ಭಾರತದಿಂದ ಆಸ್ಕರ್‌ ಗೆ ನಾಮನಿರ್ದೇಶನವಾಗಿದ್ದ 'ಛೆಲ್ಲೋ ಶೋ' ಚಿತ್ರದ ಬಾಲನಟ ಕ್ಯಾನ್ಸರ್‌ ಗೆ ಬಲಿ!

ಭಾರತದಿಂದ 95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ನಾಮನಿರ್ದೇಶನವಾಗಿದ್ದ ಗುಜರಾತಿ 'ಛೆಲ್ಲೋ ಶೋ' ಚಿತ್ರದ ಬಾಲನಟ ಕ್ಯಾನ್ಸರ್‌ ಗೆ ಬಲಿಯಾಗಿದ್ದಾನೆ.
ಛೆಲ್ಲೋ ಶೋ ಚಿತ್ರದ ಬಾಲನಟ ಕ್ಯಾನ್ಸರ್‌ ಗೆ ಬಲಿ
ಛೆಲ್ಲೋ ಶೋ ಚಿತ್ರದ ಬಾಲನಟ ಕ್ಯಾನ್ಸರ್‌ ಗೆ ಬಲಿ

ಅಹ್ಮದಾಬಾದ್: ಭಾರತದಿಂದ 95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ನಾಮನಿರ್ದೇಶನವಾಗಿದ್ದ ಗುಜರಾತಿ 'ಛೆಲ್ಲೋ ಶೋ' ಚಿತ್ರದ ಬಾಲನಟ ಕ್ಯಾನ್ಸರ್‌ ಗೆ ಬಲಿಯಾಗಿದ್ದಾನೆ.

ಹೌದು.. 95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ಪ್ರವೇಶ ಪಡೆದಿರುವ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿದ್ದ ರಾಹುಲ್‌ ಕೋಲಿ ಕ್ಯಾನ್ಸರ್‌ ನಿಂದ ನಿಧನರಾಗಿದ್ದಾರೆ. ಈ ಕುರಿತು ಗುಜರಾತ್ ಮಾಧ್ಯಮಗಳು ವರದಿ ಮಾಡಿದ್ದು, ಉದಯೋನ್ಮುಖ ಬಾಲನಟನ ಸಾವಿಗೆ ಗುಜರಾತ್ ಸಿನಿರಂಗ ಕಂಬನಿ ಮಿಡಿದಿದೆ.

ಗುಜರಾತ್ ಮಾಧ್ಯಮಗಳ ವರದಿ ಪ್ರಕಾರ, ಮೊದಲಿಗೆ ರಾಹುಲ್‌ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ರಾಹುಲ್‌ ತಂದೆ ಮಾಧ್ಯಮದ ಜೊತೆ ಮಾತಾನಾಡಿ, ಅ.2 ರಂದು (ಭಾನುವಾರ) ರಾಹುಲ್‌ ತಿಂಡಿ ಮುಗಿಸಿದ ಮೇಲೆ, ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಮೂರು ಬಾರಿ ರಕ್ತದ ವಾಂತಿ ಮಾಡಿದ್ದಾನೆ. ಆ ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ನಮ್ಮನ್ನು ಅಗಲಿದ್ದಾನೆ. ನಮ್ಮ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅಂತೆಯೇ ರಾಹುಲ್ ನಟಿಸಿರುವ ʼಛೆಲ್ಲೋ ಶೋʼ ಅ.14 ರಂದು ರಿಲೀಸ್‌ ಆಗಲಿದೆ. ಅದನ್ನು ನಾವೆಲ್ಲಾ ಒಟ್ಟಾಗಿ ನೋಡಿದ ಬಳಿಕ, ಆತನ ಅಂತಿಮ ಕ್ರಿಯಾವಿಧಾನವನ್ನು ಮಾಡುತ್ತೇವೆಂದು ರಾಹುಲ್ ತಂದೆ ಹೇಳಿದ್ದಾರೆ.

ಹಣಕ್ಕಾಗಿ ಸಾಕಷ್ಟು ಪರದಾಡಿದ್ದೆ
ಮಗನ ಚಿಕಿತ್ಸೆಗಾಗಿ ನನ್ನ ಕೈಯಲ್ಲಿ ಹಣವಿರಲಿಲ್ಲ. ಹಣಕ್ಕಾಗಿ ಸಾಕಷ್ಟು ಪರದಾಡಿದೆ. ಎಲ್ಲೂ ಚಿಕಿತ್ಸೆಗೆ ಬೇಕಾದಷ್ಟು ಹಣ ಸಿಗಲಿಲ್ಲ. ಹೀಗಾಗಿ ನನ್ನ ಆಟೋವನ್ನು ಮಾರಬೇಕಾಯಿತು. ಆದರೆ ಈ ವಿಚಾರ ಚಿತ್ರ ತಂಡದವರಿಗೆ ಗೊತ್ತಾಗಿ ಆಟೋವನ್ನು ಹಿಂದಕ್ಕೆ ಪಡೆದು ನನಗೆ ನೀಡಿದ್ದಾರೆ ಎಂದು ರಾಹುಲ್ ತಂದೆ ಹೇಳಿದ್ದಾರೆ. 

ಇದೇ ವೇಳೆ ತಮ್ಮ ಪುತ್ರ ಮಾತುಗಳನ್ನು ನೆನಪಿಸಿಕೊಂಡ ಅವರ, 'ಸಿನಿಮಾ ಬಿಡುಗಡೆ ಆದ ಮೇಲೆ ನಮ್ಮ ಜೀವನದ ಬದಲಾಗುತ್ತದೆ ಎಂದು ರಾಹುಲ್ ಹೇಳುತ್ತಿದ್ದ. ಆದರೆ ಅದಕ್ಕೂ ಮುನ್ನ ಆತ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದರು.

ಇನ್ನು ಛೆಲ್ಲೋ ಶೋ ಚಿತ್ರದ ನಿರ್ದೇಶಕ ಪಾನ್‌ ನಳಿನ್‌ ಅವರು ಮಾತಾನಾಡಿ, ನಾವು ರಾಹುಲ್‌ ಕುಟುಂಬದ ಜೊತೆ ವಾರಗಟ್ಟಲೇ ಇದ್ದೆವು. ಆದರೆ ಅವನನ್ನು ನಾವು ಉಳಿಸಿಕೊಳ್ಳಲಾಗಲಿಲ್ಲ ಎಂದು ಭಾವುಕರಾದರು.

'ಛೆಲ್ಲೋ ಶೋ'
9 ವರ್ಷದ ಬಾಲಕನೊಬ್ಬನಿಗೆ ಸಿನಿಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು  'ಛೆಲ್ಲೋ ಶೋ' ಚಿತ್ರ ವಿವರಿಸುತ್ತದೆ. ಈ ಸಿನಿಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಿತ್ತು. ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಸಿನಿಮಾ ಸ್ಪೇನ್‌ನ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಸ್ಪೈಕ್‌ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೇ ಅ.14ರಂದು “ಲಾಸ್ಟ್‌ ಫಿಲಂ ಶೋ'(ಇಂಗ್ಲಿಷ್‌) ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಇದೇ ಚಿತ್ರ ಭಾರತದಿಂದ ಆಸ್ಕರ್ ಪ್ರಶಸ್ತಿಗೂ ನಾಮ ನಿರ್ದೇಶನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com