ಬಾಹುಬಲಿ ನಟ ಪ್ರಭಾಸ್ ಚಿಕ್ಕಪ್ಪ, ಟಾಲಿವುಡ್​ನ​ ರೆಬೆಲ್​ಸ್ಟಾರ್ ಕೃಷ್ಣಂರಾಜು ನಿಧನ

ಟಾಲಿವುಡ್​ನ​ ರೆಬೆಲ್​ಸ್ಟಾರ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೃಷ್ಣಂರಾಜು ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ನಟ ಕೃಷ್ಣಂರಾಜು ನಿಧನ
ನಟ ಕೃಷ್ಣಂರಾಜು ನಿಧನ

ಹೈದರಾಬಾದ್: ಟಾಲಿವುಡ್​ನ​ ರೆಬೆಲ್​ಸ್ಟಾರ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೃಷ್ಣಂರಾಜು ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು (83 ವರ್ಷ) (Krishnam Raju) ಭಾನುವಾರ ನಸುಕಿನ 3:25ಕ್ಕೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದು ಈ ಬಗ್ಗೆ ಕುಟುಂಬದ ಮೂಲಗಳು ಮಾಹಿತಿ ನೀಡಿವೆ. 

ತೆಲುಗು ಚಿತ್ರರಂಗದ ದಿಗ್ಗಜ ನಟ ಕೃಷ್ಣಂರಾಜು ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 83 ವರ್ಷದ ನಟ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ ಮೂಲಕ ತಮ್ಮ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.

ಕೃಷ್ಣಂರಾಜು ಹಿನ್ನಲೆ
ನಟ, ಪತ್ರಕರ್ತ, ಛಾಯಾಗ್ರಾಹಕರಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರು. ಪತ್ನಿ, ಮೂವರು ಪುತ್ರಿಯರು, ಅಪಾರ ಸ್ನೇಹಿತರು ಹಾಗೂ ಬಂಧುಗಳನ್ನು ಅವರು ಅಗಲಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ (Actor Prabhas) ಸಹ ಕೃಷ್ಣಂರಾಜು ಅವರ ಹತ್ತಿರದ ಸಂಬಂಧಿ. ಕೃಷ್ಣಂರಾಜು ಅವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ಗ್ರಾಹಕ ಸೇವೆಗಳು, ಆಹಾರ ಮತ್ತು ಪಡಿತರ ವಿತರಣೆ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಗಮನಾರ್ಹವಾಗಿ, ಅವರು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ನಟರಾಗಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ 1940ರಲ್ಲಿ ಕೃಷ್ಣಂರಾಜು ಜನಿಸಿದರು. 1966ರಲ್ಲಿ ‘ಚಿಲಕ ಗೋರಿಂಕಾ’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. ನಂತರ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದರು. ನಂತರದ ದಿನಗಳಲ್ಲಿ ನಾಯಕನಟನಾಗಿ ಅಪಾರ ಜನಪ್ರಿಯ ಪಡೆದುಕೊಂಡರು. ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ, ಸಿಡುಕು ಸ್ವಭಾವದ ವ್ಯಕ್ತಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣಂರಾಜು ಅವರು ಕೊನೆಯ ಚಿತ್ರ ‘ರಾಧೇ ಶ್ಯಾಮ್’. ಇವರ ಹತ್ತಿರದ ಸಂಬಂಧ ಪ್ರಭಾಸ್ ಈ ಚಿತ್ರದ ನಾಯಕರಾಗಿದ್ದರು.

‘ಗೋಪಿಕೃಷ್ಣ ಮೋವೀಸ್’ ಲಾಂಛನದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಹಲವು ಬಾರಿ ಫಿಲ್ಂಫೇರ್ ಮತ್ತು ನಂದಿ ಪ್ರಶಸ್ತಿಗಳು ಕೃಷ್ಣರಾಜು ಅವರಿಗೆ ಸಂದಿವೆ. ತಂಡ್ರ ಪಾಪಾರಾಯುಡು, ಭಕ್ತ ಕಣ್ಣಪ್ಪ, ಬೊಬ್ಬಿಲಿ ಬ್ರಹ್ಮಣ್ಣ, ಬಾವ ಬಾವಮರ್ದಿ, ಧರ್ಮಾತ್ಮುಡು, ಜೀವನ ತರಂಗಾಲು ಕೃಷ್ಣವೇಣಿ ಸೇರಿದಂತೆ ಕೃಷ್ಣಂರಾಜು ಅಭಿನಯದ ಹಲವು ಸಿನಿಮಾಗಳು ಮನೆಮಾತಾಗಿದ್ದವು.

ರೆಬೆಲ್ ಸ್ಟಾರ್ ಕೃಷ್ಣಂರಾಜು 187ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1966 ರಲ್ಲಿ, ಅವರು 'ಚಿಲಕಾ ಗೋರಿಂಕ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.  ‘ಅವೇಕಲ್ಲು’ ಸಿನಿಮಾದಲ್ಲಿ ರೆಬೆಲ್ ವಿಲನ್ ಆಗಿ ತಾನೂ ಸಹ ಸಾಬೀತು ಪಡಿಸಿದ್ದರು. ಕೃಷ್ಣಂರಾಜು ಅವರು 1977 ಮತ್ತು 1984 ರಲ್ಲಿ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1986 ರಲ್ಲಿ ಅವರು 'ತಂಡ್ರಪಾಪರಾಯುಡು' ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com