'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಾತ್ರವೇನು? ನಿರ್ದೇಶಕರು ಏನಂತಾರೆ?

ಇದೇ ಮೊದಲ ಬಾರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಚಿತ್ರದ ನಟನೆಗೆ ಬಣ್ಣ ಹಚ್ಚಲು ಸಜ್ಜಾಗುತ್ತಿರುವ ವೀರೇಂದ್ರ ಹೆಗ್ಗಡೆಯವರ ಚಿತ್ರ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರು ಮೊತ್ತಮೊದಲ ಬಾರಿಗೆ ಬಣ್ಣ ಹಚ್ಚಿದ ಸಿನಿಮಾ ಬರುವ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣಲಿದೆ.
ಪಾತ್ರ ನಿರ್ವಹಣೆಗೆ ಸಜ್ಜಾಗುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿಗಳು
ಪಾತ್ರ ನಿರ್ವಹಣೆಗೆ ಸಜ್ಜಾಗುತ್ತಿರುವ ಧರ್ಮಸ್ಥಳ ಧರ್ಮಾಧಿಕಾರಿಗಳು

ಇದೇ ಮೊದಲ ಬಾರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಚಿತ್ರದ ನಟನೆಗೆ ಬಣ್ಣ ಹಚ್ಚಲು ಸಜ್ಜಾಗುತ್ತಿರುವ ವೀರೇಂದ್ರ ಹೆಗ್ಗಡೆಯವರ ಚಿತ್ರ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರು ಮೊತ್ತಮೊದಲ ಬಾರಿಗೆ ಬಣ್ಣ ಹಚ್ಚಿದ ಸಿನಿಮಾ ಬರುವ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣಲಿದೆ.

ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಸಿನಿಮಾವಾಗಿ ತೆರೆ ಮೇಲೆ ಬರುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದರಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇದರ ನಿರ್ದೇಶಕರು.

ವೀರೇಂದ್ರ ಹೆಗ್ಗಡೆಯವರನ್ನು ಚಿತ್ರಕ್ಕೆ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ, ಶತಮಾನಗಳಿಂದ ಕರಾವಳಿ ಭಾಗದಲ್ಲಿ ಕಂಬಳ ಬಹುಮುಖ್ಯ ಜನಪದ ಕ್ರೀಡೆಯಾಗಿದೆ. 1970ರ ದಶಕದಲ್ಲಿ ಈ ಕಂಬಳ ಕ್ರೀಡೆಯನ್ನು ಆಯೋಜಿಸಲು ಕೆಲವೊಂದು ಸಮಸ್ಯೆ, ತೊಡಕುಗಳಿದ್ದವಂತೆ. ಆಗ ಧರ್ಮಸ್ಥಳ ಧರ್ಮಾಧಿಕಾರಿಗಳು ಅದನ್ನು ಪುನರಾರಂಭಿಸಿದರಂತೆ, ಹೀಗಾಗಿ ಆ ಪಾತ್ರಕ್ಕೆ ಅವರೇ ಸೂಕ್ತರು ಎಂದೆನಿಸಿತು ಎನ್ನುತ್ತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಎರಡು ಕೋಣಗಳ ಮಧ್ಯೆ ಪಂದ್ಯ ನಡೆದು ಟೈ ಆಗುತ್ತದೆ, ಆಗ ಅಲ್ಲಿ ಜಗಳ ವಿವಾದ ಏರ್ಪಡುತ್ತದೆ. ವಿವಾದವನ್ನು ಬಗೆಹರಿಸಲು ಧರ್ಮಾಧಿಕಾರಿಗಳಲ್ಲಿಗೆ ಹೋಗುತ್ತಾರೆ. ಅಲ್ಲಿ ಧರ್ಮಾಧಿಕಾರಿಗಳಾದ ಹೆಗ್ಗಡೆಯವರು ನ್ಯಾಯಸ್ಥಾನದಲ್ಲಿ ನಿಂತು ತೀರ್ಪು ನೀಡುತ್ತಾರೆ. ಅವರ ದೃಶ್ಯ ಕೆಲವೇ ನಿಮಿಷಗಳಾಗಿರುತ್ತದೆಯಾದರೂ ಮಹತ್ವದ್ದಾಗಿದೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ವೃತ್ತಿಪರ ಕಂಬಳ ಪಂದ್ಯ ನಡೆಸುವವರು: ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಕರಾವಳಿ ಭಾಗದ ವೃತ್ತಿಪರ ಕಂಬಳ ಪಂದ್ಯ ನಡೆಸುವವರನ್ನು ಬಳಸಿಕೊಂಡಿದ್ದು ಅವರಲ್ಲಿ ಶ್ರೀನಿವಾಸ ಗೌಡ ಕೂಡ ಇದ್ದಾರೆ. ಅವರು ಕಂಬಳ ರೇಸ್ ನಲ್ಲಿ 100 ಮೀಟರ್ ನ್ನು ಕೇವಲ 9.55 ಸೆಕೆಂಡ್ ಗಳಲ್ಲಿ ಕ್ರಮಿಸಿ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದರು.

ಕಂಬಳ ಕ್ರೀಡೆಗೆ ಶಕ್ತಿ, ಸಾಮರ್ಥ್ಯ, ಕೌಶಲ್ಯ ಬೇಕು, ಸಾಮಾನ್ಯ ನಟರಿಗೆ ಇದನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಲವು ಸ್ಥಳೀಯ ಪ್ರತಿಭೆಗಳು ಚಿತ್ರದಲ್ಲಿದ್ದಾರೆ. ನಿರೂಪಕರು ಕೂಡ ಕರಾವಳಿ ಜಿಲ್ಲೆಯವರು. ಪ್ರಕಾಶ್ ರಾಜ್, ರವಿಶಂಕರ್, ನಟಿ ರಾಧಿಕಾ ಚೇತನ್ ಚಿತ್ರದಲ್ಲಿ ಪಾತ್ರ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಕಂಬಳ ಕ್ರೀಡೆಗೆ ಮನೆಮಾತಾದ ಹೆಸರು. ಸಿನಿಮಾ 2 ಗಂಟೆ 20 ನಿಮಿಷ ಅವಧಿಯನ್ನು ಹೊಂದಿದ್ದು ಕಮರ್ಷಿಯಲ್ ಮತ್ತು ಕಲಾ ಸಿನಿಮಾ ವಿಭಾಗದಲ್ಲಿ ಸಿನಿಮಾವನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ತುಳು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. 

ಕಂಬಳ ಕೇವಲ ಕ್ರೀಡೆ ಮಾತ್ರವಲ್ಲ, ಕರಾವಳಿಗರ ಜನಪದ ಮತ್ತು ಸಂಸ್ಕೃತಿಯಾಗಿದೆ. ರೈತಾಪಿ ವರ್ಗದವರ ಜೀವನ, ಇಲ್ಲಿನ ಮಣ್ಣಿನ ಸೊಗಡಿಗೆ ಹತ್ತಿರವಾಗಿದೆ. ಪ್ರತಿವರ್ಷ ಕರಾವಳಿ ಭಾಗದ ಸುಮಾರು 40 ಕಡೆಗಳಲ್ಲಿ ಕಂಬಳ ಪಂದ್ಯವನ್ನು ಆಯೋಜಿಸಲಾಗುತ್ತದೆ. ಚಿತ್ರದ ಮೂಲಕ ಕಂಬಳವನ್ನು ಜನಪ್ರಿಯಗೊಳಿಸುವುದು ನಮ್ಮ ಆಸೆಯಾಗಿದೆ ಎಂದು ನಿರ್ದೇಶಕರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com