ಹಸೆಮಣೆ ಏರಲು ಸಜ್ಜಾದ ಅಭಿಷೇಕ್: ಡಿಸೆಂಬರ್ 2ನೇ ವಾರದಲ್ಲಿ ನಿಶ್ಚಿತಾರ್ಥ; ಪ್ರಸಾದ್ ಬಿದ್ದಪ್ಪ ಪುತ್ರಿ 'ಅಂಬಿ' ಸೊಸೆ?
ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
Published: 29th November 2022 01:42 PM | Last Updated: 29th November 2022 01:52 PM | A+A A-

ಅಭಿಷೇಕ್ ಅಂಬರೀಷ್
ಬೆಂಗಳೂರು: ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್ 2ನೇ ವಾರದಲ್ಲಿ ಅಭಿಷೇಕ್ ಅವರ ನಿಶ್ಚಿತಾರ್ಥ ಖ್ಯಾತ ಮಾಡೆಲ್ ಒಬ್ಬರ ಜೊತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅಭಿಷೇಕ್ ಅಂಬರೀಷ್ ಅವರ ಮದುವೆ ಅದಾಗಲೇ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಪುತ್ರಿ, ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಭಿಷೇಕ್ ಅಂಬರೀಶ್ ಕೈ ಹಿಡಿಯುತ್ತಿರುವ ಹುಡುಗಿ ಅವಿವಾ ಬಿದ್ದಪ್ಪ ಖ್ಯಾತ ಮಾಡೆಲ್ ಎಂದು ಹೇಳಲಾಗುತ್ತಿದೆ. ಆದರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬದ ಸದಸ್ಯರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥದ ಸಿದ್ಧತೆಗಳು ನಡೆಯುತ್ತಿದ್ದು, ಮದುವೆ ದಿನಾಂಕ ಸೇರಿದಂತೆ ಹಲವು ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.
ಕೆಲ ದಿನಗಳ ಹಿಂದೆ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಅಂಬರೀಷ್ ಪ್ರತಿ ಸಲ ನನ್ನ ಮದುವೆ, ನಿಶ್ಚಿತಾರ್ಥದ ಬಗ್ಗೆ ಈ ರೀತಿ ನ್ಯೂಸ್ ಕೇಳುತ್ತಿದ್ದೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವಾಗ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡ್ತಿದ್ರೆ ಮುಂದೆ ನನಗೆ ಯಾರೂ ಹುಡುಗಿ ಕೊಡಲ್ಲ" ಎಂದು ನಗೆಚಟಾಕಿ ಹಾರಿಸಿದ್ದರು.