ರಶ್ಮಿಕಾ-ರಕ್ಷಿತ್ ಬ್ರೇಕಪ್ ಸುದ್ದಿ: ರಕ್ಷಿತ್ ಪರ ಕಿಚ್ಚ ಸುದೀಪ್ ಹೇಳಿದ್ದೇನು!
Published: 12 Sep 2018 04:05 PM IST
ಬೆಂಗಳೂರು: ಸ್ಯಾಂಡಲ್ವುಡ್ ನ ಕಿರಿಕ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಕುರಿತಂತೆ ರಕ್ಷಿತ್ ಶೆಟ್ಟಿ ನಿನ್ನೆ ಸ್ಪಷ್ಟನೆ ನೀಡಿದ್ದು ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ರಕ್ಷಿತ್ ಪರ ಬ್ಯಾಟ್ ಬೀಸಿದ್ದಾರೆ.
ಕಪೋಲಕಲ್ಪಿತ ಸುದ್ದಿಗಳಿಂದ ರಶ್ಮಿಕಾ ಮಂದಣ್ಣ ಅವರನ್ನು ದೂಷಿಸಬೇಡಿ ಎಂದು ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಇದರ ಬಗ್ಗೆ ಇಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ರಕ್ಷಿತ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಜೀವನದಲ್ಲಿ ಒಳ್ಳೆಯದಾಗಲಿ ಅಂತ ಶುಭ ಹಾರೈಸಿದರು.
That’s dignity n maturity Rakshith 👏🏼. Stay blessed my friend.
.....................Public personalities dsnt mean emotions need to be public too isn’t it?? Everyone deserves a bit of space my frnzz,,n it isn’t too mch one can ask for. 🤗🤗 https://t.co/YmnYEjVb7o— Kichcha Sudeepa (@KicchaSudeep) September 12, 2018
ರಕ್ಷಿತ್ ನೀವು ಘನತೆ ಹಾಗೂ ಪ್ರಬುದ್ಧವಾಗಿಯೇ ಮಾತನಾಡಿದ್ದೀರಿ. ಖುಷಿಯಾಗಿರಿ ನನ್ನ ಗೆಳೆಯ. ಸೆಲೆಬ್ರಿಟಿಗಳು ಅಂತ ತಕ್ಷಣ ತಮ್ಮೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ. ಎಲ್ಲದಕ್ಕೂ ಸಮಯ ಕೂಡಿಬರಬೇಕು. ಹೀಗಾಗಿ ಈ ಬಗ್ಗೆ ಮತ್ತೆ ಯಾರೂ ಏನು ಕೇಳಬೇಕಾಗಿಲ್ಲ ಅಂತ ಸುದೀಪ್ ಬರೆದುಕೊಂಡಿದ್ದಾರೆ.
ನಿನ್ನೆ ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಅವರು, "ಬೇರೆ ವಿಷಯಗಳ ಕುರಿತು ಗಮನ ಹರಿಸಬೇಕಿರುವುದರಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಹೇಳಿದೆ. ಆದರೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಸುದ್ದಿಗಳು ನಾನು ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬರಬೇಕಾಯಿತು" ಎಂದಿದ್ದರು.
ರಶ್ಮಿಕಾ ಅವರ ಬಗ್ಗೆ ಈಗಾಗಲೇ ನಿರ್ದಿಷ್ಟ ಅಭಿಪ್ರಾಯ ರೂಪುಗೊಂಡಿದೆ. ಅಭಿಪ್ರಾಯ ರೂಪುಗೊಳ್ಳುವ ರೀತಿಯಲ್ಲೇ ಕೆಲವೊಂದು ಸಂಗತಿಗಳನ್ನು ತೋರಿಸಲಾಗಿದೆ. ಆದ್ದರಿಂದ ನಾನು ಯಾರನ್ನೂ ಸಹ ದೂಷಿಸುವುದಿಲ್ಲ. ನಾವು ನೋಡಿದ್ದನ್ನೇ, ಕೇಳಿದ್ದನ್ನೇ ನಿಜ ಎಂದು ನಂಬುತ್ತೇವೆ. ಆದರೆ ಅದೇ ಸತ್ಯ ಆಗಿರಬೇಕೆಂದೇನು ಇಲ್ಲ. ಮತ್ತೊಂದು ದೃಷ್ಟಿಕೋನದಿಂದ ಯೋಚನೆ ಮಾಡದೇಯೇ ನಾವು ನಿರ್ಧಾರಕ್ಕೆ ಬಂದು ಬಿಡುತ್ತೇವೆ.
ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡಿದ್ದೇನೆ, ಅವರೇನೆಂದು ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು. ದಯವಿಟ್ಟು ಅವರ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ನಿಜ ಎಂದು ನಂಬಬೇಡಿ. ಅವರನ್ನು ಶಾಂತಿ ಇಂದ ಇರಲು ಬಿಡಿ. ಶೀಘ್ರವೇ ಈ ಎಲ್ಲ ಗೊಂದಲಗಳೂ ಕೊನೆಯಾಗಲಿವೆ, ನಿಜ ಏನೆಂದು ತಿಳಿಯಲಿದೆ, ಮಾಧ್ಯಮಗಳಲ್ಲಿನ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬೇಡಿ" ಎಂದು ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
Posted by: VS | Source: Online Desk