ಸಿನಿಮಾ ಕ್ಷೇತ್ರದಲ್ಲೂ ಇದೆ ಭ್ರಷ್ಟಾಚಾರ, ಮಾರ್ಕ್ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ದರು; ನಟ ವಿಶಾಲ್ ಗಂಭೀರ ಆರೋಪ
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸರ್ಟಿಫಿಕೇಷನ್ ಪಡೆಯುವ ಸಲುವಾಗಿ ನಾನು 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದು ಮಾರ್ಕ್ ಆಂಟೋನಿ ನಟ ವಿಶಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ.
Published: 29th September 2023 09:42 AM | Last Updated: 29th September 2023 01:03 PM | A+A A-

ನಟ ವಿಶಾಲ್.
ಚೆನ್ನೈ: ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್‌ನಿಂದ ಸರ್ಟಿಫಿಕೇಷನ್ ಪಡೆಯುವ ಸಲುವಾಗಿ ನಾನು 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದು ಮಾರ್ಕ್ ಆಂಟೋನಿ ನಟ ವಿಶಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಿಶಾಲ್ ನಟನೆಯ ‘ಮಾರ್ಕ್ ಆಂಟೊನಿ’ ಸಿನಿಮಾ ಇತ್ತೀಚೆಗಷ್ಟೆ ತಮಿಳುನಾಡಿನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಸಿನಿಮಾವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಯಶಸ್ಸಿನಿಂದ ಸ್ಪೂರ್ತಿಹೊಂದಿ, ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.
ಇದೇ ಕಾರಣಕ್ಕೆ ಪ್ರಮಾಣ ಪತ್ರಕ್ಕಾಗಿ ಮುಂಬೈನ ಸಿಬಿಎಫ್‌ಸಿ ಕಚೇರಿಗೆ ಕಳುಹಿಸಿದ್ದು, ಈ ವೇಳೆ ಅಲ್ಲಿನ ಅಧಿಕಾರಿಗಳು ಲಂಚ ಪಡೆದಿದ್ದಾರೆಂದು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: 'ಮಾರ್ಕ್ ಆಂಟನಿ' ಸಿನಿಮಾ ಸೆಟ್‌ನಲ್ಲಿ ಅವಘಡ; ದೊಡ್ಡ ಅನಾಹುತದಿಂದ ತಮಿಳು ನಟ ವಿಶಾಲ್ ಪಾರು
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿರುವ ನಟ ವಿಶಾಲ್, ‘ನಾವು ‘ಮಾರ್ಕ್ ಆಂಟೊನಿ’ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆಗೆ ಯತ್ನಿಸಿದೆವು. ಕೆಲವು ತಾಂತ್ರಿಕ ಕಾರಣಗಳಿಗಾಗಿ ತುಸು ತಡವಾಗಿ ಅಂದರೆ ಸೋಮವಾರ ನಾವು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದೆವು. ತುಸು ಬೇಗನೆ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದೆವು. ಅದಕ್ಕೆ ಬದಲಾಗಿ ಅಲ್ಲಿನ ಅಧಿಕಾರಿಗಳು ನಮ್ಮ ಬಳಿ 6.50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟರು” ಎಂದು ಆರೋಪಿಸಿದ್ದಾರೆ.
#WATCH | Tamil actor Vishal says, "...This is about the scam that has transpired in CBFC Mumbai in relation to my film (Mark Antony)...I would like to address this to Maharashtra CM Eknath Shinde and PM Modi. We applied online for film certification but we were taken aback by… pic.twitter.com/8RU7x54qNK
— ANI (@ANI) September 28, 2023
”ಒಂದೇ ದಿನದಲ್ಲಿ ಸಿನಿಮಾದ ಪ್ರಮಾಣ ಪತ್ರ ನೀಡಬೇಕೆಂದರೆ 6.50 ಲಕ್ಷ ಹಣ ನೀಡಬೇಕು ಎಂದು ಸಿಬಿಎಫ್‌ಸಿ ಅಧಿಕಾರಿ ಮೇನಕ ಎಂಬುವರು ಹೇಳಿದರು. ನಾವು ಬೇರೆ ಆಪ್ಷನ್ ಇಲ್ಲದೆ ಹಣ ನೀಡಬೇಕಾಯಿತು. ನಮ್ಮ ಸಿನಿಮಾವನ್ನು ಅಧಿಕಾರಿಗಳು ನೋಡಲು ಮೂರು ಲಕ್ಷ, ಪ್ರಮಾಣ ಪತ್ರ ನೀಡಲು 3.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು. ನಮ್ಮ ತಂಡದ ವ್ಯಕ್ತಿ ಅವರ ಬೇಡಿಕೆಯಂತೆ ಹಣವನ್ನು ಅವರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ಆ ಬಳಿಕವೇ ನಮಗೆ ಪ್ರಮಾಣ ಪತ್ರ ಸಿಕ್ಕಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ನಟ ವಿಶಾಲ್ ಅವರು, ತಾವು ಹಣ ಕಳಿಸಿದ ಎರಡು ಬ್ಯಾಂಕ್ ಖಾತೆಗಳ ವಿವರವನ್ನೂ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ತಡವಾಗಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ 6.50 ಲಕ್ಷ ಹಣ ನೀಡಬೇಕಾಗುತ್ತದೆ. 15 ದಿನಕ್ಕೆ ಮುಂಚೆ ಸಲ್ಲಿಸಿದ್ದರೆ 4 ಲಕ್ಷದಲ್ಲಿ ಕೆಲಸ ಮುಗಿದು ಹೋಗುತ್ತಿತ್ತು’ ಎಂದು ಆ ಅಧಿಕಾರಿ ನಮಗೆ ಹೇಳಿದರು. ಅವರೊಟ್ಟಿಗೆ ಮಾತನಾಡಿದ ಸಂಭಾಷಣೆಯ ರೆಕಾರ್ಡ್ ಸಹ ನಮ್ಮ ಬಳಿ ಇದೆ. ನನ್ನಂಥಹಾ ಜನಪ್ರಿಯ ನಟನ ಸಿನಿಮಾಕ್ಕೆ ಹೀಗಾಗುತ್ತದೆ ಎಂದಾದರೆ ಸಣ್ಣ-ಪುಟ್ಟ ಸಿನಿಮಾಗಳ ಕತೆ ಏನು? ನನ್ನ ವೃತ್ತಿ ಜೀವನದಲ್ಲಿಯೇ ನಾನು ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದು ರಕ್ಷಣಾ ವೇದಿಕೆ ಆಕ್ರೋಶ: ಕನ್ನಡಿಗರ ಪರವಾಗಿ ಕ್ಷಮೆ ಕೋರಿದ ಪ್ರಕಾಶ್ ರಾಜ್
ಮಹಾರಾಷ್ಟ್ರ ಸಿಎಂ ಹಾಗೂ ಪ್ರಧಾನ ಮಂತ್ರಿಗಳಾದ ಮೋದಿಯವರು ದಯವಿಟ್ಟು, ಈ ವಿಷಯದ ಕಡೆಗೆ ಗಮನ ಹರಿಸಬೇಕು. ಸಿನಿಮಾದಲ್ಲಿ ಭ್ರಷ್ಟಾಚಾರ ತೋರಿಸುವುದು ಓಕೆ, ಆದರೆ, ನಿಜ ಜೀವನದಲ್ಲಿ ಸಿನಿಮಾದವರಿಗೆ ಭ್ರಷ್ಟಾಚಾರ ಎದುರಾದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ಸೂಕ್ತ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ. ನನ್ನ ಬಳಿ ಸಾಕ್ಷ್ಯಗಳಿದ್ದು, ಅವುಗಳನ್ನು ನೀಡಲು ನಾನು ಸಿದ್ಧನಾಗಿದ್ದೇನೆ ಎಂದಿದ್ದಾರೆ.