
19.20.21 ಚಿತ್ರದ ಪೋಸ್ಟರ್
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ನಿರ್ದೇಶನದ ನೂತನ ಚಿತ್ರ19.20.21 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್–1978’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಿರ್ದೇಶಕ ಮನ್ಸೋರೆ ಆ್ಯಕ್ಷನ್ ಕಟ್ ಹೇಳಿರುವ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ಚಿತ್ರೀಕರಣ ಪೂರ್ಣಗೊಂಡಿದೆ. ಈ ಬಗ್ಗೆ ಅವರೇ ಸ್ವತಃ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
‘ಸತತ 51 ದಿನಗಳ ಚಿತ್ರೀಕರಣ, ನೂರಕ್ಕೂ ಹೆಚ್ಚು ದೊಡ್ಡ-ಚಿಕ್ಕ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಲಾವಿದರ ದಂಡು, ನಾವು ಹೇಳಬೇಕೆಂದು ಬಯಸಿದ, ಈ ನೆಲದ ಕತೆಯೊಂದನ್ನು ಸಿನಿಮಾ ಮಾಡಬೇಕೆನ್ನುವ ನಮ್ಮಾಸೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ’ ಎಂದು ಫೇಸ್ಬುಕ್ನಲ್ಲಿ ಮನ್ಸೋರೆ ಪೋಸ್ಟ್ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ಸಿನಿಮಾವನ್ನು ಬಿಡುಗಡೆಗೊಳಿಸುತ್ತೇವೆ ಎಂದು ಮನ್ಸೋರೆ ಹೇಳಿದ್ದಾರೆ.
ನೈಜ ಘಟನೆ ಆಧರಿಸಿದ ‘19.20.21’ ಸಿನಿಮಾವನ್ನು, ‘ಆ್ಯಕ್ಟ್-1978’ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕ ದೇವರಾಜ್ ಆರ್. ಅವರು, ತಮ್ಮ ‘ಡಿ ಕ್ರಿಯೇಷನ್ಸ್’ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದು, ಸಿನಿಮಾ ಹಾಗೂ ರಂಗಭೂಮಿಯ ಹಲವು ಕಲಾವಿದರು ನಟಿಸಿದ್ದಾರೆ.