ಕನ್ನಡ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಲಂಚ: ಸಿಬಿಐನಿಂದ ಸೆನ್ಸಾರ್ ಮಂಡಳಿ ಅಧಿಕಾರಿ ಬಂಧನ

ಕನ್ನಡ ಸಿನಿಮಾವೊಂದಕ್ಕೆ ಪ್ರಮಾಣ ಪತ್ರ ನೀಡಲು ಲಂಚ ಕೇಳುತ್ತಿದ್ದ ಆರೋಪದ ಮೇಲೆ ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಎಂಬುವವರನ್ನು ಬೆಂಗಳೂರಿನ ಮಲ್ಲೇಶ್ವರದ ಎಸ್‌ಆರ್‌ವಿ ಸ್ಟುಡಿಯೋದಲ್ಲಿ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕನ್ನಡ ಸಿನಿಮಾವೊಂದಕ್ಕೆ ಪ್ರಮಾಣ ಪತ್ರ ನೀಡಲು ಲಂಚ ಕೇಳುತ್ತಿದ್ದ ಆರೋಪದ ಮೇಲೆ ಸೆನ್ಸಾರ್ ಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಎಂಬುವವರನ್ನು ಬೆಂಗಳೂರಿನ ಮಲ್ಲೇಶ್ವರದ ಎಸ್‌ಆರ್‌ವಿ ಸ್ಟುಡಿಯೋದಲ್ಲಿ ಬಂಧಿಸಲಾಗಿದೆ.

ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ 'ಅಡವಿ' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಎನ್ನುವವರು ಹನ್ನೆರಡು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿನ ಸಬ್ ಟೈಟಲ್ ವಿಚಾರವಾಗಿ ಕ್ಯಾತೆ ತೆಗೆದಿದ್ದ ಅಧಿಕಾರಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಚಿತ್ರ ನಿರ್ಮಾಪಕ ಟೈಗರ್ ನಾಗ್ ಸಿಬಿಐ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.

ಅಡವಿ ಚಿತ್ರವನ್ನು ನಿರ್ದೇಶಿಸಿದ ಮತ್ತು ನಿರ್ಮಿಸಿದ ಟೈಗರ್ ನಾಗ್ ಅವರು ಸೆನ್ಸಾರ್ ಅಧಿಕಾರಿಯ ಸುಲಿಗೆ ಯತ್ನಗಳು ಮತ್ತು ಕಿರುಕುಳವನ್ನು ಸಿಬಿಐಗೆ ವರದಿ ಮಾಡಿದರು, ಅಗತ್ಯವಿರುವ ಪ್ರಮಾಣೀಕರಣವನ್ನು ಪಡೆಯಲು ಒಂದು ವಾರದ ಹೋರಾಟವನ್ನು ಸಹಿಸಿಕೊಂಡರು. ಪ್ರಶಾಂತ್ ಕುಮಾರ್ ಅವರು ಉದಯೋನ್ಮುಖ ಚಿತ್ರ ನಿರ್ಮಾಪಕರನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮಲ್ಲೇಶ್ವರಂ ಥಿಯೇಟರ್ ವೊಂದರಲ್ಲಿ ಅಧಿಕಾರಿ ಅಡವಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕೆಲ ತಿಂಗಳ ಹಿಂದೆಯಷ್ಟೇ ಕೇಂದ್ರ ಸೆನ್ಸಾರ್ ಮಂಡಳಿಯಲ್ಲಿ ಲಂಚ ತಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ತಮಿಳು ನಟ ವಿಶಾಲ್ ತಮ್ಮ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಮೂವರು ಅಧಿಕಾರಿಗಳು ಲಕ್ಷ ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂದು ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದರು. ಸದ್ಯ ಅಧಿಕಾರಿಗಳ ವಿಚಾರಣೆ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ಕನ್ನಡದಲ್ಲೂ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com