ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ: ಕ್ಷಮೆ ಕೇಳಿದ ನಟ ವಿಲ್ ಸ್ಮಿತ್
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ನಿಯನ್ನು ಹಾಸ್ಯ ಮಾಡಿದ ಹಾಸ್ಯನಟ ಹಾಗೂ ನಿರೂಪಕ ಕ್ರಿಸ್ ರಾಕ್ ಗೆ ವೇದಿಕೆ ಮೇಲೆ ಹೋಗಿ ಅಮೆರಿಕದ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ವರ್ತನೆಗೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು.
Published: 29th March 2022 09:00 AM | Last Updated: 29th March 2022 01:08 PM | A+A A-

ನಟ ವಿಲ್ ಸ್ಮಿತ್
ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ನಿಯನ್ನು ಹಾಸ್ಯ ಮಾಡಿದ ಹಾಸ್ಯನಟ ಹಾಗೂ ನಿರೂಪಕ ಕ್ರಿಸ್ ರಾಕ್ ಗೆ ವೇದಿಕೆ ಮೇಲೆ ಹೋಗಿ ಅಮೆರಿಕದ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ವರ್ತನೆಗೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು.
ಅದಕ್ಕೆ ವಿಲ್ ಸ್ಮಿತ್ ಕ್ಷಮೆ ಕೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, ಕ್ರಿಸ್, ನಾನು ಸಾರ್ವಜನಿಕವಾಗಿಯೇ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನಾನು ಹದ್ದು ಮೀರಿ ವರ್ತಿಸಿದೆ, ನಾನು ಮಾಡಿದ್ದು ತಪ್ಪು. ನಾನು ಮಾಡಿರುವ ಕೆಲಸಕ್ಕೆ ನನಗೀಗ ನಾಚಿಕೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ನಿಮ್ಮನ್ನು ಗುರಿಯಾಗಿಸಿ ಈ ರೀತಿ ಮಾಡಿದ್ದಲ್ಲ. ಪ್ರೀತಿ, ಸೌಹಾರ್ದತೆ ನೆಲೆಸಿರುವ ಜಗತ್ತಿನಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಬರೆದುಕೊಂಡಿದ್ದಾರೆ.
ಯಾವುದೇ ರೀತಿಯಲ್ಲಿ ಹಿಂಸೆ ವಿಷಕಾರಿಯಾಗಿದ್ದು ನಮ್ಮನ್ನು ವಿನಾಶದತ್ತ ತಳ್ಳುತ್ತದೆ. ಕಳೆದ ರಾತ್ರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ವೇಳೆ ನಾನು ನಡೆದುಕೊಂಡ ರೀತಿ ಖಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ವೃತ್ತಿಯಲ್ಲಿ ಹಾಸ್ಯ ಒಂದು ಭಾಗ, ಆದರೆ ನನ್ನ ಪತ್ನಿಯ ಆರೋಗ್ಯ ಸ್ಥಿತಿಗತಿಯ ಮಧ್ಯೆ ಆಕೆಯ ಬಗ್ಗೆ ಆಡಿದ ಹಾಸ್ಯದ ಮಾತುಗಳನ್ನು ಒಪ್ಪಿಕೊಳ್ಳಲು ಆ ಕ್ಷಣ ನನ್ನಿಂದ ಸಾಧ್ಯವಾಗಲಿಲ್ಲ, ಹಾಗಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ವಿಲ್ ಸ್ಮಿತ್ ಕ್ಷಮೆ ಕೇಳಿದ್ದಾರೆ.
ಆಸ್ಕರ್ ಕಾರ್ಯಕ್ರಮದ ಆಯೋಜಕರಲ್ಲಿ ಕೂಡ ಕ್ಷಮೆ ಕೇಳಿದ್ದಾರೆ.ನಿನ್ನೆ ಕ್ರಿಸ್ ರಾಕ್ ಅವರು ಹಾಸ್ಯ ಮಾಡಿದಾಗ ಆರಂಭದಲ್ಲಿ ವಿಲ್ ಸ್ಮಿತ್ ಎಲ್ಲರ ಜೊತೆ ಸೇರಿ ನಕ್ಕಿದ್ದರು. ಆದರೆ ಅವರ ಪತ್ನಿ ಜಡಾ ಪಿಂಕೆಟ್ಟ್ ಸ್ಮಿತ್ ಬೇಸರಗೊಂಡಂತೆ ಕಂಡುಬಂತು. ಇದರಿಂದ ಕೋಪೋದ್ರಿಕ್ತರಾದ ವಿಲ್ ಸ್ಮಿತ್ ವೇದಿಕೆಗೆ ಹೋಗಿ ಕ್ರಿಸ್ ರಾಕ್ ಗೆ ಹೊಡೆದಿದ್ದರು.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ: ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್!
ನಂತರ ಕೆಲವೇ ಕ್ಷಣಗಳಲ್ಲಿ ವಿಲ್ ಸ್ಮಿತ್ ಅತ್ಯುತ್ತಮ ನಟ ಎಂದು ಪ್ರಶಸ್ತಿ ಘೋಷಣೆ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡುವಾಗಲೂ ಕ್ಷಮೆ ಕೇಳಿದ್ದರು. ಮೊನ್ನೆ ಭಾನುವಾರ ರಾತ್ರಿ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ 94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.