ಹಿಡಿದಂತೆ ಶ್ರೀರಾಮ್ ನೋಡಿದ್ದಾರೆ. ಸೂರಿ ಕಣ್ಣಿಗೆ ಬಿದ್ದು ಒಮ್ಮೆಯಾದರೂ ಅವರ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಅವರ ಜೀವನದ ಧ್ಯೇಯ. Hope he succeeds. ಬದುಕಿನ Priorityಗಳನ್ನು ಬದಿಗೊತ್ತಿ ಕನಸುಗಳನ್ನು ಬೆನ್ನಟ್ಟಿ ಹೋಗುವ ಶ್ರೀರಾಮ್ ರಂಥ ಪ್ರತಿಭೆಗಳ ಅವಶ್ಯಕತೆ ಚಿತ್ರರಂಗಕ್ಕಿದೆ.