ಭೋಜ್‌ಪುರಿ ನಟನ ವಿರುದ್ಧ ಮಾನಸಿಕ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ: ಪತ್ನಿ ಜ್ಯೋತಿ ಸಿಂಗ್ ದೂರು

ಭೋಜ್‌ಪುರಿ ಸಿನಿಮಾ ನಟ ಪವನ್ ಸಿಂಗ್ ವಿರುದ್ಧ ಆತನ ಪತ್ನಿ ಜ್ಯೋತಿ ಸಿಂಗ್ ಅವರು ಮಾನಸಿಕ ಕಿರುಕುಳ, ಗರ್ಭಪಾತಕ್ಕೆ ಒತ್ತಾಯಿಸಿದ್ದಲ್ಲದೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪವನ್ ಸಿಂಗ್-ಜ್ಯೋತಿ
ಪವನ್ ಸಿಂಗ್-ಜ್ಯೋತಿ

ಬಲ್ಲಿಯಾ: ಭೋಜ್‌ಪುರಿ ಸಿನಿಮಾ ನಟ ಪವನ್ ಸಿಂಗ್ ವಿರುದ್ಧ ಆತನ ಪತ್ನಿ ಜ್ಯೋತಿ ಸಿಂಗ್ ಅವರು ಮಾನಸಿಕ ಕಿರುಕುಳ, ಗರ್ಭಪಾತಕ್ಕೆ ಒತ್ತಾಯಿಸಿದ್ದಲ್ಲದೆ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜ್ಯೋತಿ ಸಿಂಗ್ ಅವರಿಂದ ದೂರನ್ನು ಸ್ವೀಕರಿಸಿದ್ದು ಈ ವಿಷಯವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಬಲ್ಲಿಯಾ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬಲ್ಲಿಯಾದ ಮಿದ್ದಿ ಪ್ರದೇಶದ ನಿವಾಸಿ ಜ್ಯೋತಿ ಸಿಂಗ್ ಅವರು ತಮ್ಮ ದೂರಿನಲ್ಲಿ ನಟ ಪವನ್ ಸಿಂಗ್ ರನ್ನು 2018ರ  ಮಾರ್ಚ್ 6ರಂದು ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪವನ್ ಸಿಂಗ್ ಅವರ ತಾಯಿ ಪ್ರತಿಮಾ ದೇವಿ ಮತ್ತು ಸಹೋದರಿ ತನ್ನ ರೂಪದ ಬಗ್ಗೆ ಗೇಲಿ ಮಾಡಲು ಪ್ರಾರಂಭಿಸಿದರು. ಅಲ್ಲದೆ ಮಾನಸಿಕ ಕಿರುಕುಳವನ್ನು ಪ್ರಾರಂಭಿಸಿದರು ಎಂದು ದೂಷಿಸಿದ್ದಾರೆ. 

ದೂರಿನಲ್ಲಿ ಮಾಡಿರುವ ಆರೋಪಗಳೇನು?
ಅತ್ತೆ ಮಾವನಿಂದ ಸುಮಾರು 50 ಲಕ್ಷ ರೂಪಾಯಿಗಳನ್ನು ಕಸಿದುಕೊಂಡು ದಿನನಿತ್ಯ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಜ್ಯೋತಿ ದೂರಿನಲ್ಲಿ ಆರೋಪಿಸಿದ್ದಾರೆ. ಇದಲ್ಲದೇ ಆಕೆಗೆ ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗ ಆಕೆಗೆ ಮದ್ದು ನೀಡಿದ್ದು, ಗರ್ಭಪಾತಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಕುಡಿದ ಅಮಲಿನಲ್ಲಿ ಆಕೆಯನ್ನು ನಿಂದಿಸಿ, ಹೊಡೆದು ಆತ್ಮಹತ್ಯೆ ಮಾಡಿಕೊಳ್ಳಲು ಪತಿ ಕುಮ್ಮಕ್ಕು ನೀಡುತ್ತಾನೆ ಎಂದು ದೂರಿದ್ದಾರೆ.

ವರದಕ್ಷಿಣೆಗಾಗಿ ಬೇಡಿಕೆ
ಮದುವೆಯ ನಂತರ ಪವನ್ ಸಿಂಗ್ ತನಗೆ ವಿವಿಧ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದನಲ್ಲದೆ, ಕುಟುಂಬ ಸದಸ್ಯರಿಂದ ಮರ್ಸಿಡಿಸ್ ಕಾರಿಗೆ ಬೇಡಿಕೆಯಿಟ್ಟಿದ್ದಾನೆ ಎಂದು ಜ್ಯೋತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ತನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳಿಗೆ ತನ್ನ ಬಳಿ ಪುರಾವೆಗಳಿವೆ ಮತ್ತು ಶೀಘ್ರದಲ್ಲೇ ಅವುಗಳನ್ನು ಬಹಿರಂಗಗೊಳಿಸುತ್ತೇನೆ ಎಂದು ಅವರು ಹೇಳಿದರು.
 
ಈ ಪ್ರಕರಣ ಸಂಬಂಧ ಪವನ್ ಸಿಂಗ್ ಅವರಿಗೆ ಕೌಟುಂಬಿಕ ನ್ಯಾಯಾಲಯ ನೋಟಿಸ್ ಕಳುಹಿಸಿದೆ. ಜ್ಯೋತಿ ಏಪ್ರಿಲ್ 22ರಂದು ಮುಖ್ಯ ನ್ಯಾಯಮೂರ್ತಿ ಕೌಟುಂಬಿಕ ನ್ಯಾಯಾಲಯಕ್ಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆ ಸಮಯದಲ್ಲಿ ಪವನ್ ಮದುವೆಯಾದ ಅರ್ಧ ಗಂಟೆಯ ನಂತರ, ಚಿತ್ರದ ಚಿತ್ರೀಕರಣದ ನೆಪದಲ್ಲಿ ಹೊರಟು ಹೋಗಿದ್ದರು ಎಂದು ಆರೋಪಿಸಿದ್ದರು. ಬಳಿಕ ಆಕೆಯನ್ನು ಅತ್ತೆಯ ಮನೆಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋದ ಬಳಿಕ ಮನೆಯವರ ಜತೆ ಸೇರಿ ಕಿರುಕುಳ ನೀಡಲಾರಂಭಿಸಿದ್ದಾರೆ. ನ್ಯಾಯಾಲಯ ಪವನ್ ಸಿಂಗ್ ಅವರಿಗೆ ನೋಟಿಸ್ ಕಳುಹಿಸಿದ್ದು, ನವೆಂಬರ್ 5 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

2014ರಲ್ಲಿ ಪವನ್ ಸಿಂಗ್ ತನ್ನ ಮೊದಲ ಪತ್ನಿ ನೀಲಂ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಆರು ತಿಂಗಳ ನಂತರ ನೀಲಂ ಆತ್ಮಹತ್ಯೆ ಮಾಡಿಕೊಂಡರು. ಆ ನಂತರ ಪವನ್ ಸಿಂಗ್ ಪತ್ನಿಯನ್ನು ಕೊಂದ ಆರೋಪ ಕೇಳಿಬಂದಿತ್ತು. ನಂತರ ಅವರು ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಪವನ್ ಅವರು ಜ್ಯೋತಿಯನ್ನು ಮದುವೆಯಾದರು. ನಂತರ ಅಕ್ಷರಾ ಪವನ್ ತನ್ನ ಮೇಲೆ ಹಲ್ಲೆ ನಡೆಸಿ ವೃತ್ತಿ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com