ಹೈದರಾಬಾದ್: ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಸಾಧನೆ ತೋರಿದ್ದ ಹೆಚ್ಚಿನ ಬಜೆಟ್ ಸಿನಿಮಾ ಲೈಗರ್ ಬಳಿಕ ನಟ ವಿಜಯ್ ದೇವರಕೊಂಡ ಮತ್ತೆ ಉತ್ತಮ ಚಿತ್ರದೊಂದಿಗೆ ಮರಳಲು ಸಜ್ಜಾಗಿದ್ದಾರೆ. ಅವರು ಈ ಹಿಂದೆ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ 'ಗೀತಾ ಗೋವಿಂದಂ' ನಿರ್ದೇಶಕ ಪರಶುರಾಮ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ 'ಗೀತ ಗೋವಿಂದಂ' ಚಿತ್ರವನ್ನು ನಿರ್ಮಿಸಿದ್ದು, ಪರಶುರಾಮ್ ಅವರ ಕಥೆ ಮತ್ತು ನಿರ್ದೇಶನ ಚಿತ್ರಕ್ಕಿತ್ತು. ಈ ಚಿತ್ರ 2018ರ ಆಗಸ್ಟ್ 15 ರಂದು ತೆರೆ ಕಂಡಿತ್ತು. ಸಿನಿಪ್ರಿಯರು ರಶ್ಮಿಕಾ ಮತ್ತು ವಿಜಯ್ ಮೋಡಿಗೆ ಮರುಳಾಗಿದ್ದರು ಮತ್ತು 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ 132 ಕೋಟಿ ರೂಪಾಯಿ ಗಳಿಸಿತ್ತು.
'ನಾವು ಮತ್ತೆ ಒಟ್ಟಿಗೆ ಸೇರುತ್ತಿದ್ದೇವೆ' ಎಂದು ವಿಜಯ್ ದೇವರಕೊಂಡ ಅವರು 'ಗೀತಾ ಗೋವಿಂದಂ' ನಿರ್ದೇಶಕರೊಂದಿಗಿನ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಗೀತಾ ಗೋವಿಂದಂ ಚಿತ್ರವು ವಿಜಯ್ ಅವರ ಅತಿದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ.
ಏಸ್ ನಿರ್ಮಾಪಕ 'ದಿಲ್' ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್, 'ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಅವರ ಬ್ಲಾಕ್‌ಬಸ್ಟರ್ ಸಂಯೋಜನೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ' ಎಂದು ಟ್ವೀಟ್ ಮಾಡಿದೆ.
ಪುರಿ ಜಗನ್ನಾಥ್ ನಿರ್ದೇಶನದ ಪ್ಯಾನ್-ಇಂಡಿಯಾ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲು ನಟನಿಗೆ ದೊಡ್ಡ ಹೊಡೆತ ನೀಡಿತ್ತು.
ಪರಶುರಾಮ್ ಅವರೊಂದಿಗಿನ ಅವರ ಮುಂದಿನ ಚಲನಚಿತ್ರದ ಘೋಷಣೆಯು ವಿಜಯ್ ಅವರು ತಮ್ಮ ವೃತ್ತಿಜೀವನದ ಹಾದಿಯನ್ನು ಕಥೆ-ಆಧಾರಿತ ಚಲನಚಿತ್ರಗಳೊಂದಿಗೆ ಮರು ವ್ಯಾಖ್ಯಾನಿಸಲು ಮತ್ತೆ ಸರಿ ಹಾದಿಗೆ ಹಿಂತಿರುಗುತ್ತಿದ್ದಾರೆ ಎಂದು ಸೂಚಿಸುತ್ತದೆ.
Advertisement