ಶಸ್ತ್ರಚಿಕಿತ್ಸೆ ವೇಳೆ ಯುವ ನಟಿ ಸಾವು: ಪುರುಷರಿಗಿಲ್ಲದ ಸೌಂದರ್ಯ ಮಾನದಂಡ ಮಹಿಳೆಯರಿಗೇಕೆ? ರಮ್ಯಾ ಪ್ರಶ್ನೆ
ಯುವ ನಟಿ ನಟಿ ಚೇತನಾ ರಾಜ್ ಅವರು ತೂಕ ಇಳಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿಗೆ ಗುರಿಯಾಗಿ ಕೊನೆಯುಸಿರೆಳೆದಿರುವುದಕ್ಕೆ ಮಾಜಿ ಸಂಸದೆ, ನಟಿ ರಮ್ಯಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Published: 18th May 2022 09:11 PM | Last Updated: 18th May 2022 09:12 PM | A+A A-

ಚೇತನಾ ರಾಜ್-ರಮ್ಯಾ
ಬೆಂಗಳೂರು: ಯುವ ನಟಿ ನಟಿ ಚೇತನಾ ರಾಜ್ ಅವರು ತೂಕ ಇಳಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿಗೆ ಗುರಿಯಾಗಿ ಕೊನೆಯುಸಿರೆಳೆದಿರುವುದಕ್ಕೆ ಮಾಜಿ ಸಂಸದೆ, ನಟಿ ರಮ್ಯಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸೌಂದರ್ಯದ ಮಾನದಂಡಗಳು ಸ್ತ್ರೀಯರ ಮೇಲೆ ಹೇರಲ್ಪಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಸಿನೆಮಾ ರಂಗ ಮಹಿಳೆಯರ ಮೇಲೆ ಹೇರಲ್ಪಟ್ಟಿರುವ ಸೌಂದರ್ಯದ ಮಾನದಂಡಗಳನ್ನು ಖಂಡಿಸಿದ್ದಾರೆ. ಉದ್ಯಮವು ಮಹಿಳೆಯರ ಮೇಲೆ ಅವಾಸ್ತವಿಕ ಸೌಂದರ್ಯ ಮಾನದಂಡಗಳನ್ನು ಹೇರಿದೆ. ನಿರ್ದಿಷ್ಟ ರೀತಿಯಲ್ಲಿಯೇ ಕಾಣಿಸಿಕೊಳ್ಳಲು ಮಹಿಳೆಯರ ಮೇಲೆ ಅಪಾರ ಒತ್ತಡವಿದೆ. ಎಂದಿದ್ದಾರೆ.
2018 ರಲ್ಲಿ ನನ್ನ ಪಾದದಿಂದ ಗೆಡ್ಡೆಯನ್ನು ತೆಗೆದ ನಂತರ ನನ್ನ ತೂಕ ಹೆಚ್ಚಾಯಿತು. ಇದರಿಂದ ಬಳಲಿದೆ. ತೂಕ ಇಳಿಸುವ ಪ್ರಯತ್ನ ಮಾಡತೊಡಗಿದೆ. ಇದಕ್ಕೆ ಹಲವಾರು ತ್ವರಿತ ಪರಿಹಾರಗಳಿವೆ ಆದರೆ ನಾನು ಅವುಗಳಿಗೆ ಮೊರೆ ಹೋಗಲಿಲ್ಲ. ಇವುಗಳ ಪ್ರಲೋಭನೆಗೆ ಒಳಗಾಗುವುದು ಸುಲಭ. ಈ ದಿಶೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ನಟಿ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ ಎಂದಿದ್ದಾರೆ.
— Divya Spandana/Ramya (@divyaspandana) May 17, 2022
ಈ ಸೌಂದರ್ಯದ ಮಾನದಂಡಗಳು ಪುರುಷರಿಗೆ ಏಕಿಲ್ಲ ಎಂದು ಪ್ರಶ್ನಿಸಿರುವ ಅವರು ಇಂಥ ಮಾನದಡಗಳು ಯಾರಿಗೂ ಇರಬಾರದು ಎಂದೇ ಅಭಿಪ್ರಾಯಪಟ್ಟಿದ್ದಾರೆ.
ನಾಯಕನಟನಿಗೆ ದಪ್ಪ ಹೊಟ್ಟೆಯ ಹೊರೆ ಇರಬಹುದು. ಕೂದಲು ಉದುರಿ ಹೋಗಿರಬಹುದು, ವಿಗ್ ಧರಿಸಿರಬಹುದು ಆದರೂ ಅವನ 65ನೇ ವಯಸ್ಸಿನಲ್ಲಿಯೂ ಹಿರೋ ಎಂದು ಪರಿಗಣಿಸಲಾಗುತ್ತದೆ. ಆದರೆ ಇದೇ ದೃಷ್ಟಿಕೊನ ಮಹಿಳೆಯರ ಬಗ್ಗೆ ಇಲ್ಲ. ಅವಳ ತೂಕ ತುಸು ಹೆಚ್ಚಾದ ಕೂಡಲೇ ಚಿಕ್ಕಮ್ಮ,ತಾಯಿ, ಅಜ್ಜಿ ಎಂದು ಪರಿಗಣಿತವಾಗುತ್ತಾಳೆ. ಈ ತಾರತಮ್ಯವೇಕೆ ಎಂದಿದ್ದಾರೆ.
ಮಹಿಳೆಯರು ಈ ತಾರತಮ್ಯಗಳನ್ನು ತಿಳಿದುಕೊಳ್ಳಬೇಕು. ನೀವು ನೀವೇ ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಹೇಗಿರಬೇಕೆಂಬುದನ್ನು ಹೇಳಲು ಅನ್ಯರಿಗೆ ಅವಕಾಶ ಕೊಡಬೇಡಿ. ಸಿನೆಮಾ ಉದ್ಯಮವು ಮಹಿಳೆಯರು ಸಹಜವಾಗಿ ನಿರ್ವಹಿಸುವ ಪಾತ್ರಗಳನ್ನು ನೀಡಬೇಕು. ಈ ಹಿಂದಿನ ನಿಯಮಗಳನ್ನು ಬದಲಿಸುವ ಸಮಯ ಬಂದಿದೆ. ಇದು ಸೌಂದರ್ಯದ ಮಾನದಂಡ, ಸಂಭಾವನೆ ವಿಷಯಗಳಿಗೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಟ್ಟಿದ್ದಾರೆ.