ರಸ್ತೆ ಅಪಘಾತದಲ್ಲಿ ಜನಪ್ರಿಯ ಹಾಸ್ಯ ನಟಿ ಸುನೇತ್ರಾ ಪಂಡಿತ್'ಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಜನಪ್ರಿಯ ಹಾಸ್ಯ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
Published: 08th May 2022 11:03 AM | Last Updated: 08th May 2022 11:03 AM | A+A A-

ನಟಿ ಸುನೇತ್ರಾ ಪಂಡಿತ್
ಬೆಂಗಳೂರು: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಜನಪ್ರಿಯ ಹಾಸ್ಯ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಶನಿವಾರ (ಮೇ 7) ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಸುನೇತ್ರಾ ಪಂಡಿತ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ಸುನೇತ್ರಾ ಪಂಡಿತ್ ಅರಿಗೆ ಗಂಭೀರವಾದ ಗಾಯಗಳಾಗಿದ್ದು, ತೀವ್ರ ಸ್ರಾವವಾಗಿದೆ. ಕೂಡಲೇ ಸ್ಥಳೀಯರು ಸುನೇತ್ರ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಸುನೇತ್ರಾ ಅವರು ಕಿರುತೆರೆ ಲೋಕದ ಚಿರಪರಿಚಿತ ಕಲಾವಿದರು. ಹಾಸ್ಯ, ಗಂಭೀರ ಎಲ್ಲ ಪಾತ್ರಗಳಿಗೂ ಸುನೇತ್ರಾ ಸೈ ಅನ್ನಿಸಿಕೊಂಡಿದ್ದಾರೆ. ಇದರ ಜೊತೆಗೆ ಸುನೇತ್ರ ಓರ್ವ ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿದ್ದಾರೆ. ಸುನೇತ್ರಾ ಅವರು ಹಲವು ಪಾತ್ರಗಳಿಗೆ ಬಣ್ಣ ಹಚ್ಚಿದ್ದರೂ, ಸಿಲ್ಲಿ ಲಲ್ಲಿ ಧಾರಾವಾಹಿಯ ವಿಶಾಲು ಪಾತ್ರ ಎಲ್ಲರ ಮನಗೆದ್ದಿತ್ತು. ರಂಗಭೂಮಿ ಕಲಾವಿದೆಯಾಗಿರುವ ಸುನೇತ್ರ ಅವರು, ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇನ್ನು ಸುನೇತ್ರಾ ಅವರ ಪತಿ ರಮೇಶ್ ಪಂಡಿತ್ ಕೂಡ ಕಲಾವಿದರಾಗಿದ್ದು, ಚಂದನವನದಲ್ಲಿ ಖಳನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ರಮೇಶ್ ಪಂಡಿತ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.