ಬೆಂಗಳೂರು: ತೆಲುಗು ನಟ ನಂದಮೂರಿ ತಾರಕರತ್ನ ವಿಧಿವಶ
ತೀವ್ರ ಹೃದಯಾಘಾತಕ್ಕೀಡಾಗಿದ್ದ ತಾರಕರತ್ನ ಅವರಿಗೆ ನಾರಾಯಣ ಹೃದಯಾಲಯದಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
Published: 18th February 2023 10:25 PM | Last Updated: 18th February 2023 11:46 PM | A+A A-

ನಂದಮೂರಿ ತಾರಕರತ್ನ
ಬೆಂಗಳೂರು: ತೆಲುಗಿನ ಖ್ಯಾತ ನಟ ನಂದಮೂರಿ ತಾರಕತ್ನ ವಿಧಿವಶರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತಕ್ಕೀಡಾಗಿದ್ದ ತಾರಕರತ್ನ ಅವರಿಗೆ ನಾರಾಯಣ ಹೃದಯಾಲಯದಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಆಂಧ್ರಪ್ರದೇಶದ ಕುಪ್ಪಂನಲ್ಲಿ ಜನವರಿ 27 ರಂದು ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಟಿಡಿಪಿ ಪಾದಯಾತ್ರೆಯಲ್ಲಿ ಕುಸಿದ ಬಿದ್ದ ತೆಲುಗು ನಟ ನಂದಮೂರಿ ತಾರಕರತ್ನ; ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋ ವೈರಲ್
ನಂದಮೂರಿ ತಾರಕ ರತ್ನ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ನಂದಮೂರಿ ಮೋಹನ ಕೃಷ್ಣ ಅವರ ಪುತ್ರರಾದ ತಾರಕರತ್ನ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮೊಮ್ಮಗ. ಜ್ಯೂನಿಯರ್ ಎನ್ ಟಿಆರ್ ಅವರ ಸೋದರ ಸಂಬಂಧಿಯಾಗಿದ್ದು, ತಾರಕ್, ಯುವರತ್ನ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಮೃತ ನಟ ಪತ್ನಿ ಅಲೇಖ್ಯಾ ರೆಡ್ಡಿ, ಪುತ್ರಿ ನಿಷ್ಕಾ ಅವರನ್ನು ಆಗಲಿದ್ದಾರೆ. ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ನಲ್ಲಿ ಹೈದ್ರಾಬಾದ್ ಗೆ ರವಾನಿಸಲಾಯಿತು.