ಇಂದು ಪ್ರತಿಭಾನ್ವಿತ ನಟ ಶಂಕರ್ ನಾಗ್ ಅವರ 68ನೇ ಜನ್ಮದಿನ: ಆತ್ಮೀಯ ಗೆಳೆಯನ ಸ್ಮರಿಸಿದ ರಮೇಶ್ ಭಟ್!

ಬಹುಮುಖ ಪ್ರತಿಭೆ, ಕನ್ನಡ ಚಿತ್ರರಂಗದ ದಂತಕಥೆ ಪ್ರತಿಭಾನ್ವಿತ ನಟ, ನಿರ್ದೇಶಕ, ನಾಟಕಕಾರ ದಿವಂಗತ ಶಂಕರ್ ನಾಗ್ ಅವರ 68ನೇ ಜನ್ಮದಿನ ಇಂದು. ನಟನೆ, ನಿರ್ದೇಶನದ ಜತೆಗೆ ಚಿತ್ರರಂಗದ ಏಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದ ಶಂಕರ್ ನಾಗ್ ಅವರನ್ನು ಕರ್ನಾಟಕದ ಜನತೆ ಈಗಲೂ ಸ್ಮರಿಸುತ್ತದೆ.
ರಮೇಶ್ ಭಟ್ ಹಾಗೂ ಶಂಕರ್ ನಾಗ್
ರಮೇಶ್ ಭಟ್ ಹಾಗೂ ಶಂಕರ್ ನಾಗ್

ಬಹುಮುಖ ಪ್ರತಿಭೆ, ಕನ್ನಡ ಚಿತ್ರರಂಗದ ದಂತಕಥೆ ಪ್ರತಿಭಾನ್ವಿತ ನಟ, ನಿರ್ದೇಶಕ, ನಾಟಕಕಾರ ದಿವಂಗತ ಶಂಕರ್ ನಾಗ್ ಅವರ ಜನ್ಮದಿನ ಇಂದು. ಪ್ರೀತಿಯ ಶಂಕರಣ್ಣ ನಮ್ಮೊಂದಿಗೆ ಇದ್ದಿದ್ದರೆ ಇಂದು ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು, ಆದರೆ ಇಂದು ಅವರು ನಮ್ಮೊಂದಿಗಿಲ್ಲ.

ನಟನೆ, ನಿರ್ದೇಶನದ ಜತೆಗೆ ಚಿತ್ರರಂಗದ ಏಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದ ಶಂಕರ್ ನಾಗ್ ಅವರನ್ನು ಕರ್ನಾಟಕದ ಜನತೆ ಈಗಲೂ ಸ್ಮರಿಸುತ್ತದೆ. ಕನ್ನಡ ನಾಡಿನ ಜನತೆಗೆ ಶಂಕ್ರಣ್ಣ ಸಾಕಷ್ಟು ವಿಚಾರಗಳಿಂದ ಇಷ್ಟ ಆಗುತ್ತಾರೆ.

ಶಂಕರ್ ನಾಗ್ ಜನಿಸಿದ್ದು 1954ರಲ್ಲಿ. ಉತ್ತರ ಕನ್ನಡದ ಹೊನ್ನಾವರದಲ್ಲಿ ಅವರ ಜನನವಾಯಿತು. ಮರಾಠಿ ನಾಟಕಗಳಿಂದ ಶಂಕರ್​ನಾಗ್​ ಪ್ರಭಾವಕ್ಕೆ ಒಳಗಾಗಿದ್ದರು. ‘ಒಂದಾನೊಂದು ಕಾಲದಲ್ಲಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಮುಂದೆ ಹಲವು ಪ್ರಯೋಗಗಳನ್ನು ಮಾಡಿದರು. ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಶಂಕರ್ ನಾಗ್ ಅವರು ನಿರ್ದೇಶನ ಹಾಗೂ ನಿರ್ಮಾಣದತ್ತ ವಾಲಿದರು. ‘ಮಿಂಚಿನ ಓಟ’ ಸಿನಿಮಾವನ್ನು ಅವರು ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ ಮೊದಲಾದ ಚಿತ್ರಗಳನ್ನು ಅವರು ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದರು.

‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಅಂಡರ್​​ವಾಟರ್ ಶೂಟ್ ಮಾಡಲಾಗಿತ್ತು. ಇದಕ್ಕಾಗಿ ಶಂಕರ್ ನಾಗ್ ಸಾಕಷ್ಟು ಶ್ರಮ ಹಾಕಿದ್ದರು. 1990ರ ಸಮಯದಲ್ಲಿ ವಿದೇಶಿ ಸಿನಿಮಾಗಳನ್ನು ನೋಡಿ ಅಲ್ಲಿನ ತಂತ್ರಜ್ಞಾನವನ್ನು ಕನ್ನಡ ಸಿನಿಮಾಗೆ ತರಬೇಕು ಎಂದು ಶಂಕರ್​ನಾಗ್​ ಆಲೋಚಿಸಿದ್ದರು. ಇಟಲಿಗೆ ತೆರಳಿ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ನಂತರ ಇಂಗ್ಲೆಂಡ್​ಗೆ ತೆರಳಿ ಟೆಕ್ನಾಲಜಿ ಬಗ್ಗೆ ಅಲ್ಲಿನ ಕಂಪನಿಗಳ ಜತೆ ಮಾತನಾಡಿದ್ದರು. ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಅವರು ಆಗಲೇ ಆಲೋಚಿಸಿದ್ದರು. ಶಂಕರ್ ನಾಗ್ ಅವರು ನಮ್ಮ ಮೆಟ್ರೋವನ್ನು ಕರ್ನಾಟಕಕ್ಕೆ ತರಬೇಕು ಎಂದು ಆಗಲೇ ಆಲೋಚಿಸಿದ್ದರು.

‘ಮಾಲ್ಗುಡಿ ಡೇಸ್​’ ಹೆಸರಿನ ಟಿವಿ ಸೀರೀಸ್​ ಅನ್ನು ಶಂಕರ್ ನಾಗ್ ನಿರ್ದೇಶನ ಮಾಡಿದರು. ನಾಲ್ಕು ಸೀಸನ್​ಗಳ ಪೈಕಿ ಮೊದಲ ಮೂರು ಸೀಸನ್​​ಗೆ ಅವರೇ ನೇತೃತ್ವ ವಹಿಸಿದ್ದರು. ಈ ಸೀರಿಸ್ ಸೂಪರ್ ಹಿಟ್ ಆಯಿತು. ಇದು ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಹಾಗೂ ಕೊನೆಯ ಧಾರಾವಾಹಿಯಾಗಿತ್ತು.

ಶಂಕರ್ ನಾಗ್ ಅವರು ಜನ್ಮದಿನವಾದ ಇಂದು ಮಾಲ್ಗುಡಿ ಡೇಸ್ ಸೇರಿದಂತೆ ಮಿಂಚಿನ ಓಟ, ಗೀತಾ ಮುಂತಾದ ಬಹು ಸಿನಿಮಾಗಳಲ್ಲಿ ಅವರೊಂದಿಗೆ ಕೆಲಸ ಮಾಡಿ 13 ವರ್ಷಗಳ ಕಾಲ ಸ್ನೇಹ ಬೆಳೆಸಿಕೊಂಡಿದ್ದ ನಟ ರಮೇಶ್ ಭಟ್ ಅವರು, ತಮ್ಮ ಆತ್ಮೀಯ ಸ್ನೇಹಿತನನ್ನು ಸ್ಮರಿಸಿದ್ದಾರೆ. ಮತ್ತು ಜೊತೆಗಿದ್ದ ಒಡನಾಟದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಶಂಕರ್ ನಾಗ್ ಬಗ್ಗೆ ಹೇಳಬೇಕಾದರೆ ವರ್ಕೋಹಾಲಿಕ್ ಹಾಗೂ ಪ್ಯಾಷನೇಟ್ ಇದ್ದ ವ್ಯಕ್ತಿಯಾಗಿದ್ದರು. ನಾವಿಬ್ಬರು 1977-1978ರಲ್ಲಿ ಸ್ನೇಹಿತರಾದೆವು. ರಂಗಭೂಮಿಗೆ ಸೇರಲು ಬೆಂಗಳೂರಿಗೆ ಬಂದಾಗಿನಿಂದಲೂ ಅವರ ಸ್ನೇಹಿತನಾಗಿದ್ದು ನನ್ನ ಸೌಭಾಗ್ಯ. ಶಂಕರ್ ನಾಗ್ ಎಂದಿಗೂ ತನ್ನ ಜನ್ಮದಿನ, ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಅವರ ಗಮನವೆಲ್ಲಾ ಯಾವಾಗಲೂ ಕೆಲಸದ ಮೇಲೆಯೇ ಇರುತ್ತಿತ್ತು. ಅದನ್ನು ಅವರು ಇಷ್ಟ ಪಡುತ್ತಿದ್ದರು. ಊಟವನ್ನೂ ಕೂಡ 10 ನಿಮಿಷದಲ್ಲಿ ಮಾಡಿ ಮುಗಿಸಿ ಮತ್ತೆ ಕೆಲಸ ಪ್ರಾರಂಭಿಸುತ್ತಿದ್ದರು. ಶೂಟಿಂಗ್ ಬಿಡುವಿನ ಸಮಯದಲ್ಲೂ ಕೆಲಸದ ಬಗ್ಗೆಯೇ ಚರ್ಚಿಸುತ್ತಿದ್ದರು ಎಂದು ಶಂಕರ್ ನಾಗ್ ಕುರಿತು ರಮೇಶ್ ಭಟ್ ಅವರು ಹೇಳಿದ್ದಾರೆ.

ಶಂಕರ್ ನಾಗ್ ಅತ್ಯುತ್ತಮ ಕಥೆಗಾರನಾಗಿದ್ದ. ಕಥೆಯ ಯಾವ ಭಾಗಕ್ಕೆ ಪ್ರಾಮುಖ್ಯತೆ ನೀಡಬೇಕೆಂಬುದು ಅವರಿಗೆ ತಿಳಿದಿರುತ್ತಿತ್ತು. ಮಾಸ್ ಮತ್ತು ಕ್ಲಾಸ್ ಎರಡೂ ಚಿತ್ರಗಳಲ್ಲೂ ಸಮಾನವಾಗಿ ನಟಿಸುತ್ತಿದ್ದರು. ಆಟೋರಾಜ ಸಂಪೂರ್ಣ ಕ್ಲಾಸ್ ಚಿತ್ರವಾಗಿದ್ದು, ಇಂದಿಗೂ ಸಾಕಷ್ಟು ಆಟೋ ಚಾಲಕರು ಶಂಕರ್ ನಾಗ್ ಅವರ ಭಾವಚಿತ್ರವನ್ನು ತಮ್ಮ ಆಟೋಗಳ ಮೇಲೆ ಹಾಕಿಗೊಳ್ಳುತ್ತಾರೆ. ಶಂಕರ್ ನಾಗ್ ನಿಧನಹೊಂದಿ 32 ವರ್ಷಗಳಾದರೂ ಇಂದಿಗೂ ಅವರ ನೆನಪುಗಳು ಮಾತ್ರ ಜೀವಂತವಾಗಿವೆ. ಈಗಲೂ ಅವರ ಎಲ್ಲಾ ಚಿತ್ರಗಳು ಹೊಸದಾಗಿಯೇ ಎನಿಸುತ್ತವೆ. ಇಂದಿಗೂ ಆ ಚಿತ್ರಗಳು ಪ್ರಸ್ತುತವಾಗಿಯೇ ಇವೆ.

ಇನ್ನು ಓದಿನಲ್ಲೂ ಶಂಕರ್ ನಾಗ್ ಹೊಟ್ಟೆಬಾಕನಾಗಿದ್ದ. “ಆ ದಿನಗಳಲ್ಲಿ ನಮಗೆ ಭಾನುವಾರ ಮಾತ್ರ ರಜೆ ಇರುತ್ತಿತ್ತು ಶನಿವಾರ ಮಧ್ಯರಾತ್ರಿಯವರೆಗೂ ಕೆಲಸ ಮಾಡುತ್ತಿದ್ದ. ಕೆಲಸದ ವೇಳಾಪಟ್ಟಿಯ ಹೊರತಾಗಿಯೂ, 800 ಪುಟಗಳ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸುತ್ತಿದ್ದ ಎಂದು ಶಂಕರ್ ನಾಗ್ ಅವರನ್ನು ಭಟ್ ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com