ಕಪೋಲಕಲ್ಪಿತ ಸುದ್ದಿಗಳು ನಿಜವಲ್ಲ: ರಕ್ಷಿತ್ ಶೆಟ್ಟಿ ಸ್ಪಷ್ಟನೆ

Published: 11 Sep 2018 06:00 PM IST | Updated: 11 Sep 2018 06:18 PM IST
ರಕ್ಷಿತ್ ಶೆಟ್ಟಿ
ರಕ್ಷಿತ್-ರಶ್ಮಿಕಾ ಜೋಡಿ ನಿಶ್ಚಿತಾರ್ಥ ಮುರಿದು ಬಿದ್ದಿದೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಸ್ಪಷ್ಟನೆ ನೀಡಿರುವ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ಸಹ ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. 

ನಿಶ್ಚಿತಾರ್ಥ ಮುರಿದುಬಿದ್ದಿರುವುದಕ್ಕೆ ಸಂಬಂಧಿಸಿದಂತೆ ಹಬ್ಬಿರುವ ಸುದ್ದಿಗಳ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, " ಬೇರೆ ವಿಷಯಗಳ ಕುರಿತು ಗಮನ ಹರಿಸಬೇಕಿರುವುದರಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಹೇಳಿದೆ. ಆದರೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಸುದ್ದಿಗಳು ನಾನು ಸಾಮಾಜಿಕ ಜಾಲತಾಣಕ್ಕೆ ಮತ್ತೆ ಬರಬೇಕಾಯಿತು" ಎಂದಿದ್ದಾರೆ. 

ರಶ್ಮಿಕಾ  ಅವರ ಬಗ್ಗೆ ಈಗಾಗಲೇ ನಿರ್ದಿಷ್ಟ ಅಭಿಪ್ರಾಯ ರೂಪುಗೊಂಡಿದೆ. ಅಭಿಪ್ರಾಯ ರೂಪುಗೊಳ್ಳುವ ರೀತಿಯಲ್ಲೇ ಕೆಲವೊಂದು ಸಂಗತಿಗಳನ್ನು ತೋರಿಸಲಾಗಿದೆ. ಆದ್ದರಿಂದ  ನಾನು ಯಾರನ್ನೂ ಸಹ ದೂಷಿಸುವುದಿಲ್ಲ. ನಾವು ನೋಡಿದ್ದನ್ನೇ, ಕೇಳಿದ್ದನ್ನೇ ನಿಜ ಎಂದು ನಂಬುತ್ತೇವೆ. ಆದರೆ ಅದೇ ಸತ್ಯ ಆಗಿರಬೇಕೆಂದೇನು ಇಲ್ಲ. ಮತ್ತೊಂದು ದೃಷ್ಟಿಕೋನದಿಂದ ಯೋಚನೆ ಮಾಡದೇಯೇ ನಾವು ನಿರ್ಧಾರಕ್ಕೆ ಬಂದುಬಿಡುತ್ತೇವೆ. ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡಿದ್ದೇನೆ, ಅವರೇನೆಂದು ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತು. ದಯವಿಟ್ಟು ಅವರ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ನಿಜ ಎಂದು ನಂಬಬೇಡಿ. ಅವರನ್ನು ಶಾಂತಿ ಇಂದ ಇರಲು ಬಿಡಿ. ಶೀಘ್ರವೇ ಈ ಎಲ್ಲ ಗೊಂದಲಗಳೂ ಕೊನೆಯಾಗಲಿವೆ, ನಿಜ ಏನೆಂದು ತಿಳಿಯಲಿದೆ, ಮಾಧ್ಯಮಗಳಲ್ಲಿನ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬೇಡಿ" ಎಂದು ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 
Posted by: SBV | Source: Online Desk

ಈ ವಿಭಾಗದ ಇತರ ಸುದ್ದಿ