ಸಾಕ್ಷ್ಯಾತ್ಕಾರ ಖ್ಯಾತಿಯ ಹಿರಿಯ ನಟಿ ಜಮುನಾ ಇನ್ನಿಲ್ಲ!

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಜಮುನಾ ಶುಕ್ರವಾರ ಇಹಲೋಕ ತ್ಯಜಿಸಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು.
ಹಿರಿಯ ನಟಿ ಜಮುನಾ
ಹಿರಿಯ ನಟಿ ಜಮುನಾ

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಜಮುನಾ ಶುಕ್ರವಾರ ಇಹಲೋಕ ತ್ಯಜಿಸಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ (Actress Jamuna) ಅವರು ಇಂದು (ಜನವರಿ 27) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ(Hampi) ಜನಿಸಿದ್ದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಫಿಲಂ ಚೇಂಬರ್ ನಲ್ಲಿ ಅಂತಿಮ ದರ್ಶನ
ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಸತ್ಯಭಾಮ ಪಾತ್ರದ ಮೂಲಕ ಜಮುನಾ ಹೆಚ್ಚು ಗುರುತಿಸಲ್ಪಟ್ಟರು. ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ‘ತೆನಾಲಿ ರಾಮಕೃಷ್ಣ’, ‘ಭೂಕೈಲಾಸ’ ಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದರು. ಜಮುನಾ ಅವರು ಚಿಕ್ಕ ವಯಸ್ಸಿನಲ್ಲಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಅವರ ತಾಯಿ ಸಂಗೀತವನ್ನು ಹೇಳಿಕೊಟ್ಟರು. ಇವರ ನಾಟಕಗಳನ್ನು ನೋಡಿ ಸಿನಿಮಾ ಅವಕಾಶಗಳು ಬಂದವು. ಹಿಂದಿ ಚಿತ್ರರಂಗದಲ್ಲೂ ಜಮುನಾ ಬಣ್ಣ ಹಚ್ಚಿದ್ದಾರೆ. ಜಮುನಾ ಅವರು 1965ರಲ್ಲಿ ಪ್ರೊಫೆಸರ್ ಜುಲುರಿ ರಮಣ ರಾವ್ ಅವರನ್ನು ಮದುವೆ ಆಗಿದ್ದರು. 2014ರಲ್ಲಿ ಅವರು ಮೃತಪಟ್ಟರು.

ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆದರು.  1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ  ದೂರ ಉಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com