ಬವಣೆ, ಒದ್ದಾಟ, ಭಾವನೆಗಳ ಜೊತೆಗಿನ ಸುಂದರ ಪಯಣವೇ 'ಭಾವಪೂರ್ಣ' ಸಿನಿಮಾ: ನಿರ್ದೇಶಕ ಚೇತನ್ ಮುಂಡಾಡಿ

“ಮದಿಪು’ ಚಿತ್ರದ ಮೂಲಕ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ ಚೇತನ್ ಮುಂಡಾಡಿ ಅವರು, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
ಭಾವಪೂರ್ಣ ಚಿತ್ರದ ಸ್ಟಿಲ್
ಭಾವಪೂರ್ಣ ಚಿತ್ರದ ಸ್ಟಿಲ್

'ಮದಿಪು’ ಚಿತ್ರದ ಮೂಲಕ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ ಚೇತನ್ ಮುಂಡಾಡಿ ಅವರು, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

ಚಿತ್ರಕ್ಕೆ ಭಾವಪೂರ್ಣ ಎಂದು ಶೀರ್ಷಿಕೆ ಇಡಲಾಗಿದ್ದು, ವಿಭಿನ್ನ ಮ್ಯಾನರಿಸಂ ಹಾಗೂ ಉತ್ತಮ ಅಭಿನಯದ ಮೂಲಕ ಕನ್ನಡದ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಛಾಪು‌ ಮೂಡಿಸಿರುವ ನಟ‌ ರಮೇಶ್ ಪಂಡಿತ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರವನ್ನು ಪ್ರಶಾಂಕ್ ಅಂಜನಪ್ಪ ಅವರು ನಿರ್ಮಾಣ ಮಾಡಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಚಿಂತನೆ ನಡೆಸಿದ್ದಾರೆ.

ಇತ್ತೀಚೆಗೆ ಚಿತ್ರದ ಟ್ರೈಲರ್ ನ್ನು ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಚೇತನ್‌ ಅವರು, ಭಾವಪೂರ್ಣ ಸಿನಿಮಾ ಮಧ್ಯ ವಯಸ್ಸು ಮೀರಿದ ಓರ್ವ ಮುಗ್ಧನ ಭಾವ ತೀರ ಯಾನ. ಸಾವಿನಾಚೆಗೂ ತಾನು ಈ ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟು ಹೋಗುವ ಪ್ರಯತ್ನ ಎಂದು ಕೊಂಡು ಪ್ರತಿ ಹೆಜ್ಜೆಯಲ್ಲೂ ಪಡುವ ಬವಣೆ, ಆಗುವ ಒದ್ದಾಟ, ಅವಘಡ ಮತ್ತು ಮನತಟ್ಟುವ ಮುಗ್ಧ ತಮಾಷೆಗಳು. ಇನ್ನೋರ್ವ ಯುವಕನದ್ದು, ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್​ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ ಪ್ರೀತಿಯ ಪಯಣ. ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು. ಇವರು ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ? ಎನ್ನುವ ಕಥೆಯನ್ನೊಳಗೊಂಡಿರುವುದೇ ಭಾವಪೂರ್ಣ ಎಂದು ಹೇಳಿದರು.

ಭಾವಪೂರ್ಣ ಚಿತ್ರದಲ್ಲಿ ರಮೇಶ್ ಪಂಡಿತ್ ಅಲ್ಲದೇ ಶೈಲಶ್ರೀ ಧರ್ಮೇಂದ್ರ ಅರಸ್, ಅಥರ್ವ ಪ್ರಕಾಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಅವರ ಛಾಯಾಗ್ರಾಹಣವಿದ್ದು, ಅಕ್ಷಯ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಡಿ ಕೀರ್ತಿರಾಜ್ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com